ಕೋಲಾರ: ಮುರುಡೇಶ್ವರ ಬೀಚ್‌ನಲ್ಲಿ ನಾಲ್ವರು ಬಾಲಕಿಯರು ಜಲಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ, ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಮುಳಬಾಗಲು ತಾಲೂಕಿನ ಕೊತ್ತೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಐವರು ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೋಲಾರ ಮುಳಬಾಗಿಲಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಒಟ್ಟು 54 ಮಂದಿ ಪ್ರವಾಸಕ್ಕೆ ಬಂದಿದ್ದರು. ಅವರು ಮುರುಡೇಶ್ವರಕ್ಕೆ ತೆರಳಿದ್ದಾಗ ಸಮುದ್ರಕ್ಕೆ ಇಳಿದಿದ್ದ ಏಳು ವಿದ್ಯಾರ್ಥಿನಿಯರ ಪೈಕಿ ನಾಲ್ವರು ಸಮುದ್ರಪಾಲಾಗಿದ್ದರು. ಮೂವರು ರಕ್ಷಣೆ ಮಾಡಿ ಮುರುಡೇಶ್ವರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ..
ವಿದ್ಯಾರ್ಥಿನಿಯರಾದ ಮುಳಬಾಗಲು ತಾಲೂಕಿನ ಪೂಜಾರಹಳ್ಳಿ ಶ್ರಾವಂತಿ(15), ಎನ್.ಗಡ್ಡೂರು ದೀಕ್ಷಾ(15), ದೊಡ್ಡಗುಟ್ಟಳ್ಳಿ ವಂದನಾ(15) ಮತ್ತು ಹೆಬ್ಬಣಿ ಗ್ರಾಮದ ಲಾವಣ್ಯ(15) ಮೃತಪಟ್ಟಿದ್ದಾರೆ.
ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಮೃತಪಟ್ಟ ಬಾಲಕಿಯರ ಪೋಷಕರಿಗೆ ತಲಾ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಮೃತ ನಾಲ್ವರು ಬಾಲಕಿಯರೂ 15 ವರ್ಷದವರಾಗಿದ್ದು 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಇವರ ಪೋಷಕರಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ