ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆಸಲಾಗಿದೆ. ಬ್ಯಾಂಕಿನ ಹಿಂಬದಿಯ ಶೌಚಾಲಯದ ಗೋಡೆಗೆ ಕನ್ನ ಕೊರೆದು ಒಳನುಗ್ಗುವ ಪ್ರಯತ್ನ ಮಾಡಲಾಗಿದೆ.
ಬ್ಯಾಂಕಿನ ಸ್ಟ್ರಾಂಗ್ ರೂಮ್ ಗೋಡೆಯನ್ನು ಸಹ ಒಡೆಯುವ ಪ್ರಯತ್ನ ನಡೆದಿದೆ.
ಬ್ಯಾಂಕ್ ಆಫ್ ಬರೋಡಾದ ಸುಂಕಸಾಳ ಶಾಖೆ ರಾಷ್ಟ್ರೀಯ ಹೆದ್ದಾರಿ 63 ರ ಪಕ್ಕದಲ್ಲೇ ಇದ್ದು ಶನಿವಾರ ಮತ್ತು ಭಾನುವಾರ ಬ್ಯಾಂಕಿಗೆ ರಜೆ ಇರುವ ಸಂದರ್ಭದಲ್ಲೇ ದರೋಡೆಗೆ ಯತ್ನ ನಡೆದಿದೆ. ಸೋಮವಾರ ಬೆಳಿಗ್ಗೆ ಸಿಬ್ಬಂದಿ ಕಚೇರಿಗೆ ಬಂದಾಗ ಇದು ಗಮನಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠ ದೀಪನ್.ಎಂ.ಎನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಸಿ.ಸಿ ಟಿ.ವಿ ದೃಶ್ಯಾವಳಿಗಳ ವೀಕ್ಷಣೆ ನಡೆಸಿ ಬ್ಯಾಂಕಿನ ಸಿಬ್ಬಂದಿಗಳಿಂದ ಮಾಹಿತಿ ಪಡೆದಿದ್ದಾರೆ. ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ