ಮುಂಬೈ: ಹಿಂದಿ ಸಿನೆಮಾದ ಹಿರಿಯ ನಟ ಪ್ರೇಮ ಚೋಪ್ರಾ ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆಯ ಭಾಗದಲ್ಲಿ ಉಸಿರಾಟದ ಸಮಸ್ಯೆ (Chest Congestion) ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕಳೆದ ಮೂರು ದಿನಗಳಿಂದ (ನವೆಂಬರ್ 8) ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ನಟ ಪ್ರೇಮ್ ಚೋಪ್ರಾ ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಮೂರರಿಂದ ನಾಲ್ಕು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ನಟನಿಗೆ ಹೃದ್ರೋಗ ಸಮಸ್ಯೆ ಮತ್ತು ವೈರಲ್ ಸೋಂಕು ತಗುಲಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಡಾಕ್ಟರ್ ಜಲೀಲ್ ಪಾರ್ಕರ್ ಅವರು ಹೇಳಿಕೆ ನೀಡಿದ್ದು, “ಪ್ರೇಮ್ ಚೋಪ್ರಾ ಅವರನ್ನು ಎರಡು ದಿನಗಳ ಹಿಂದೆ ಅವರ ಕುಟುಂಬದ ಹೃದ್ರೋಗ ತಜ್ಞರಾದ ಡಾ. ನಿತಿನ್ ಗೋಖಲೆ ಅವರ ನಿಗಾದಲ್ಲಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಮತ್ತು ವೈರಲ್ ಸೋಂಕು, ಶ್ವಾಸಕೋಶದ ಸೋಂಕು ತಗುಲಿದ್ದು, ಅದೇ ತಂಡದಲ್ಲಿ ನಾನೂ ಸಹ ಚಿಕಿತ್ಸೆ ನೀಡುತ್ತಿದ್ದೇನೆ. ಅವರು ಐಸಿಯುನಲ್ಲಿಲ್ಲ, ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿಲ್ಲ ಎಂದು ತಿಳಿಸಿದ್ದಾರೆ.
ಪ್ರೇಮ್ ಚೋಪ್ರಾ ಅವರು ಭಾರತೀಯ ಚಿತ್ರರಂಗದ ಅತ್ಯಂತ ಖ್ಯಾತ ಪೋಷಕ ಹಾಗೂ ಖಳ ನಟರಲ್ಲಿ ಒಬ್ಬರು. ತಮ್ಮ ಮರೆಯಲಾಗದ, ವಿಶಿಷ್ಟವಾದ ಖಳನಾಯಕನ ಪಾತ್ರಗಳ ಮೂಲಕ ಅವರು ಮನೆ ಮಾತಾಗಿದ್ದಾರೆ.
ಅವರು ಪಂಜಾಬಿ ಸಿನಿಮಾ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿ, 1960 ರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ‘ಚೌಧರಿ ಕರ್ನೈಲ್ ಸಿಂಗ್’ ಮೂಲಕ ಚೊಚ್ಚಲ ಪ್ರವೇಶ ಮಾಡಿದರು. ಅದೇ ಸಮಯದಲ್ಲಿ ಅವರು ಹಿಂದಿ ಚಿತ್ರಗಳಲ್ಲೂ ನಟಿಸಲು ಆರಂಭಿಸಿ, ‘ಶಹೀದ್’ (1965) ಚಿತ್ರದಲ್ಲಿ ವಿರಳವಾದ ಸಕಾರಾತ್ಮಕ ಪಾತ್ರದ ಮೂಲಕ ಆರಂಭಿಕ ಮನ್ನಣೆ ಪಡೆದರು. ಆದರೂ, ಅವರ ಖಳನಾಯಕನ ಪಾತ್ರಗಳು ಅವರನ್ನು ಪ್ರಸಿದ್ಧಿಯ ಉತ್ತುಂಗಕ್ಕೆ ಏರಿಸಿದವು. 1960 ರ ದಶಕದ ಉತ್ತರಾರ್ಧದಿಂದ 1990 ರ ದಶಕದ ಮಧ್ಯಭಾಗದವರೆಗೆ, ಚೋಪ್ರಾ ಅವರು ‘ದೋ ರಾಸ್ತೆ’ (1969), ‘ಕಟಿ ಪತಂಗ್’ (1970), ‘ದೋ ಅಂಜಾನೆ’ (1976), ‘ದೋಸ್ತಾನಾ’ (1980), ಮತ್ತು ‘ಕ್ರಾಂತಿ’ (1981) ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ