ಬೆಳಗಾವಿ : ಬೆಳಗಾವಿ ತಹಶೀಲ್ದಾರ್ ಕಚೇರಿ ಎಸ್ ಡಿಎ ರುದ್ರಣ್ಣ ಯಡವಣ್ಣವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಬರೆದ ಅನಾಮಧೇಯ ಪತ್ರವೊಂದು ಖಡೇ ಬಜಾರ್ ಎಸಿಪಿ ಅವರಿಗೆ ಬಂದಿದೆ. ಇದು ಸಂಚಲನಕ್ಕೆ ಕಾರಣವಾಗಿದೆ.
ಬಿಳಿ ಹಾಳೆಯ ಮೇಲೆ ಟೈಪ್ ಮಾಡಿ ಪ್ರಿಂಟ್ ತೆಗೆದು ಲಕೋಟೆಯಲ್ಲಿ ಹಾಕಿ ಬೆಳಗಾವಿಯ ಖಡೇ ಬಜಾರ್ ಪೊಲೀಸ್ ಠಾಣೆಗೆ ಈ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಪತ್ರದ ಪ್ರತಿಗಳನ್ನು ರಾಜ್ಯಪಾಲರು, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಬೆಳಗಾವಿಯ ಪೊಲೀಸ್ ಆಯುಕ್ತರು ಸೇರಿ ಹಲವು ಪ್ರಮುಖರಿಗೆ ಪೋಸ್ಟ್ ಮಾಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳಾದ ತಹಶೀಲ್ದಾರ ಬಸವರಾಜ ನಾಗರಾಳ, ಎಫ್ ಡಿಎ ಅಶೋಕ ಕಬ್ಬಲಿಗೇರ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಸಹಾಯಕ ಸೋಮು ದೊಡವಾಡಿ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಬೆನ್ನಲ್ಲೇ ಈ ಪತ್ರ ಬಂದಿದೆ.
ರುದ್ರಣ್ಣನದು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದು ಕೊಲೆ. ತಹಶೀಲ್ದಾರರ ಜೀಪ್ ಚಾಲಕ ಯಲ್ಲಪ್ಪ ಬಡಸದ ಎಂಬಾತನೇ ಕೊಲೆಯ ಸೂತ್ರಧಾರ. ಆ ವಾಹನ ತಪಾಸಿಸಿದರೆ ಮತ್ತು ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರಬರುತ್ತದೆ. ಮೃತ ಪಟ್ಟವರಿಗೆ ನ್ಯಾಯ ಸಿಗಬೇಕು. ಪ್ರಕರಣ ಮುಚ್ಚಿ ಹಾಕಬಾರದು ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನಿಂಗ್ ಅವರು ರುದ್ರಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಅನಾಮಧೇಯ ಪತ್ರದ ಬಗ್ಗೆ ಪರಿಶೀಲನೆ ನಡೆಸಿ ಎಲ್ಲಾ ಆಯಾಮಗಳನ್ನು ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ