ಥಾಣೆ : ಋತುಮತಿಯಾದ (Periods) ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚುವ ಸಲುವಾಗಿ ಶಿಕ್ಷಕರು 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ, ಒಳಉಡುಪುಗಳನ್ನು ಬಿಚ್ಚಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharastra) ಥಾಣೆಯ ಶಹಪೂರದ ಶಾಲೆಯೊಂದರಲ್ಲಿ ನಡೆದಿದೆ.
ಈ ಸಂಬಂಧ ಥಾಣೆಯಲ್ಲಿರುವ ಖಾಸಗಿ ಶಾಲೆಯ ಪ್ರಾಂಶುಪಾಲರು ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ (ಜುಲೈ 10) ತಿಳಿಸಿದ್ದಾರೆ. ಥಾಣೆ ಜಿಲ್ಲೆಯ ಶಹಾಪುರ ಪ್ರದೇಶದ ಶಾಲೆಯಲ್ಲಿ ಮಂಗಳವಾರ (ಜುಲೈ 8) ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದ ನಂತರ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿನಿಯೊಬ್ಬರ ಪೋಷಕರು ನೀಡಿದ ದೂರಿನ ಪ್ರಕಾರ, 5 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರನ್ನು ಶಾಲೆಯ ಕನ್ವೆನ್ಷನ್ ಹಾಲ್‌ಗೆ ಕರೆದು, ಪ್ರೊಜೆಕ್ಟರ್ ಮೂಲಕ ಶೌಚಾಲಯ ಮತ್ತು ನೆಲದಲ್ಲಿ ರಕ್ತದ ಕಲೆಗಳ ಫೋಟೋಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿನಿಯರಲ್ಲಿ ಯಾರಾದರೂ ಮುಟ್ಟಿನ ಚಕ್ರವನ್ನು ಎದುರಿಸುತ್ತಿದ್ದಾರೆಯೇ ಎಂದು ವಿದ್ಯಾರ್ಥಿನಿಯರನ್ನು ಕೇಳಲಾಯಿತು.
ನಂತರ ಬಾಲಕಿಯರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ತಮಗೆ ಮುಟ್ಟಾಗುತ್ತಿದೆ ಎಂದು ಹೇಳಿದ ಎಲ್ಲ ವಿದ್ಯಾರ್ಥಿನಿಯರಿಗೆ ಶಿಕ್ಷಕರ ಬಳಿ ಹೆಬ್ಬೆರಳಿನ ಗುರುತು ನೀಡುವಂತೆ ಕೇಳಲಾಯಿತು. ಆದರೆ ತಮಗೆ ಮುಟ್ಟಾಗುತ್ತಿಲ್ಲ ಎಂದು ಹೇಳಿದ ಬಾಲಕಿಯರನ್ನು ಒಬ್ಬೊಬ್ಬರಾಗಿ ಶೌಚಾಲಯಕ್ಕೆ ಕರೆದೊಯ್ಯಲಾಯಿತು, ಮಹಿಳಾ ಸಹಾಯಕರು ಅವರ ಖಾಸಗಿ ಭಾಗಗಳನ್ನು ಪರಿಶೀಲಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದ ಮೇಲೆ, ಬುಧವಾರ ಶಾಲೆಯ ಪ್ರಾಂಶುಪಾಲರು, ನಾಲ್ವರು ಶಿಕ್ಷಕರು, ಸಹಾಯಕ ಮತ್ತು ಇಬ್ಬರು ಟ್ರಸ್ಟಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯರನ್ನು ಈ ರೀತಿಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಪೋಷಕರಿಗೆ ತಿಳಿದಾಗ, ಅವರು ಶಾಲೆಯಲ್ಲಿ ಜಮಾಯಿಸಿ, ಇದರಲ್ಲಿ ಭಾಗಿಯಾಗಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಥಾಣೆ ಗ್ರಾಮೀಣ) ರಾಹುಲ್ ಜಲ್ಟೆ ತಿಳಿಸಿದ್ದಾರೆ.
ಇಡೀ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎಂಟು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 76 (ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ