ಕಾರು ಚಲಾಯಿಸಲಿಕ್ಕೂ ಹೆಲ್ಮೆಟ್ ಕಡ್ಡಾಯವೇ? ‘ಹೆಲ್ಮೆಟ್ ಹಾಕಿಲ್ಲ’ವೆಂದು ಕಾರು ಮಾಲೀಕನಿಗೆ ₹500 ದಂಡ….!

ಬೆಳಗಾವಿ : ಅಸಾಮಾನ್ಯ ವಿದ್ಯಮಾನವೊಂದರಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ‘ಹೆಲ್ಮೆಟ್ ಧರಿಸಿಲ್ಲ’ ಎಂಬ ಕಾರಣ ನೀಡಿ ₹500 ದಂಡದ ಚಲನ್ (Challan) ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅಥಣಿ ನಿವಾಸಿ ಸುಭಾಷ ಬೋಜಾನೆ ಎಮಬವರಿಗೆ ಈ ದಂಡದ ನೋಟಿಸ್ ಬಂದಿದ್ದು, ಅಂಬೇಡ್ಕರ್ ವೃತ್ತದ ಸಮೀಪ ಅಳವಡಿಸಲಾಗಿರುವ ಎಐ ಕ್ಯಾಮೆರಾದಲ್ಲಿ ಅವರ ಕಾರು ರೆಕಾರ್ಡ್‌ ಆದ ಬಳಿಕ ಈ ಚಲನ್ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ವಾಹನ ಮಾಲೀಕರ ವಾಟ್ಸ್ಆಪ್ ಸಂಖ್ಯೆಗೆ ಕಳುಹಿಸಲಾದ ಸಂಚಾರ ನಿಯಮ ಉಲ್ಲಂಘನೆ ನೋಟಿಸ್‌ನಲ್ಲಿ ಹೆಲ್ಮೆಟ್ ಧರಿಸಿಲ್ಲ (‘No Helmet’) ಎಂಬುದನ್ನು ದಂಡ ವಿಧಿಸಿರುವ ಕಾರಣವಾಗಿ ಉಲ್ಲೇಖಿಸಲಾಗಿತ್ತು.

ಈ ನೋಟಿಸ್‌ ನೋಡಿದ ಸುಭಾಷ ಬೋಜಾನೆ ಅವರು ಅಚ್ಚರಿಗೆ ಒಳಗಾದರು. ಏಕೆಂದರೆ ಅವರು ಕಾರು ಚಲಾಯಿಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ ಎಂಬ ಆರೋಪದಡಿ ದಂಡ ವಿಧಿಸಲಾಗಿತ್ತು. ಸಾಮಾನ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಅನ್ವಯಿಸುವ ಈ ನಿಯಮವನ್ನು ಕಾರು ಚಾಲಕರಿಗೆ ಅನ್ವಯಿಸಿರುವುದು ಎಐ ವ್ಯವಸ್ಥೆಯ ಗಂಭೀರ ಎಡವಟ್ಟೆಂದು ಅವರು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ಟಿ.ನರಸೀಪುರ : ಠಾಣೆ ಮುಂದೆ ಅಹೋರಾತ್ರಿ ಧರಣಿಗೆ ಮುಂದಾದ ಬಿಜೆಪಿ ನಾಯಕರು | ಆರ್‌.ಅಶೋಕ, ಸೇರಿ ಹಲವರು ಪೊಲೀಸರ ವಶಕ್ಕೆ

ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೋಜಾನೆ, ಬಳಿಕ ಕಾರು ಚಲಾಯಿಸುತ್ತಲೇ ಹೆಲ್ಮೆಟ್ ಧರಿಸಿರುವ ತಮ್ಮ ವಿಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. “ಇನ್ನು ಮುಂದೆ ನಾಲ್ಕು ಚಕ್ರದ ವಾಹನ ಚಾಲಕರೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ ಅವರು, ಅಧಿಕಾರಿಗಳ ಗಮನ ಸೆಳೆಯಲು ಈ ವಿಡಿಯೊವನ್ನು ಬಳಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ಈ ವಿಡಿಯೊ ಅಲ್ಪಾವಧಿಯಲ್ಲೇ ವೈರಲ್ ಆಗಿದ್ದು, ಎಐ ಆಧಾರಿತ ಸಂಚಾರ ಮೇಲ್ವಿಚಾರಣಾ ವ್ಯವಸ್ಥೆಗಳ ನಿಖರತೆ ಮತ್ತು ವಿಶ್ವಾಸಾರ್ಹತೆ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement