ಕೊಲೆ ಪ್ರಕರಣದಿಂದ ಪಾರಾಗಲು ಎಐ ಬಳಸಿ ತನ್ನದೇ ಸಾವಿನ ನಾಟಕ ; ಮೇಕೆ ಅಂತ್ಯಕ್ರಿಯೆ, ನಕಲಿ ಡೆತ್‌ ಸರ್ಟಿಫಿಕೆಟ್‌ ಸಲ್ಲಿಕೆ ; ಆದ್ರೂ ಸಿಕ್ಕಿಬಿದ್ದ !

ಮೌ : ಕೊಲೆ ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ತನ್ನದೇ ಸಾವಿನ ನಾಟಕವಾಡಿದ್ದಾನೆ. ಶವಸಂಸ್ಕಾರದ ಚಿತೆಯ ಮೇಲೆ ಮಲಗಿರುವ ಮೃತದೇಹದಂತೆ ಕಾಣುವ ಚಿತ್ರವನ್ನು ಎಐ ಮೂಲಕ ಸೃಷ್ಟಿಸಿ, ನಿಜವಾದ ಶವದ ಬದಲಿಗೆ ಮೇಕೆಯನ್ನು ಸುಟ್ಟು, ಮರಣ ಪ್ರಮಾಣಪತ್ರವನ್ನೂ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ. ಆದರೆ, ಸತ್ತಿದ್ದಾನೆಂದು ನಂಬಿಸಿ ಕಾನೂನಿನ ಕಣ್ಣಿಗೆ ಮಣ್ಣೆರಚಿದ್ದ ಆರೋಪಿಯ ನಾಟಕ ಕೊನೆಗೂ ಬಯಲಾಗಿದ್ದು, ಉತ್ತರ ಪ್ರದೇಶದ ಮೌ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತ 38 ವರ್ಷದ ರಾಜಕುಮಾರ ರಾಜಭರ, 2016ರಲ್ಲಿ ನಡೆದ ಯೋಗೇಶ ಸಿಂಗ್ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ. ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ತನ್ನ ಸಾವಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ತಾನು ಬದುಕಿಲ್ಲ ಎಂಬಂತೆ ಬಿಂಬಿಸಿಕೊಂಡು ಕಾನೂನು ಕ್ರಮದಿಂದ ಪಾರಾಗಲು ಯತ್ನಿಸಿದ್ದ. ಈ ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯದಂತೆ ಮಾಡಿದ್ದಲ್ಲದೆ, ಸುಮಾರು ಒಂದೂವರೆ ವರ್ಷದಿಂದ ಮುಕ್ತವಾಗಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 25ರ ಭಾನುವಾರ ಬೆಳಗ್ಗೆ ಸುಮಾರು 9 ಗಂಟೆಗೆ, ಮೌ ನಗರದ ಖ್ವಾಜಾಜಹಾನ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದ ರಾಜಭರನನ್ನು ಕೊತ್ವಾಲಿ ನಗರ ಪೊಲೀಸರು, ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಮತ್ತು ಕಣ್ಗಾವಲು ತಂಡದ ನೆರವಿನೊಂದಿಗೆ ಬಂಧಿಸಿದ್ದಾರೆ. ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬನ ಕೊಲೆಯಾದ ಪ್ರಕರಣದಲ್ಲಿ ಆತ ಜಾಮೀನಿನ ಮೇಲೆ ಹೊರಗಿದ್ದ.

ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಂತ್ರ
ಮೌ ಜಿಲ್ಲೆಯ ಮುನ್ಷಿಪುರಾ ರೈಲು ಮಾರ್ಗದ ಸಮೀಪ 2016ರ ಡಿಸೆಂಬರ್ 19ರಂದು ಯೋಗೇಶ ಸಿಂಗ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಮೃತರ ಸಂಬಂಧಿ ನೀಡಿದ ದೂರಿನ ಆಧಾರದ ಮೇಲೆ ರಾಜಕುಮಾರ ರಾಜಭರ ಮತ್ತು ಆತನ ಸ್ನೇಹಿತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಈತ ಜಾಮೀನಿನ ಮೇಲೆ ಹೊರಗಿದ್ದ.
ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆತ ತಾನು ಮೃತಪಟ್ಟಿರುವಂತೆ ತನ್ನ ಸಾವಿನ ಕಥೆಯನ್ನು ತಾನೇ ಹೆಣೆದಿದ್ದಾನೆ. 2025ರ ಮೇ 30ರಂದು ಗಾಜಿಪುರದಲ್ಲಿ ತನ್ನ ಸಾವಿನ ನಾಟಕಕ್ಕೆ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಸಿದ್ಧಪಡಿಸಿದ ಚಿತೆಯ ಮೇಲೆ ಮೃತದೇಹವೊಂದು ಮಲಗಿರುವಂತೆ ಕಾಣುವ ಚಿತ್ರವನ್ನು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿತ್ತು. ಬಳಿಕ ನಿಜವಾದ ಮೃತದೇಹದ ಬದಲಿಗೆ ಮೇಕೆಯೊಂದನ್ನು ಸುಡಲಾಗಿತ್ತು. ಅಂತ್ಯಕ್ರಿಯೆ ನಡೆದಿರುವುದನ್ನು ನೈಜವೆಂದು ನಂಬಿಸುವ ಸಲುವಾಗಿ ಅಂತಿಮಯಾತ್ರೆ ಮತ್ತು ಅಂತ್ಯಸಂಸ್ಕಾರದ ಛಾಯಾಚಿತ್ರಗಳನ್ನೂ ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಛಾಯಾಚಿತ್ರಗಳು ಹಾಗೂ ಇತರ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಮರಣ ಪ್ರಮಾಣಪತ್ರವನ್ನೂ ಪಡೆಯಲಾಗಿತ್ತು. ಬಳಿಕ ಈ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ತಾನು ಮೃತಪಟ್ಟಿರುವುದರಿಂದ ತನ್ನ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ಸ್ಥಿತಿಯನ್ನು ಸೃಷ್ಟಿಸಲು ರಾಜಭರ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಚಿಕ್ಕಪ್ಪನ ಮನೆಯಿಂದ 150 ಗ್ರಾಂ ಚಿನ್ನ ಕದ್ದು ₹10 ಲಕ್ಷಕ್ಕೆ ಮಾರಿ ಥಾರ್ ಖರೀದಿಸಿದ ಯುವಕ ; ಹೊಸ ವಾಹನದ ಪೂಜೆಗೆ ಚಿಕ್ಕಪ್ಪನನ್ನೇ ಕರೆದ !

ಹಣ ಹೂಡಿಕೆ ಹೆಸರಿನಲ್ಲಿ ಹಲವರಿಂದ ಹಣ ಸಂಗ್ರಹ
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಈತ 12ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಿಲ್ಲ. ಆದರೂ ಷೇರುಪೇಟೆ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ ಆತ, ವಿವಿಧ ನಗರಗಳಲ್ಲಿನ ಹಲವು ಪ್ರಮುಖ ವ್ಯಕ್ತಿಗಳಿಂದ ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡುವುದಾಗಿ ಹೇಳಿ ಹಣ ಸಂಗ್ರಹಿಸಿದ್ದ.
ಈ ಹಣವನ್ನು ಮರಳಿಕೊಡುವುದುನ್ನು ತಪ್ಪಿಸಿಕೊಳ್ಳುವುದೂ ಈ ಸಾವಿನ ನಾಟಕದ ಹಿಂದಿನ ಉದ್ದೇಶಗಳಲ್ಲಿ ಒಂದಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಪ್ರಕರಣದ ಕಾನೂನು ಕ್ರಮದಿಂದ ಪಾರಾಗುವುದರ ಜತೆಗೆ, ಹಣ ನೀಡಿದವರಿಗೆ ಮರುಪಾವತಿ ಮಾಡಬೇಕಾದ ಜವಾಬ್ದಾರಿಯನ್ನೂ ತಪ್ಪಿಸಿಕೊಳ್ಳಲು ಆತ ಈ ಸಂಚು ರೂಪಿಸಿದ್ದ ಎನ್ನಲಾಗಿದೆ.
ಮತ್ತೊಂದು ಪ್ರಕರಣ ದಾಖಲು
ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪದಡಿ ರಾಜಭರ ವಿರುದ್ಧ ಪ್ರತ್ಯೇಕ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದ ಪ್ರಕರಣವನ್ನೂ ದಾಖಲಿಸಲಾಗಿದೆ. ಇದೀಗ ಆತನ ಸಾವಿನ ನಾಟಕ ಬಯಲಾಗಿರುವುದರಿಂದ, ಯೋಗೇಶ ಸಿಂಗ್ ಕೊಲೆ ಪ್ರಕರಣದ ವಿಚಾರಣೆಯನ್ನು ಮತ್ತೆ ಎದುರಿಸಬೇಕಾಗಿದೆ.
ತಾನು ಮೃತಪಟ್ಟಿದ್ದೇನೆಂದು ನಂಬಿಸಿ ನ್ಯಾಯಾಂಗ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಎಐ ತಂತ್ರಜ್ಞಾನ, ಮೇಕೆಯ ಅಂತ್ಯಸಂಸ್ಕಾರ ಮತ್ತು ನಕಲಿ ಮರಣ ಪ್ರಮಾಣಪತ್ರದ ಮೊರೆಹೋಗಿದ್ದ ಆರೋಪಿಯ ಯೋಜನೆ ಕೊನೆಗೂ ವಿಫಲವಾಗಿದೆ. ಸತ್ತಿದ್ದಾನೆಂದು ದಾಖಲೆಗಳಲ್ಲಿ ಬಿಂಬಿಸಿಕೊಂಡಿದ್ದ ವ್ಯಕ್ತಿ ಈಗ ಜೀವಂತವಾಗಿಯೇ ಪೊಲೀಸರ ವಶದಲ್ಲಿದ್ದು, ಕೊಲೆ ಪ್ರಕರಣದ ವಿಚಾರಣೆ ಎದುರಿಸುವಂತಾಗಿದೆ.

ಪ್ರಮುಖ ಸುದ್ದಿ :-   ಆಂಧ್ರ ಕರಾವಳಿಗೆ ಅಕ್ಟೋಬರ್ 28ರಂದು ತೀವ್ರ ಚಂಡಮಾರುತ ಅಪ್ಪಳಿಸುವ ಸಾಧ್ಯತೆ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಮಳೆ ನಿರೀಕ್ಷೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement