
ನವದೆಹಲಿ : ಡಿಸೆಂಬರ್‌ನಿಂದ ಫೆಬ್ರವರಿವರೆಗಿನ ಭಾರತೀಯ ಹವಾಮಾನ ಇಲಾಖೆ(IMD)ಯ ಮುನ್ಸೂಚನೆಯ ಪ್ರಕಾರ, ದೇಶದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ತೀವ್ರ ಚಳಿ ಇರಲಿದೆ. ವಿಶೇಷವಾಗಿ ವಾಯವ್ಯ (Northwest) ಭಾರತ, ಉತ್ತರ ಭಾರತ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳು ಸಾಮಾನ್ಯಕ್ಕಿಂತ ಹೆಚ್ಚು ಕೋಲ್ಡ್‌ವೇವ್ (ಶೀತದ ಅಲೆ) ದಿನಗಳನ್ನು ಎದುರಿಸಲಿವೆ.
ಸೋಮವಾರ ನವದೆಹಲಿಯಲ್ಲಿ ಮಾತನಾಡಿದ ಐಎಂಡಿ (IMD) ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು, “ಈ ಚಳಿಗಾಲದ ಅವಧಿಯಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ ಪ್ರದೇಶಗಳ ಮೇಲೆ ಸಾಮಾನ್ಯಕ್ಕಿಂತ ಹೆಚ್ಚಿನ ಕೋಲ್ಡ್‌ವೇವ್ ಅವಧಿಗಳು ಪರಿಣಾಮ ಬೀರಲಿವೆ. ಶೀತದ ಅಲೆಯು ಸಾಮಾನ್ಯಕ್ಕಿಂತ ದೀರ್ಘಕಾಲದವರೆಗೆ ಉಳಿಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಶೀತದ ಅಲೆಗಳು ಸಾಮಾನ್ಯ 4-6 ದಿನಗಳಿಗೆ ಹೋಲಿಸಿದರೆ, ಈ ಬಾರಿ 11 ದಿನಗಳವರೆಗೆ ಇರಬಹುದು ಎಂದು ಅವರು ತಿಳಿಸಿದರು.
ಈ ಋತುವಿನ ಚಳಿಯ ಅಥವಾ ತಂಪಾದ ದಿನಗಳಿಗೆ ಪ್ರಸ್ತುತ ಇರುವ ದುರ್ಬಲ ‘ಲಾ ನಿನಾ’ (La Nina) ಪರಿಸ್ಥಿತಿಗಳು ಕಾರಣವಾಗಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಪೆಸಿಫಿಕ್ ಸಾಗರದ ಮೇಲ್ಮೈನ ಸರಾಸರಿಗಿಂತ ತಂಪಾಗಿರುವ ತಾಪಮಾನವಾದ ಲಾ ನಿನಾ ಸಾಮಾನ್ಯವಾಗಿ ತೀವ್ರವಾದ ಚಳಿಗಾಲಕ್ಕೆ ಸಂಬಂಧಿಸಿದೆ.
ಇದರ ಜೊತೆಗೆ, ಉತ್ತರ ಧ್ರುವದ ಉದ್ದಕ್ಕೂ “ಪೋಲಾರ್ ವೋರ್ಟೆಕ್ಸ್” (Polar Vortex) ಬೆಳವಣಿಗೆಯು ಭಾರತದ ಮೇಲಿನ ತಾಪಮಾನದ ಮೇಲೆ ಪ್ರಭಾವ ಬೀರಬಹುದು. ಪೋಲಾರ್ ವೋರ್ಟೆಕ್ಸ್ ಘಟನೆಗಳ ಸಮಯದಲ್ಲಿ, ಧ್ರುವಗಳಿಂದ ಬರುವ ತೀವ್ರ ಶೀತ ಗಾಳಿಗಳು ದಕ್ಷಿಣ ಅಕ್ಷಾಂಶಗಳ ಕಡೆಗೆ ಇಳಿಯುತ್ತವೆ.
ಮುಂದಿನ ಋತುವಿನಲ್ಲಿ ಮಧ್ಯ, ವಾಯುವ್ಯ ಮತ್ತು ಉತ್ತರ ಭಾರತದಲ್ಲಿ ಹಗಲಿನ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಿರಲಿದೆ ಎಂದು ಮೊಹಾಪಾತ್ರ ಹೇಳಿದರು.
ಆದಾಗ್ಯೂ, ಐಎಂಡಿಯು ಉತ್ತರ ದಿಕ್ಕಿನ ತುತ್ತತುದಿ ಮತ್ತು ಈಶಾನ್ಯ ಭಾರತದ ಪ್ರದೇಶಗಳಲ್ಲಿ ಸಾಮಾನ್ಯ ಚಳಿಗಾಲಕ್ಕಿಂತ ಹೆಚ್ಚು ಬೆಚ್ಚಗಿನ ಚಳಿಗಾಲವನ್ನು ಊಹಿಸಿದೆ.
ಈ ಚಳಿಗಾಲದಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ರಾಜಸ್ಥಾನ, ಬಿಹಾರದ ಕೆಲವು ಭಾಗಗಳು, ಉತ್ತರ ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಸಂಪೂರ್ಣ ಈಶಾನ್ಯ ಭಾರತದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ಇಲಾಖೆ ತಿಳಿಸಿದೆ.
ಡಿಸೆಂಬರ್‌ನಲ್ಲಿ ವಾಯುವ್ಯ, ಮಧ್ಯ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಕಾಲ ಶೀತದ ಅಲೆಗಳು ಪರಿಣಾಮ ಬೀರಲಿವೆ.
ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಪೂರ್ವ ಮಹಾರಾಷ್ಟ್ರದ ಭಾಗಗಳಲ್ಲಿ ಆರು ದಿನಗಳವರೆಗೆ ಕೋಲ್ಡ್‌ವೇವ್ ಅವಧಿ ಇರಬಹುದು.



ನಿಮ್ಮ ಕಾಮೆಂಟ್ ಬರೆಯಿರಿ