ನನಗೆ ನೀಡಿದ ʼಪಂ.ಷಡಕ್ಷರಿ ಪ್ರಶಸ್ತಿʼ ಹಾರ್ಮೋನಿಯಂಗೆ ಸಂದ ಸನ್ಮಾನ : ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಂ.ವಿಶ್ವನಾಥ ಕಾನ್ಹರೆ

ಕುಮಟಾ: ಪಂ. ಷಡಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಇದು ಹಾರ್ಮೋನಿಯಂಗೆ ಸಂದ ಸನ್ಮಾನ ಎಂದು ನಾನು ಭಾವಿಸುತ್ತೇನೆ. ಹಾರ್ಮೋನಿಯಂ ಅನ್ನು ಒಂದು ಸ್ವತಂತ್ರ ವಾದ್ಯ ಎಂದು ಪರಿಗಣಿಸಿ ಈ ಪ್ರಶಸ್ತಿ ನೀಡಿರುವುದು ನನಗೆ ಖುಷಿ ತಂದಿದೆ ಎಂದು ಖ್ಯಾತ ಹಾರ್ಮೊನಿಯಂ ವಾದಕ ಪಂ. ವಿಶ್ವನಾಥ ಕಾನ್ಹರೆ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಪಂ. ಷಡಕ್ಷರಿ ಗವಾಯಿ ಅವರ ಪುಣ್ಯಸ್ಮರಣೆ ನಿಮಿತ್ತ ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಕೊಡಮಾಡುವ ಪಂ. ಷಡಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಸಂಗೀತ ತಪಸ್ಸಿನಂತೆ, ಅದನ್ನು ಒಲಿಸಿಕೊಳ್ಳಲು ಹೆಚ್ಚಿನ ಪರಿಶ್ರಮ ಬೇಕು ಹಾಗೂ ತಾಳ್ಮೆ ಬೇಕು. ಸಂಗೀತದ ಕುರಿತು ಹೆಚ್ಚಿನ ಜ್ಞಾನ ಸಂಗ್ರಹಿಸಿದಾಗ ಅದು ಪ್ರತಿಭೆಯಾಗಿ ಹೊರಹೊಮ್ಮುತ್ತದೆ. ಸಂಗೀತದ ಬಗ್ಗೆ ಜ್ಞಾನ ಸಂಗ್ರಹ ಮಾಡಿ ಸಾಧನೆ ಮಾಡದೆ ಸಂಗೀತ ಪ್ರದರ್ಶನ ಕಷ್ಟಸಾಧ್ಯ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮಾತನಾಡಿ, ಅಧ್ಯಾತ್ಮ, ಯೋಗ, ಚಿಕಿತ್ಸೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಂಗೀತದ ಪಾತ್ರ ಪ್ರಮುಖವಾದುದು. ರೋಗಿಗಳಿಗೆ ಸಂಗೀತದ ಮೂಲಕ ನೀಡುವ ಚಿಕಿತ್ಸೆ ಪರಿಣಾಮಕಾರಿ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಸಂಗೀತಕ್ಕೆ ಶ್ರೇಷ್ಠ ಸ್ಥಾನಮಾನ ಇದ್ದು, ಅದನ್ನು ವೇದಾಂಗ ಎಂದು ಪರಿಗಣಿಸಲಾಗಿದೆ. ನಮ್ಮ ಸಂಸ್ಕೃತಿಯ ಉಳಿವು ಸಂಗೀತದಲ್ಲಿದೆ. ಹೀಗಾಗಿ ಸಂಗೀತದ ಮೂಲಕ ನಮ್ಮ ಸಂಸ್ಕೃತಿ ಉಳಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ನಿವೃತ್ತ ಲೆಫ್ಟಿನೆಂಟ್ ಕರ್ನಲ್, ಮಿರ್ಜಾನಿನ ಪಿ.ಎಂ. ನಾಯ್ಕ ಮಾತನಾಡಿ, ಸಂಗೀತ ಸನಾತನ ಧರ್ಮದ ಅಂಗವಾಗಿದೆ. ಗುರು ಪರಂಪರೆ ಸಂಗೀತ ಕ್ಷೇತ್ರದಲ್ಲಿ ಬಹಳ ಪ್ರಮುಖವಾಗಿ ಗುರುತಿಸಿಕೊಳ್ಳುತ್ತದೆ. ಸಂಗೀತ ಸಾಧನೆ ಅತಿ ಕಠಿಣ. ನಮ್ಮ ಎಲ್ಲ ಅಗತ್ಯತೆಗಳನ್ನು ತ್ಯಜಿಸಿ ಸಂಗೀತಕ್ಕಾಗಿ ಪರಿಶ್ರಮ ಪಡಬೇಕಾಗುತ್ತದೆ. ಅದರಲ್ಲಿ ಸಾಧನೆ ಮಾಡಿದಾಗ ಸಂಗೀತದಲ್ಲಿ ನೆಮ್ಮದಿ, ಆನಂದ ಸಿಗುತ್ತದೆ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

ವಿಜ್ಞಾನಿ ಕಾಗಾಲ-ಮಾನೀರಿನ ಡಾ. ಶ್ರೀಕಾಂತ ಹೆಗಡೆ ಮಾತನಾಡಿ, ಸಂಗೀತದ ತರಂಗಗಳು ಮನುಷ್ಯ, ಪ್ರಾಣಿಗಳ ಮೇಲೆ ಗುಣಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಹೇಳಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಕಡತೋಕಾದ ಶಿವಾನಂದ ಹೆಗಡೆ ಮಾತನಾಡಿ, ಸಂಗೀತದಲ್ಲಿ ಲಿಂಗ, ಜಾತಿ, ಧರ್ಮ ಭೇದವಿಲ್ಲದೆ ಪ್ರತಿಭೆಗೆ ಮಾತ್ರ ಮನ್ನಣೆ ಇದೆ ಎಂದರು. ಅನೇಕ ಶ್ರೇಷ್ಠ ಕಲಾವಿದರನ್ನು ಹೊಂದಿದ ಜಿಲ್ಲೆ ನಮ್ಮದು. ಅದಕ್ಕಾಗಿ ನಾವು ಹೆಮ್ಮೆ ಪಡಬೇಕು ಎಂದರು.
ಕುಮಟಾ ಬಿಇಒ ರಾಜೇಂದ್ರ ಭಟ್ಟ ಮಾತನಾಡಿ, ಸಂಗೀತಕ್ಕೆ ಶ್ರದ್ಧೆ ಮತ್ತು ಆಸಕ್ತಿ ಪ್ರಮುಖವಾಗಿ ಬೇಕು ಎಂದು ಹೇಳಿದರು.
ಷಡಕ್ಷರಿ ಗವಾಯಿ ಅಕಾಡೆಮಿಯ ಅಧ್ಯಕ್ಷ ವಸಂತರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸ್ವರಸಂಗಮದ ಅಧ್ಯಕ್ಷ ಸುಬ್ರಾಯ ಜಿ.ಭಟ್‌ ಕೂಜಳ್ಳಿ, ಗೌರೀಶ ಯಾಜಿ ಮತ್ತಿತರರು ಉಪಸ್ಥಿತರಿದ್ದರು.

ಸ್ವರ ನಮನ
ಸ್ವರ ನಮನ ಕಾರ್ಯಕ್ರಮದಲ್ಲಿ ಖ್ಯಾತ ಹಾರ್ಮೋನಿಯಂ ವಾದಕ ಪಂ. ವಿಶ್ವನಾಥ ಕಾನ್ಹರೆ ಅವರ ಹಾರ್ಮೋನಿಯಂ ಸೋಲೋ ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು.
ರಘುಪತಿ ಹೆಗಡೆ ಶೀಗೆಹಳ್ಳಿ, ಮೈಸೂರಿನ ಶಾರದಾ ಭಟ್ಟ ಕಟ್ಟಿಗೆ, ವಿಶಾಖಾಪಟ್ಟಣದ ಶಿವಾನಿ ಕಲ್ಯಾಣಪುರ, ಮುಂಬೈನ ನಿವೇದಿತಾ ಹಟ್ಟಂಗಡಿ ಗಾಯನ ನಡೆಯಿತು. ತೇಜಾ ಭಟ್ಟ ಹಾಗೂ ಸ್ವಾತಂತ್ರ್ಯಾ ಎ.ಎನ್. ಅವರಿಂದ ಗಾಯನ ಜುಗಲ್‌ಬಂಧಿ, ರಿಷಾ ನಾಯಕ, ಅದಿತಿ ಶಾನಭಾಗ ಹಾಗೂ ಮಾಧವ ಭಟ್ಟ ಅವರಿಂದ ತಿಗಲ್ಬಂಧಿ ಗಾಯನ ನಡೆಯಿತು.
ಸಂವಾದಿನಿಯಲ್ಲಿ ಗೌರೀಶ ಯಾಜಿ, ಅಜಯ ಹೆಗಡೆ ವರ್ಗಾಸರ, ಸಿಂಚನಾ ಭಟ್ಟ, ತಬಲಾದಲ್ಲಿ ಗುಣವಂತೆಯ ಎನ್‌.ಜಿ. ಅನಂತಮೂರ್ತಿ, ಮುಂಬೈನ ಶಂತನು ಶುಕ್ಲ, ಸಂತೋಷ ಚಂದಾವರ, ಸಂಕೊಳ್ಳಿಯ ಅಕ್ಷಯ ಭಟ್ಟ, ಕವಲಕ್ಕಿಯ ಭರತ ಹೆಗಡೆ, ಕೂಜಳ್ಳಿಯ ದೀಪಕ ಭಟ್ಟ ಸಹಕರಿಸಿದರು.
ಬೆಳಗ್ಗೆ ಕೂಜಳ್ಳಿ ಸ್ವರಸಂಗಮದ ಅಧ್ಯಕ್ಷ ಎಸ್‌.ಜಿ. ಭಟ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪನ್ಯಾಸಕ ಆನಂದ ನಾಯ್ಕ ಚಂದಾವರ, ಷಡಕ್ಷರಿ ಗವಾಯಿ ಅಕಾಡೆಮಿಯ ಖಜಾಂಚಿ ಎಸ್.ಎನ್. ಭಟ್ಟ ಉಪಸ್ಥಿತರಿದ್ದರು.
ರಘುಪತಿ ಯಾಜಿ ಸ್ವಾಗತಿಸಿದರು. ಟಿ.ಎನ್. ಭಟ್ಟ ಹಾಗೂ ವಿ.ಜಿ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement