ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ; ಸಿಎಂ

ಬೆಂಗಳೂರು/ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಗುರುವಾರ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ಗುರುವಾರ ಬೆಳಿಗ್ಗೆ ತಾನು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಜೊತೆ ದೂರವಾಣಿ ಮೂಲಕ ಮಾತನಾಡಿ, ಅಕ್ಟೋಬರ್ 11ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಸಮಾರಂಭಕ್ಕೆ ಅಹ್ವಾನಿದ್ದು ಸ್ವಾಮೀಜಿಯವರು ಈ ಆಹ್ವಾನವನ್ನು ಸ್ವೀಕರಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಿವಕುಮಾರ ವಿಧಾನಸಭೆಯಲ್ಲಿ ತಿಳಿಸಿದರು.
ದಸರಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಎಲ್ಲಾ ಶಾಸಕರಿಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇದೇ ವೇಳೆ ಆಹ್ವಾನ ನೀಡಿದರು. ದಸರಾ ಉದ್ಘಾಟಕರ ಆಯ್ಕೆಯ ಅಧಿಕಾರವನ್ನು ಈ ಹಿಂದೆ ನಡೆದ ಉನ್ನತ ಮಟ್ಟದ ದಸರಾ ಸಮಿತಿಯು ಮುಖ್ಯಮಂತ್ರಿಗೆ ನೀಡಿತ್ತು. ಅದರಂತೆ ಸ್ವಾಮೀಜಿಯವರಿಗೆ ಪತ್ರ ಬರೆದು ಅಧಿಕೃತ ಆಹ್ವಾನ ನೀಡಲಾಗಿದೆ ಎಂದು ಶಿವಕುಮಾರ ಹೇಳಿದರು.

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪ್ರಸ್ತುತ ಪೀಠಾಧಿಪತಿಗಳು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಠದ 18ನೇ ಪೀಠಾಧಿಪತಿಗಳಾಗಿದ್ದು, ತಮ್ಮ ಸಾಮಾಜಿಕ ಕಳಕಳಿ, ಸರಳತೆ, ನೀರಿನ ಬಗ್ಗೆ ಕಾಳಜಿ, ದಾಸೋಹ ಪರಂಪರೆಯಿಂದಾಗಿ ನಾಡಿನಾದ್ಯಂತ ಖ್ಯಾತಿ ಪಡೆದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರವಾಗಿದ್ದ ನೀರಿನ ಅಭಾವವನ್ನು ನೀಗಿಸಲು ಇವರು ‘ಜಲ ದೀಕ್ಷೆ’ ಅಭಿಯಾನದ ಮೂಲಕ ನೂರಾರು ಕೆರೆಗಳ ಹೂಳೆತ್ತುವಿಕೆ ಮತ್ತು ಜಲ ಸಂರಕ್ಷಣಾ ಕ್ರಾಂತಿಯನ್ನು ಮಾಡಿ ಜಲಋಷಿ ಎನಿಸಿಕೊಂಡಿದ್ದಾರೆ. ಮಠದಲ್ಲಿ ಅನ್ನ, ಅರಿವು (ಶಿಕ್ಷಣ) ಮತ್ತು ಆಧ್ಯಾತ್ಮದ ತ್ರಿವಿಧ ದಾಸೋಹ ನಿರಂತರವಾಗಿನಡೆಯುತ್ತಿದ್ದು, ನೂರಾರು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣ ಸೌಲಭ್ಯ ಒದಗಿಸಿದ್ದಾರೆ.

ಪ್ರಮುಖ ಸುದ್ದಿ :-   ಧಾರವಾಡ : ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಇನ್ನಿಲ್ಲ

ದಸರೆಗೆ ಮೈಸೂರು ನಗರಿ ಸಜ್ಜು
ಇನ್ನೊಂದೆಡೆ, ದಸರಾ ಮಹೋತ್ಸವಕ್ಕೆ ಮೈಸೂರು ನಗರ ಈಗಾಗಲೇ ಸಜ್ಜಾಗುತ್ತಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳು ಹಾಗೂ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡುವ ಕಾರ್ಯ ಆರಂಭಗೊಂಡಿದೆ. ಕಳೆದ ವರ್ಷ ಸುಮಾರು 120 ಕಿಲೋಮೀಟರ್ ಉದ್ದದ ರಸ್ತೆಗಳು ಮತ್ತು ವೃತ್ತಗಳು ದೀಪಾಲಂಕಾರದಿಂದ ಕಂಗೊಳಿಸಿದ್ದವು.

ಈ ಬಾರಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ ಈ ವರ್ಷ ಅಕ್ಟೋಬರ್ 21ರಂದು ನಡೆಯಲಿದೆ. ಮೈಸೂರು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು 4.5 ಕಿಲೋಮೀಟರ್ ದೂರ ಸಾಗುವ ಮೆರವಣಿಗೆಯಲ್ಲಿ ಆಯ್ಕೆಯಾದ ಸಾಕಾನೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವುದು ವಿಶೇಷವಾಗಿರಲಿದೆ.
ಜಂಬೂ ಸವಾರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ವಿವಿಧ ಆನೆ ಶಿಬಿರಗಳಿಂದ ಬಂದಿರುವ 14 ಸಾಕಾನೆಗಳು ಈಗಾಗಲೇ ಮೈಸೂರಿಗೆ ಆಗಮಿಸಿವೆ. ಅವುಗಳಿಗೆ ಬೆಳಿಗ್ಗೆ ಹಾಗೂ ಸಂಜೆ ದೀಪಾಲಂಕಾರದ ನಡುವೆ ಎರಡು ಅವಧಿಗಳಲ್ಲಿ ತಾಲೀಮು ನಡೆಸಲಾಗುತ್ತಿದೆ.
ಈ ಬಾರಿಯ ದಸರಾ ಮಹೋತ್ಸವದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಂಬಳ ಸ್ಪರ್ಧೆ ನಡೆಯಲಿದೆ. ಮಂಗಳೂರಿನ ಭಾಗದಲ್ಲಿ ಪ್ರಸಿದ್ಧವಾಗಿರುವ ಈ ಕಂಬಳದಲ್ಲಿ ಕೋಣದ ಓಟದ ಸ್ಪರ್ಧೆ ನಡೆಯಲಿದ್ದು, ಮೈಸೂರು ನಗರದ ಸಾತಗಳ್ಳಿ ಪ್ರದೇಶದಲ್ಲಿ ಸುಮಾರು 17 ಎಕರೆ ವಿಸ್ತೀರ್ಣದ ಜಾಗದಲ್ಲಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ.
ಇದರ ಜೊತೆಗೆ ಆಹಾರ ಮೇಳ, ಯುವ ದಸರಾ ಸೇರಿದಂತೆ ಹಲವು ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿದ್ದು, ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರನ್ನು ಸೆಳೆಯಲಿವೆ.

ಪ್ರಮುಖ ಸುದ್ದಿ :-   ತಮಿಳುನಾಡಿಗೆ ಪ್ರತಿನಿತ್ಯ 4000 ಕ್ಯೂಸೆಕ್ ನೀರು ಬಿಡಲು ಸಿಡಬ್ಲ್ಯುಆರ್‌ಸಿ ಸೂಚನೆ; ಇದನ್ನು ಪ್ರಶ್ನಿಸುತ್ತೇವೆ ಎಂದ ಸಿಎಂ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement