ವೀಡಿಯೊ…| ಚಲಿಸುತ್ತಿದ್ದ ಬೊಲೆರೊ ಕಾರಿನ ಮೇಲೆ ಉರುಳಿ ಬಿದ್ದ ಲಾರಿ; ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರ ಪ್ರದೇಶದ ರಾಂಪುರದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಹೊಟ್ಟು ತುಂಬಿದ್ದ ಲಾರಿಯೊಂದು ಚಲಿಸುತ್ತಿದ್ದ ಬೊಲೆರೊ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈ ಭೀಕರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭಾನುವಾರ ಸಂಜೆ ರಾಂಪುರ-ನೈನಿತಾಲ್ ಹೆದ್ದಾರಿಯ ಜನನಿಬಿಡ ಪಹಡಿ ಗೇಟ್ ಜಂಕ್ಷನ್‌ನಲ್ಲಿ ಈ ಅಪಘಾತ ನಡೆದಿದೆ. ಹೆದ್ದಾರಿಯ ತಿರುವಿನಲ್ಲಿ ಬೊಲೆರೊ ಕಾರು ತಿರುಗಲು ಪ್ರಯತ್ನಿಸುತ್ತಿದ್ದಾಗ, ಹಿಂದಿನಿಂದ ಬರುತ್ತಿದ್ದ ಲಾರಿಯು ಡಿಕ್ಕಿಯನ್ನು ತಪ್ಪಿಸಲು ಸಡನ್ ಆಗಿ ತಿರುಗಿಸಿದೆ. ಈ ವೇಳೆ ಲಾರಿಯ ಚಕ್ರವು ರಸ್ತೆ ವಿಭಜಕವನ್ನು (ಡಿವೈಡರ್) ಏರಿದ್ದರಿಂದ ಸಮತೋಲನ ತಪ್ಪಿದ ಲಾರಿ ನೇರವಾಗಿ ಬೊಲೆರೊ ಕಾರಿನ ಮೇಲೆಯೇ ಉರುಳಿದೆ. ಲಾರಿಯ ಅಡಿಯಲ್ಲಿ ಸಿಲುಕಿದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ವರದಿಗಳ ಪ್ರಕಾರ, ಈ ಬೊಲೆರೊ ಕಾರು ವಿದ್ಯುತ್ ಇಲಾಖೆಯ ಉಪ ವಿಭಾಗೀಯ ಅಧಿಕಾರಿ (SDO) ಅವರಿಗೆ ಸೇರಿದ್ದಾಗಿದೆ. ಘಟನೆಯ ಸಮಯದಲ್ಲಿ ಎಸ್‌ಡಿಒ ಅವರು ಕಾರಿನಲ್ಲಿ ಇರಲಿಲ್ಲ. ಚಾಲಕ ಅವರನ್ನು ಸಬ್‌ಸ್ಟೇಷನ್‌ಗೆ ಬಿಟ್ಟು ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಚಾಲಕ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಮೂರು ಸ್ಥಳೀಯ ಪೊಲೀಸ್ ಠಾಣೆಗಳ ತಂಡಗಳು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದವು. ಕ್ರೇನ್ ನೆರವಿನಿಂದ ಲಾರಿಯನ್ನು ಎತ್ತಿ, ನಜ್ಜುಗುಜ್ಜಾಗಿದ್ದ ಕಾರಿನಿಂದ ಚಾಲಕನ ಮೃತದೇಹವನ್ನು ಹೊರತೆಗೆಯಲಾಯಿತು. ಈ ಕಾರ್ಯಾಚರಣೆಯಿಂದಾಗಿ ರಾಂಪುರ-ನೈನಿತಾಲ್ ಹೆದ್ದಾರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement