
ಬೆಂಗಳೂರು : ಪದ್ಮಶ್ರೀ ಪುರಸ್ಕೃತ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ (Saalumarada Thimmakka) ಇಂದು, ಶುಕ್ರವಾರ ವಿಧಿವಶರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು.
ತಿಮ್ಮಕ್ಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ 12ಗಂಟೆಗೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ 114 ವರ್ಷ
ವಯಸ್ಸಿನ ಸಾಲು ಮರದ ತಿಮ್ಮಕ್ಕ ಕಳೆದ ಕೆಲವು ದಿನಗಳ ಹಿಂದೆ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ ಅವರು ವೃಕ್ಷಮಾತೆ ಎಂದೇ ಜನಪ್ರಿಯರಾಗಿದ್ದಾರೆ. ಹುಲಿಕಲ್ ಗ್ರಾಮದ ಚಿಕ್ಕಯ್ಯ ಅವರನ್ನು ವಿವಾಹವಾಗಿದ್ದ ತಿಮ್ಮಕ್ಕ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದ್ದರು. ಹೀಗಾಗಿ ಅವರು ಸಾಲು ಮರದ ತಿಮ್ಮಕ್ಕ ಎಂದೇ ಪ್ರಸಿದ್ಧರಾದರು.

ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾಲುಮರದ ತಿಮ್ಮಕ್ಕನವರು, ಕರ್ನಾಟಕದಾದ್ಯಂತ ಸುಮಾರು 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ತಿಮ್ಮಕ್ಕನವರು ಮಾಗಡಿ ತಾಲೂಕಿನಲ್ಲಿ 4 ಕಿ.ಮೀ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಬೆಳೆಸಿದ್ದರು. ಇವರ ಪರಿಸರ ಪ್ರೇಮವನ್ನು ಗುರುತಿಸಿ 2019ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ತಿಮ್ಮಕ್ಕ ಅವರನ್ನು ಸಾಕು ಮಗ ಉಮೇಶ ಬಳ್ಳೂರು ಅವರು ನೋಡಿಕೊಳ್ಳುತ್ತಿದ್ದರು.
ಅಮೆರಿಕದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್‌ನಲ್ಲಿರುವ ಪರಿಸರ ಶಿಕ್ಷಣ ಸಂಸ್ಥೆಗೆ ಅವರ ಹೆಸರಿಡಲಾಗಿದೆ. ಇದು ಅವರ ಅಂತಾರಾಷ್ಟ್ರೀಯ ಮಟ್ಟದ ಗುರುತಿಸುವಿಕೆಗೆ ಸಾಕ್ಷಿಯಾಗಿದೆ.
ಸಾಲುಮರದ ತಿಮ್ಮಕ್ಕ ಅವರಿಗೆ ಸಂದ ಪ್ರಶಸ್ತಿಗಳು :
ರಾಷ್ಟ್ರೀಯ ಪೌರ ಪ್ರಶಸ್ತಿ – 1995, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ -1997, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು – ಇವರಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ – 2000, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ ಹಾಗೂ 2010 ನೇ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಲಭಿಸಿದೆ.
2019 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ