ಜಶ್ಪುರ: ಛತ್ತೀಸ್‌ಗಢದ ಜಶ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಆನೆ ದಾಳಿಗೆ ಈವರೆಗೆ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. ಬಾಗೀಚಾ ನಗರ ಪಂಚಾಯತ್‌ನ ಗಮ್ಹ್ರಿಯಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಅವರು ತಮ್ಮ ಮನೆಗಳಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ ಎಂದು ಇಲ್ಲಿನ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಡಾನೆ ದಾಳಿಯಿಂದ ಸಾವಿಗೀಡಾದವರನ್ನು ರಾಮಕೇಶ್ವರ ಸೋನಿ (35), ಅವರ ಮಗಳು ರವಿತಾ (9) ಮತ್ತು ಅವರ ಸಹೋದರ ಅಜಯ (25) ಮತ್ತು ಅವರ ನೆರೆಯ ಅಶ್ವಿನ್ ಕುಜೂರ್ (28) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆನೆಯು ಗ್ರಾಮಕ್ಕೆ ನುಗ್ಗಿ ಸೋನಿ ಅವರ ಮನೆಯ ಗೋಡೆಯನ್ನು ಹಾನಿಗೊಳಿಸಿದೆ ಮತ್ತು ಮೂವರನ್ನು ತುಳಿದು ಕೊಂದಿದೆ. ಅವರ ಕಿರುಚಾಟವನ್ನು ಕೇಳಿದ ಕುಜೂರ್ ಅವರು ಸ್ಥಳಕ್ಕೆ ತಲುಪಿದರು, ಆದರೆ ಅವರು ಕೂಡ ಆನಯಿಂದ ಕೊಲ್ಲಲ್ಪಟ್ಟರು ಎಂದು ಅವರು ಹೇಳಿದರು. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು. ಮೃತರ ಕುಟುಂಬಕ್ಕೆ ತಲಾ 25,000 ರೂಪಾಯಿ ತ್ವರಿತ ಪರಿಹಾರ ನೀಡಲಾಗಿದ್ದು, ಅಗತ್ಯ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಉಳಿದ ಪರಿಹಾರವಾಗಿ ತಲಾ 5.75 ಲಕ್ಷ ರೂಪಾಯಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿ ತಂಡಗಳು ಆನೆಯ ಚಲನವಲನದ ಮೇಲೆ ನಿಗಾ ಇರಿಸಿದೆ ಎಂದು ವಿಭಾಗೀಯ ಅರಣ್ಯ ಕಚೇರಿ ಜಶ್ಪುರ ವಿಭಾಗದ ಜಿತೇಂದ್ರ ಉಪಾಧ್ಯಾಯ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದ ಗ್ರಾಮಗಳಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿರುವ ಕಾರಣ ಈ ಆನೆಯನ್ನು ಬೇರೆಡೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿದೆ ಎಂದರು. ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಭಾಗದಲ್ಲಿ ಮಾನವ-ಆನೆ ಸಂಘರ್ಷಗಳು ಕಳೆದ ಒಂದು ದಶಕದಿಂದ ಕಳವಳಕ್ಕೆ ಪ್ರಮುಖ ಕಾರಣವಾಗಿವೆ. ಕಳೆದ ಕೆಲವು ವರ್ಷಗಳಿಂದ, ಈ ಭೀತಿಯು ಮಧ್ಯ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ತನ್ನ ಹೆಜ್ಜೆಗುರುತನ್ನು ಹರಡುತ್ತಿದೆ.
ಮುಖ್ಯವಾಗಿ ಸುರ್ಗುಜಾ, ರಾಯ್‌ಘರ್, ಕೊರ್ಬಾ, ಸೂರಜ್‌ಪುರ, ಮಹಾಸಮುಂಡ್, ಧಮ್ತಾರಿ, ಗರಿಯಾಬಂದ್, ಬಲೋಡ್, ಬಲರಾಮ್‌ಪುರ್ ಮತ್ತು ಕಂಕೇರ್ ಜಿಲ್ಲೆಗಳು ಅಪಾಯವನ್ನು ಎದುರಿಸುತ್ತಿವೆ. ಅರಣ್ಯ ಇಲಾಖೆ ಪ್ರಕಾರ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆನೆ ದಾಳಿಗೆ ಸುಮಾರು 310 ಮಂದಿ ಸಾವಿಗೀಡಾಗಿದ್ದಾರೆ. ಗುರುವಾರ, ರಾಜ್ಯದ ಕೊರ್ಬಾ ಜಿಲ್ಲೆಯ ಎರಡು ಸ್ಥಳಗಳಲ್ಲಿ ಆನೆಯಿಂದ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ