ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ನಲ್ಲಿ ಬರುವ ಎಲ್ಲ ವಿಚಾರಗಳು ಕಟ್ಟುಕಥೆ ಎಂದು ಪ್ರಕರಣ ತನಿಖೆ ನಡೆಸಿದ ಸಿಸಿಬಿ ಗುರುವಾರ ಹೇಳಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಗುರುವಾರ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಬೆಂಗಳೂರು ನಗರ ಪೊಲೀಸ್ ವಿಶೇಷ ವಿಭಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸ್ಟಿಂಗ್ ವಿಡಿಯೊದಲ್ಲಿ ಬಿಂಬಿಸಲಾಗಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆಯಂತೆ ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ಹೇಳಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳ ಹೆಸರಿಗೆ ಮಸಿ ಬಳಿಯಲು ಸಂಘಟಿತ ಪ್ರಯತ್ನ ನಡೆದಿರುವ ಸಾಧ್ಯತೆಯನ್ನು ಸೂಚಿಸುವ ಹಲವು ಸುಳಿವುಗಳು ತನಿಖೆಯಲ್ಲಿ ಲಭ್ಯವಾಗಿವೆ ಎಂದೂ ಸಿಸಿಬಿ ತಿಳಿಸಿದೆ.
ತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿರುವ ಪೊಲೀಸರು, ಈವರೆಗೆ ದಾಖಲಿಸಿಕೊಂಡಿರುವ ಹೇಳಿಕೆಗಳು ಹಾಗೂ ಸಂಗ್ರಹಿಸಿರುವ ಸಾಕ್ಷ್ಯಗಳು ವಿಡಿಯೊದಲ್ಲಿ ಬಿಂಬಿಸಿರುವ ರೀತಿಯಲ್ಲಿ ಯಾವುದೇ ಘಟನೆ ನಡೆದಿರುವುದನ್ನು ದೃಢಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಎಲ್ಲ ವ್ಯಕ್ತಿಗಳನ್ನು ಗುರುತಿಸಿ ವಿಚಾರಣೆ ನಡೆಸಲಾಗಿದೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ವಿಡಿಯೊದಲ್ಲಿ ಉಲ್ಲೇಖಿಸಿರುವ ಅಥವಾ ಅದರ ಮೂಲಕ ಆರೋಪ ಮಾಡಲಾಗಿರುವ ವ್ಯಕ್ತಿಗಳ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸುಳ್ಳು ಮತ್ತು ಕಟ್ಟುಕಥೆಯಾಗಿರುವಂತೆ ಕಂಡುಬರುತ್ತಿವೆ ಎಂದು ತಿಳಿಸಿರುವ ಪೊಲೀಸರು ಆದಾಗ್ಯೂ, ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ ಎಂದು ಹೇಳಿದ್ದಾರೆ.
ವಿಡಿಯೊ ಚಿತ್ರೀಕರಿಸಿದ ಮೂಲ ಮೊಬೈಲ್ ವಶಕ್ಕೆ
ವಿಡಿಯೊವನ್ನು ಚಿತ್ರೀಕರಿಸಲು ಬಳಸಲಾಗಿದೆ ಎನ್ನಲಾದ ಮೂಲ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ವಿಡಿಯೊದ ನೈಜತೆ ಹಾಗೂ ಅದರ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಪೊಲೀಸರ ಪ್ರಕಾರ, ಈ ವಿಡಿಯೊವನ್ನು 2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿದಂತೆ 2023ರಲ್ಲಿ ಚಿತ್ರೀಕರಿಸಲಾಗಿದೆ. ಅಂದರೆ, ಆರೋಪಿತ ಘಟನೆ ನಡೆದಿತ್ತೆಂದು ಹೇಳಲಾಗಿರುವ ಸುಮಾರು 12 ವರ್ಷಗಳ ಬಳಿಕ ವಿಡಿಯೊ ಚಿತ್ರೀಕರಿಸಿರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ. ಇಷ್ಟು ದೀರ್ಘ ಅವಧಿಯ ನಂತರ ವಿಡಿಯೊ ಚಿತ್ರೀಕರಿಸಲು ಕಾರಣವೇನು? ಘಟನೆಯ ನಿರೂಪಣೆಯನ್ನು ತಪ್ಪುದಾರಿಗೆಳೆಯುವ ಉದ್ದೇಶದಿಂದ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ಸಿದ್ಧಪಡಿಸಲಾಗಿದೆಯೇ? ಅದನ್ನು ಕಟ್ಟುಕಥೆಯಾಗಿ ಸೃಷ್ಟಿಸಲಾಗಿದೆಯೇ ಅಥವಾ ತಿರುಚಲಾಗಿದೆಯೇ? ಇದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಾಮಧೇಯ ಖಾತೆಗಳಿಂದ ಅಪ್‌ಲೋಡ್
2026ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಈ ವಿಡಿಯೊವನ್ನು ಯೂಟ್ಯೂಬ್ ಹಾಗೂ ಎಕ್ಸ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ವಿಡಿಯೊವನ್ನು ಅಪ್‌ಲೋಡ್ ಮಾಡಲು ಅನಾಮಧೇಯ ಖಾತೆಗಳನ್ನು ಬಳಸಲಾಗಿದೆ. ತಮ್ಮ ಗುರುತು ಹಾಗೂ ಡಿಜಿಟಲ್ ಚಟುವಟಿಕೆಗಳ ಮೂಲವನ್ನು ಮರೆಮಾಚಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್), ಮರೆಮಾಚಿದ ಐಪಿ ವಿಳಾಸಗಳು, ವರ್ಚುವಲ್ ಹಾಗೂ ನಕಲಿ ಫೋನ್ ಸಂಖ್ಯೆಗಳು ಮತ್ತು ಇತರ ಅನಾಮಧೇಯ ತಂತ್ರಗಳನ್ನು ಬಳಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದಲ್ಲದೆ, ಕರ್ನಾಟಕದ ಹೊರಗಿನ ಸ್ಥಳಗಳಿಗೆ ಸಂಬಂಧಿಸಿದ ಡಿಜಿಟಲ್ ಸುಳಿವುಗಳೂ ತನಿಖಾಧಿಕಾರಿಗಳಿಗೆ ಲಭ್ಯವಾಗಿವೆ. ತಾಂತ್ರಿಕ ವಿಶ್ಲೇಷಣೆ ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಪರಿಶೀಲನೆಯ ಮೂಲಕ ಯೂಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಲು ಸಂಬಂಧಿಸಿದ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಲಾಗಿದೆ. ಈ ಫೋನ್ ದೆಹಲಿಯಲ್ಲಿರುವ ಹಳೆಯ ಹಾಗೂ ಮರುನವೀಕರಿಸಿದ ಮೊಬೈಲ್ ಫೋನ್‌ಗಳ ಮಾರಾಟದ ಅಂಗಡಿಯೊಂದಕ್ಕೆ ಸಂಬಂಧಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಮೊಬೈಲ್ ಫೋನ್ ಖರೀದಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನೂ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯಲ್ಲಿ ಆರೋಪಿ ಬಂಧನ
ಮೊಬೈಲ್ ಫೋನ್ ಖರೀದಿಗೆ ಸಂಬಂಧಿಸಿದ ಪ್ರಕರಣದ ಆರೋಪಿಗಳಲ್ಲೊಬ್ಬನನ್ನು 2026ರ ಅಕ್ಟೋಬರ್ 24ರಂದು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ಸುಳಿವುಗಳು ಲಭ್ಯವಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ವ್ಯಕ್ತಿ ಸ್ವತಂತ್ರ ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿರುವಂತೆ ಕಂಡುಬಂದಿದೆ.
ತನಿಖೆಯಲ್ಲಿ ಲಭ್ಯವಾಗಿರುವ ಸುಳಿವುಗಳು, ಕರ್ನಾಟಕದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳ ಹೆಸರಿಗೆ ಮಸಿ ಬಳಿಯಲು ಮತ್ತು ಅವರ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಉದ್ದೇಶಪೂರ್ವಕವಾಗಿ ಈ ವಿಡಿಯೊವನ್ನು ಹರಿಬಿಟ್ಟಿರುವ ಸಾಧ್ಯತೆಯನ್ನು ಸೂಚಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಬೇಕಾದ ಕೆಲವು ವ್ಯಕ್ತಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅವರಿಗೆ ಕಾನೂನುಬದ್ಧವಾಗಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ತನಿಖೆಯ ಸಮಗ್ರತೆಯನ್ನು ಕಾಪಾಡುವುದು, ಸಾಕ್ಷ್ಯಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದನ್ನು ತಡೆಯುವುದು ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿರುವುದರಿಂದ, ಈ ಹಂತದಲ್ಲಿ ನೋಟಿಸ್ ಪಡೆದ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ