ʼಅರ್ನಬ್‌ʼ ಬಳಿಕ ಮತ್ತೊಂದು ಚಂಡಮಾರುತ ? ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ; ಹಲವೆಡೆ ಭಾರಿ ಮಳೆ ಸಾಧ್ಯತೆ

ನವದೆಹಲಿ: ಕೆಲವೇ ದಿನಗಳ ಹಿಂದೆ ಭಾರತದ ಪೂರ್ವ ಕರಾವಳಿಯನ್ನು ಅರ್ನಬ್‌ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಈಗ ಮತ್ತೊಂದು ಹವಾಮಾನ ವೈಪರೀತ್ಯದ ಆತಂಕ ಎದುರಾಗಿದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಹೊಸದಾಗಿ ವಾಯುಭಾರ ಕುಸಿತ ಪ್ರದೇಶ ರೂಪುಗೊಂಡಿದ್ದು, ಮುಂದಿನ 48 ಗಂಟೆಗಳಲ್ಲಿ ಈ ಹವಾಮಾನ ವ್ಯವಸ್ಥೆಯು ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶವಾಗಿ (Depression) ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಹೊಸ ವಾಯುಬಾರ ಕುಸಿತಕ್ಕೆ ಸಂಬಂಧಿಸಿದಂತೆ ಐಎಂಡಿ (IMD) ಯಾವುದೇ ಚಂಡಮಾರುತ ಎಚ್ಚರಿಕೆಯನ್ನು ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಹವಾಮಾನ ವ್ಯವಸ್ಥೆಯು ಹೇಗೆ ವಿಕಸನಗೊಳ್ಳುತ್ತದೆ ಎಂಬುದರ ಮೇಲೆ ಅದರ ಮುಂದಿನ ಬೆಳವಣಿಗೆ ಅವಲಂಬಿತವಾಗಿರುತ್ತದೆ. ಆದರೆ ಹೊಸ ಹವಾಮಾನ ವ್ಯವಸ್ಥೆಯ ಪ್ರಭಾವದಿಂದ ನವೆಂಬರ್ 1ರಿಂದ 3ರವರೆಗೆ ದೇಶದ ಪೂರ್ವ ಕರಾವಳಿಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಗುರುವಾರ ಬೆಳಗ್ಗೆ 5:30ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲ್ಮೈ ಸುಳಿಗಾಳಿ ಪರಿಚಲನೆಯ (Upper-air Cyclonic Circulation) ಪ್ರಭಾವದಿಂದ ಈ ವಾಯುಭಾರ ಕುಸಿತ ಪ್ರದೇಶ ರೂಪುಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಇದು ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಿ, ದಕ್ಷಿಣ ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಲಗೊಳ್ಳುವ ನಿರೀಕ್ಷೆಯಿದೆ.

ತದನಂತರದ 24 ಗಂಟೆಗಳಲ್ಲಿ ಇದೇ ದಿಕ್ಕಿನಲ್ಲಿ ಮುಂದುವರಿಯಲಿರುವ ಹವಾಮಾನ ವ್ಯವಸ್ಥೆಯು ಶನಿವಾರದ ವೇಳೆಗೆ ಆಗ್ನೇಯ ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಬಳಿಕದ ಎರಡು ದಿನಗಳಲ್ಲಿ ಮತ್ತಷ್ಟು ಬಲಗೊಂಡು ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಆಂಧ್ರಪ್ರದೇಶ ಕರಾವಳಿಯತ್ತ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಮುಖ ಸುದ್ದಿ :-   ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟ: ಪಶ್ಚಿಮ ಬಂಗಾಳ, ಅಸ್ಸಾಂಗೆ ಪ್ರವಾಹದ ಎಚ್ಚರಿಕೆ

ಈ ಹವಾಮಾನ ವ್ಯವಸ್ಥೆ ವಾಯುಭಾರ ಕುಸಿತವಾಗಿ ರೂಪುಗೊಳ್ಳುವ ಕುರಿತು ವಿವಿಧ ಹವಾಮಾನ ಮುನ್ಸೂಚನಾ ಮಾದರಿಗಳ ನಡುವೆ ಸಹಮತವಿದೆ. ಐಎಂಡಿಯ ಅರೋರಾ (IMD Aurora), ಎಫ್‌ಜಿಎನ್ (FGN), ಎಫ್‌ಸಿಎನ್ (FCN), ಎನ್‌ಸಿಎಂಆರ್‌ಡಬ್ಲ್ಯುಎಫ್ ಗ್ರಾಫ್‌ಕಾಸ್ಟ್ (NCMRWF Graphcast), ಫೋರ್‌ಕಾಸ್ಟ್‌ನೆಟ್ (FourcastNet) ಮತ್ತು ಪಂಗು ವೆದರ್ (Pangu Weather) ಸೇರಿದಂತೆ ಹಲವು ಕೃತಕ ಬುದ್ಧಿಮತ್ತೆ ಆಧಾರಿತ ಹವಾಮಾನ ಮಾದರಿಗಳು ಶನಿವಾರದ ವೇಳೆಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ರೂಪುಗೊಳ್ಳುವ ಹಾಗೂ ನಂತರ ಅದು ಆಂಧ್ರಪ್ರದೇಶ ಕರಾವಳಿಯತ್ತ ಚಲಿಸುವ ಸಾಧ್ಯತೆಯನ್ನು ಸೂಚಿಸಿವೆ.
ಆದರೆ, ಜಿಎಫ್‌ಎಸ್ (GFS) ಗುಂಪಿನ ಮಾದರಿಗಳು ಮತ್ತು ಇಸಿಎಂಡಬ್ಲ್ಯುಎಫ್ (ECMWF) ಈ ಹವಾಮಾನ ವ್ಯವಸ್ಥೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯನ್ನು ವ್ಯಕ್ತಪಡಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಇಸಿಎಐ (ECAI) ಮಾದರಿಯು ಇದು ವಾಯುಭಾರ ಕುಸಿತ ಪ್ರದೇಶವಾಗಿಯೇ ಮುಂದುವರಿಯುವ ಸಾಧ್ಯತೆಯನ್ನು ಸೂಚಿಸಿದೆ.
ಮೂರು ದಿನ ಭಾರಿ ಮಳೆ ಸಾಧ್ಯತೆ

ವಾಯುಭಾರ ಕುಸಿತ ಯಾವಾಗ ಚಂಡಮಾರುತವಾಗಿ ರೂಪುಗೊಳ್ಳುತ್ತದೆ?
ಭಾರತೀಯ ಹವಾಮಾನ ಇಲಾಖೆ (IMD) ಹವಾಮಾನ ವ್ಯವಸ್ಥೆಗಳನ್ನು ಅವುಗಳ ಗಾಳಿಯ ವೇಗದ ಆಧಾರದ ಮೇಲೆ ವಿವಿಧ ಹಂತಗಳಾಗಿ ವರ್ಗೀಕರಿಸುತ್ತದೆ. ವಾಯುಭಾರ ಕುಸಿತ ಪ್ರದೇಶವು (Low Pressure Area) ಇಂತಹ ಹವಾಮಾನ ವ್ಯವಸ್ಥೆಯ ಆರಂಭಿಕ ಹಂತವಾಗಿದ್ದು, ಅದು ರೂಪುಗೊಂಡ ತಕ್ಷಣ ಚಂಡಮಾರುತ ಸಂಭವಿಸಲಿದೆ ಎಂದರ್ಥವಲ್ಲ.
ಗಾಳಿಯ ವೇಗ ಗಂಟೆಗೆ 31ರಿಂದ 49 ಕಿ.ಮೀ. ಇದ್ದರೆ ಅದನ್ನು ವಾಯುಭಾರ ಕುಸಿತ (Depression) ಎಂದು ಕರೆಯಲಾಗುತ್ತದೆ. ಗಾಳಿಯ ವೇಗ ಗಂಟೆಗೆ 50ರಿಂದ 61 ಕಿ.ಮೀ. ತಲುಪಿದಾಗ ಅದು ತೀವ್ರ ವಾಯುಭಾರ ಕುಸಿತ (Deep Depression) ಎನಿಸಿಕೊಳ್ಳುತ್ತದೆ.
ಗಾಳಿಯ ವೇಗ ಗಂಟೆಗೆ 62ರಿಂದ 88 ಕಿ.ಮೀ. ತಲುಪಿದಾಗ ಅದನ್ನು ಚಂಡಮಾರುತ (Cyclonic Storm) ಎಂದು ವರ್ಗೀಕರಿಸಲಾಗುತ್ತದೆ. ಗಂಟೆಗೆ 89ರಿಂದ 117 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೆ ಅದು ತೀವ್ರ ಚಂಡಮಾರುತ (Severe Cyclonic Storm) ಎನಿಸಿಕೊಳ್ಳುತ್ತದೆ.ಅದೇ ರೀತಿ, ಗಂಟೆಗೆ 118ರಿಂದ 166 ಕಿ.ಮೀ. ವೇಗದ ಗಾಳಿ ಹೊಂದಿರುವ ವ್ಯವಸ್ಥೆಯನ್ನು ಅತ್ಯಂತ ತೀವ್ರ ಚಂಡಮಾರುತ (Very Severe Cyclonic Storm) ಎಂದು ಕರೆಯಲಾಗುತ್ತದೆ. ಗಾಳಿಯ ವೇಗ ಗಂಟೆಗೆ 167ರಿಂದ 221 ಕಿ.ಮೀ. ತಲುಪಿದರೆ ಅದನ್ನು ಅತೀವ ತೀವ್ರ ಚಂಡಮಾರುತ (Extremely Severe Cyclonic Storm) ಎಂದು ವರ್ಗೀಕರಿಸಲಾಗುತ್ತದೆ.
ಗಾಳಿಯ ವೇಗ ಗಂಟೆಗೆ 222 ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಾದರೆ ಅಂತಹ ವ್ಯವಸ್ಥೆಯನ್ನು ಸೂಪರ್ ಸೈಕ್ಲೋನ್ (Super Cyclone) ಎಂದು ಕರೆಯಲಾಗುತ್ತದೆ.

ಪ್ರಮುಖ ಸುದ್ದಿ :-   ದೀಪಾವಳಿ ವ್ಯಾಪಾರಕ್ಕೆ ಅಡ್ಡಿ : 12 ಸಾವಿರ ಕೋಟಿ ರೂ. ನಷ್ಟದ ಭೀತಿ: ನ.1ರ ‌ರ‍್ಯಾಲಿ ಮುಂದೂಡಲು ಸೋನಿಯಾ ಗಾಂಧಿಗೆ ದೆಹಲಿ ವ್ಯಾಪಾರಿಗಳ ಮನವಿ

ಹೊಸ ಹವಾಮಾನ ವ್ಯವಸ್ಥೆಯ ಪ್ರಭಾವದಿಂದ ನವೆಂಬರ್ 1ರಿಂದ 3ರವರೆಗೆ ದೇಶದ ಪೂರ್ವ ಕರಾವಳಿಯಲ್ಲಿ ವಿಶೇಷವಾಗಿ ಆಂಧ್ರಪ್ರದೇಶ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅದರಲ್ಲಿಯೂ ಇತ್ತೀಚೆಗೆ ಅರ್ನಬ್ ಚಂಡಮಾರುತದ ಹೊಡೆತಕ್ಕೆ ತತ್ತರಿಸಿರುವ ಒಡಿಶಾದ ದಕ್ಷಿಣ ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆಯ ಆತಂಕ ಎದುರಾಗಿದೆ.
ಇದೇ ವೇಳೆ, ಇತ್ತೀಚೆಗೆ ಅಪ್ಪಳಿಸಿದ್ದ ಅತ್ಯಂತ ತೀವ್ರ ಸ್ವರೂಪದ ಅರ್ಣಬ್ ಚಂಡಮಾರುತದ ಅವಶೇಷಗಳು ದುರ್ಬಲಗೊಂಡಿದ್ದು, ದಕ್ಷಿಣ ಛತ್ತೀಸ್‌ಗಢ ಮತ್ತು ದಕ್ಷಿಣ ಒಡಿಶಾದ ಗಡಿಭಾಗದಲ್ಲಿ ಜಗದಲ್ಪುರ ಸಮೀಪ ವಾಯುಭಾರ ಕುಸಿತವಾಗಿ ಮಾರ್ಪಟ್ಟಿವೆ ಎಂದು ಐಎಂಡಿ ತಿಳಿಸಿದೆ.
ಒಂದೆಡೆ ಅರ್ನಬ್‌ ಚಂಡಮಾರುತದ ಪ್ರಭಾವ ಕ್ರಮೇಣ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಬಂಗಾಳ ಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತ ರೂಪುಗೊಂಡು ಆಂಧ್ರಪ್ರದೇಶ ಕರಾವಳಿಯತ್ತ ಚಲಿಸುವ ಸಾಧ್ಯತೆಯಿರುವುದು ಪೂರ್ವ ಕರಾವಳಿಯ ಹವಾಮಾನ ಪರಿಸ್ಥಿತಿಯ ಮೇಲೆ ಮತ್ತೆ ಗಮನ ಕೇಂದ್ರೀಕರಿಸುವಂತೆ ಮಾಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement