ಯಾದಗಿರಿ: ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಕ…!

ಯಾದಗಿರಿ: ಜಿಲ್ಲೆಯ ಸೈದಾಪುರದಲ್ಲಿ ಅಸಾಮಾನ್ಯ ಘಟನೆ ಬೆಳಕಿಗೆ ಬಂದಿದೆ. ವಜಾಗೊಂಡಿದ್ದ ಕೆಕೆಆರ್‌ಟಿಸಿ ಚಾಲಕನೊಬ್ಬ ಬಸ್‌ ಕಳ್ಳತನ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಸ್‌ ಅನ್ನು ಕಳ್ಳತನ ಮಾಡಿರುವುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿದೆ. ಕಳೆದ ಮಾರ್ಚ್ 19ರಂದು ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ ಅನ್ನು ಮಹಿಪಾಲ ಎಂಬ ವ್ಯಕ್ತಿ ಕಳವು ಮಾಡಿದ್ದಾನೆ ಎಂದು ವರದಿಗಳು ತಿಳಿಸಿವೆ.  ಆತ ಈ ಹಿಂದೆ ಚಾಲಕ ಕಂ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಎಂದು ಹೇಳಲಾಗಿದ್ದು, ಕರ್ತವ್ಯ ಲೋಪದ ಕಾರಣಕ್ಕೆ ಕೆಲಸದಿಂದ ವಜಾಗೊಂಡಿದ್ದಾನೆ ಎನ್ನಲಾಗಿದೆ.

ತನ್ನ ಊರಾದ ರಾಚನಳ್ಳಿಗೆ ಹೋಗಲು ವಾಹನಗಳು ಸಿಗದ ಕಾರಣ ನಿಲ್ದಾಣದಲ್ಲಿದ್ದ ಬಸ್‌ ಅನ್ನು ಚಾಲನೆ ಮಾಡಿಕೊಂಡು ಕೊಂಡೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಬಸ್ ಕಳವು ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಕಳವು ಮಾಡಿದ ಬಳಿಕ ಬಸ್‌ನ್ನು ಊರಿನ ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಮಹಿಪಾಲ ಮದ್ಯದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement