ಗೋವಾ ನೈಟ್‌ ಕ್ಲಬ್ ದುರಂತ: ಮಾಲೀಕ ಅಜಯ ಗುಪ್ತಾ ದೆಹಲಿಯಲ್ಲಿ ವಶಕ್ಕೆ

ನವದೆಹಲಿ:ಉತ್ತರ ಗೋವಾದ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ ಗುಪ್ತಾ ಅವರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ. ನೈಟ್‌ಕ್ಲಬ್‌ಗೆ ಸಂಬಂಧಿಸಿದ ಕಾರ್ಯಾಚರಣೆಯ ಜವಾಬ್ದಾರಿಗಳಿಂದ ದೂರವಿರುವ ಗುಪ್ತಾ, ಘಟನೆಯಲ್ಲಿ ತಮ್ಮ ಪಾತ್ರ ಸೀಮಿತವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
“ನಾನು ಕೇವಲ ಪಾಲುದಾರನಾಗಿದ್ದೆ, ನನಗೆ ಬೇರೇನೂ ತಿಳಿದಿಲ್ಲ,” ಎಂದು ಗುಪ್ತಾ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಕಳೆದ ಶನಿವಾರ ರಾತ್ರಿ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅವರನ್ನು ಬುಧವಾರ ಗೋವಾಕ್ಕೆ ಕರೆದೊಯ್ಯಲಾಗುತ್ತಿದೆ.

ಗೋವಾ ಪೊಲೀಸರ ತಂಡ ಗುಪ್ತಾ ಅವರನ್ನು ದೆಹಲಿಯ ನಿವಾಸದಲ್ಲಿ ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ಈ ಹಿಂದೆ ಅವರ ವಿರುದ್ಧ ಲುಕ್ ಔಟ್ ಸುತ್ತೋಲೆ (Look Out Circular) ಹೊರಡಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ನಂತರ ನಾವು ಅವರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲು ಯಶಸ್ವಿಯಾದೆವು. ಗೋವಾಕ್ಕೆ ಕರೆದೊಯ್ಯುವ ಮೊದಲು ಗುಪ್ತಾ ಅವರನ್ನು ಔಪಚಾರಿಕವಾಗಿ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 6 ರ ದುರಂತದ ನಂತರ, ನೈಟ್‌ಕ್ಲಬ್‌ನ ಮಾಲೀಕತ್ವ ಮತ್ತು ನಿರ್ವಹಣಾ ರಚನೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಣೆಗಾರಿಕೆಯನ್ನು ನಿರ್ಧರಿಸಲು ಗುಪ್ತಾ ಅವರ ವಿಚಾರಣೆ ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಗೋವಾ ನೈಟ್‌ಕ್ಲಬ್ ಬೆಂಕಿ ದುರಂತ
ಉತ್ತರ ಗೋವಾದ ಆರ್ಪೋರಾದಲ್ಲಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನಲ್ಲಿ ಮಧ್ಯರಾತ್ರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 25 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆಯು ಮನರಂಜನಾ ಸ್ಥಳಗಳಲ್ಲಿನ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಪರಿಶೀಲನೆಗೆ ಕಾರಣವಾಗಿದೆ.
ಏತನ್ಮಧ್ಯೆ, ನೈಟ್‌ಕ್ಲಬ್‌ನ ಇಬ್ಬರು ಮುಖ್ಯ ಮಾಲೀಕರಾದ ಸೌರಭ ಮತ್ತು ಗೌರವ ಲೂತ್ರಾ ಅವರು ಥೈಲ್ಯಾಂಡ್‌ನ ಫುಕೆಟ್‌ಗೆ ಪರಾರಿಯಾಗಿದ್ದಾರೆ. ಅವರನ್ನು ಹುಡುಕಲು ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದು, ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೂ ಹುಡುಕಾಟದಲ್ಲಿ ತೊಡಗಿವೆ.
ನೈಟ್‌ಕ್ಲಬ್‌ನ ಸಹ-ಮಾಲೀಕರೂ ಆಗಿರುವ ಬ್ರಿಟಿಷ್ ಪ್ರಜೆ ಸುರಿಂದರಕುಮಾರ ಖೋಸ್ಲಾ ಅವರ ವಿರುದ್ಧವೂ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement