ಮೈಸೂರು: ಪಬ್‌ನಲ್ಲಿ ಭೀಕರ ಅಗ್ನಿ ಅನಾಹುತ; ಇಬ್ಬರುಸಜೀವ ದಹನ, ಹಲವರಿಗೆ ಗಾಯ

ಮೈಸೂರು: ಇಲ್ಲಿನ ರೆಸ್ಟೋ ಪಬ್‌ (Restopub) ಒಂದರಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರದೃಷ್ಟಕರ ಘಟನೆ ಮೈಸೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಮೃತರನ್ನು ಡಾರ್ಜಿಲಿಂಗ್ ಮೂಲದ 26 ವರ್ಷದ ಸಾಹಿನ್ ಮತ್ತು ನೇಪಾಳ ಮೂಲದ 24 ವರ್ಷದ ಪ್ರಕಾಶ ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಇದೇ ರೆಸ್ಟೋ ಪಬ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಗಾಯಗೊಂಡಿರುವ ಸೋನು, ರಮೇಶ, ಮಹದೇವ ಪ್ರಸಾದ, ಪ್ರಜ್ವಲ್ ಮತ್ತು ಅವಿನಾಶ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ:
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅಗ್ನಿಶಾಮಕ ದಳದ ಅಧಿಕಾರಿ ರಂಗನಾಥ, “ನಾವು ತಕ್ಷಣವೇ ಏಣಿಗಳನ್ನು ಬಳಸಿ ಸುಮಾರು 15 ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದೇವೆ. ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದ್ದು, ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೃತದೇಹಗಳು ಪತ್ತೆಯಾಗಿವೆ” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಆರ್‌ಎಸ್‌ಎಸ್‌ ನೋಂದಣಿ- ಕಾನೂನುಬದ್ಧ ಸ್ಥಿತಿಗತಿಯ ಬಗ್ಗೆ ಸ್ಪಷ್ಟನೆ ಕೋರಿ ಮುಖ್ಯಸ್ಥ ಮೋಹನ ಭಾಗವತ್‌ಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ

“ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ (Short Circuit) ಆದ ಕಾರಣದಿಂದಲೇ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಪಬ್‌ನಲ್ಲಿ ಅಲಂಕಾರಕ್ಕಾಗಿ ಇಟ್ಟಿದ್ದ ಮರದ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ಜ್ವಾಲೆಯು ಅತ್ಯಂತ ವೇಗವಾಗಿ ಪಬ್‌ನಾದ್ಯಂತ ವ್ಯಾಪಿಸಿದೆ” ಎಂದು ಹೇಳಲಾಗಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಏನೆಂಬುದರ ಕುರಿತು ತನಿಖೆ ನಡೆದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement