ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಬ್ರಹ್ಮೋಸ್ ಕ್ಷಿಪಣಿಗೆ ಬಂತು ಭಾರೀ ಬೇಡಿಕೆ ; ಖರೀದಿಸಲು 17 ದೇಶಗಳು ಕ್ಯೂನಲ್ಲಿ…!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ತಲುಪಿಸಲು   ಆಪರೇಷನ್ ಸಿಂಧೂರ ಸೈನ್ಯ ಕಾರ್ಯಾಚರಣೆ ನಡೆಸಲಾಗಿದ್ದು, ಇದರಲ್ಲಿ ಸೂಪರ್‌ಸಾನಿಕ್‌ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಪ್ರಮುಖ ಪಾತ್ರ ವಹಿಸಿತು. ಇದರ ಯಶಸ್ವಿ ಬಳಕೆಯು ಭಾರತದ ನಿಖರ-ದಾಳಿ ಸಾಮರ್ಥ್ಯಗಳನ್ನು ಎತ್ತಿ ತೋರಿಸಿತು ಮತ್ತು ಪಾಕಿಸ್ತಾನ ಮತ್ತು ಅದರಲ್ಲಿ ಒಳಗೊಂಡಿರುವ ಭಯೋತ್ಪಾದಕ ಜಾಲಗಳಿಗೆ ಬಲವಾದ ಪೆಟ್ಟುಕೊಟ್ಟಿತು. ಈಗ ಬ್ರಹ್ಮೋಸ್‌ ಖರೀದಿಗೆ ಪ್ರಮುಖ ದೇಶಗಳು ಆಸಕ್ತಿ ತೋರಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರಹ್ಮೋಸ್ ಕ್ಷಿಪಣಿ ಬಹುಮುಖ ಬಳಕೆಯ ಅಸಾಧಾರಣ ಕ್ಷಿಪಣಿಯಾಗಿದ್ದು, ಭೂಮಿ, ವಾಯು ಮತ್ತು ಸಮುದ್ರದಿಂದ ಉಡಾಯಿಸಬಹುದಾದ ಸಾಮರ್ಥ್ಯವನ್ನು ಹೊಂದಿದ್ದು, ಬಹುಮುಖಿ ನೆಲೆಗಳಿಂದ ದಾಳಿ ಮಾಡಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಇದು, ತನ್ನ ಸೂಪರ್‌ಸಾನಿಕ್ ವೇಗ, ನಿಖರತೆ ಮತ್ತು ವಿವಿಧ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಹೊಂದಿಕೊಳ್ಳುವಿಕೆಗೆ ಹೆಸರುವಾಸಿಯಾಗಿದೆ. ಪಾಕಿಸ್ತಾನದ ವಾಯುನೆಲೆ ಮೇಲೆ ನಡೆದ ದಾಳಿಯಲ್ಲಿ ಭಾರತದ ಸೇನೆ ಇದನ್ನು ಬಳಸಿತ್ತು. ಪಾಕಿಸ್ತಾನದ ರಫೀಕಿ (ಶೋರ್ಕೋಟ್, ಜಾಂಗ್), ಮುರಿದ್ (ಚಕ್ವಾಲ್), ನೂರ್ ಖಾನ್ (ಚಕ್ಲಾಲಾ, ರಾವಲ್ಪಿಂಡಿ) ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ (ಕಸುರ್) ಸ್ಕಾರ್ಡು, ಭೋಲಾರಿ, ಜಕೋಬಾಬಾದ್ ಮತ್ತು ಸರ್ಗೋಧಾದಲ್ಲಿನ ವಾಯು ನೆಲೆಗಳು ಧ್ವಂಸಗೊಂಡಿದ್ದವು.

ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ದೃಢೀಕೃತ ಒಪ್ಪಂದವನ್ನು ಹೊಂದಿರುವ ಏಕೈಕ ದೇಶ ಫಿಲಿಪೈನ್ಸ್, ಜನವರಿ 2022 ರಲ್ಲಿ ಮೂರು ಕರಾವಳಿ ರಕ್ಷಣಾ ಬ್ಯಾಟರಿಗಳಿಗಾಗಿ $375 ಮಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿದೆ. ಮೊದಲ ಬ್ಯಾಟರಿಯನ್ನು ಏಪ್ರಿಲ್ 2024 ರಲ್ಲಿ ವಿತರಿಸಲಾಯಿತು, ಎರಡನೆಯದನ್ನು ಏಪ್ರಿಲ್ 2025 ರಲ್ಲಿ ನಿರೀಕ್ಷಿಸಲಾಗಿದೆ.
ಅದರ ವೇಗ ಮತ್ತು ನಿಖರತೆಗೆ ಹೆಸರುವಾಸಿಯಾದ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಒಂದು ಡಜನ್‌ಗಿಂತಲೂ ಹೆಚ್ಚು ದೇಶಗಳು ಆಸಕ್ತಿ ತೋರಿವೆ ಹಾಗೂ ಪ್ರಸ್ತುತ ಹಲವಾರು ರಾಷ್ಟ್ರಗಳು ಇದರ ಖರೀದಿಗೆ ಮಾತುಕತೆ ನಡೆಸುತ್ತಿವೆ.
ಇಂಡೋನೇಷ್ಯಾ: ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಸುಧಾರಿತ ಆವೃತ್ತಿ ಖರೀದಿಗೆ ಇಂಡೋನೇಷ್ಯಾ $200–$350 ಮಿಲಿಯನ್ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿದೆ.
ವಿಯೆಟ್ನಾಂ: ವಿಯೆಟ್ನಾಂ ತನ್ನ ಭೂಸೇನೆ ಮತ್ತು ನೌಕಾಪಡೆ ಎರಡಕ್ಕೂ ಕ್ಷಿಪಣಿಗಳ ಪೂರೈಕೆಯನ್ನು ಒಳಗೊಂಡಂತೆ $700 ಮಿಲಿಯನ್ ಒಪ್ಪಂದದ ಬಗ್ಗೆ ಯೋಜಿಸುತ್ತಿದೆ.
ಮಲೇಷ್ಯಾ: ಮಲೇಷ್ಯಾ ತನ್ನ ಸುಖೋಯ್ ಸು-30ಎಂಕೆಎಂ ಯುದ್ಧ ವಿಮಾನಗಳು ಮತ್ತು ಕೆಡಾ-ವರ್ಗದ ಯುದ್ಧನೌಕೆಗಳಿಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸುವ ಬಗ್ಗೆ ಯೋಚಿಸುತ್ತಿದೆ.
ಥೈಲ್ಯಾಂಡ್, ಸಿಂಗಾಪುರ, ಬ್ರೂನೈ: ಈ ಆಗ್ನೇಯ ಏಷ್ಯಾದ ದೇಶಗಳು ಬ್ರಹ್ಮೋಸ್‌ ಬಗ್ಗೆ ಆಸಕ್ತಿ ತೋರಿಸಿವೆ ಮತ್ತು ಮಾತುಕತೆಯ ವಿವಿಧ ಹಂತಗಳಲ್ಲಿವೆ.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

ಬ್ರೆಜಿಲ್, ಚಿಲಿ, ಅರ್ಜೆಂಟೀನಾ, ವೆನೆಜುವೆಲಾ: ಈ ಲ್ಯಾಟಿನ್ ಅಮೇರಿಕನ್ ದೇಶಗಳು ಕ್ಷಿಪಣಿಯ ನೌಕಾ ಮತ್ತು ಕರಾವಳಿ ರಕ್ಷಣಾ ರೂಪಾಂತರಗಳ ಮೇಲೆ ಕಣ್ಣಿಟ್ಟಿವೆ.
ಈಜಿಪ್ಟ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕತಾರ್, ಓಮನ್: ಈ ಮಧ್ಯಪ್ರಾಚ್ಯ ದೇಶಗಳು ಸಹ ಆಸಕ್ತಿ ವ್ಯಕ್ತಪಡಿಸಿವೆ, ಅವುಗಳಲ್ಲಿ ಕೆಲವು ದೇಶಗಳೊಂದಿಗೆ ಮಾತುಕತೆ ಮುಂದುವರೆದಿದೆ.
ದಕ್ಷಿಣ ಆಫ್ರಿಕಾ, ಬಲ್ಗೇರಿಯಾ: ದಕ್ಷಿಣ ಆಫ್ರಿಕಾ ಮತ್ತು ಬಲ್ಗೇರಿಯಾ ಸಂಭಾವ್ಯ ಖರೀದಿಗಾಗಿ ಮಾತುಕತೆಯ ವಿವಿಧ ಹಂತಗಳಲ್ಲಿವೆ.
ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯು ಪ್ರಸ್ತುತ ಭಾರತದ ಅತ್ಯಂತ ವೇಗದ ಕ್ರೂಸ್ ಕ್ಷಿಪಣಿಯಾಗಿದೆ. ಜೂನ್ 12, 2001 ರಂದು ಮೊದಲು ಪರೀಕ್ಷಿಸಲಾಯಿತು, ನಂತರ ಅನೇಕ ಹಂತಗಳಲ್ಲಿ ನವೀಕರಿಣ ಮಾಡುವ ಮೂಲಕ ಸಾಮರ್ಥ್ಯಗಳನ್ನು ಹೆಚ್ಚಿಸಲಾಗಿದೆ. ಮಾನವರಹಿತ, ಸೂಪರ್‌ಸಾನಿಕ್ ಕ್ಷಿಪಣಿಯಾದ ಬ್ರಹ್ಮೋಸ್, ಮ್ಯಾಕ್ 3 ವೇಗದಲ್ಲಿ ಚಲಿಸಬಲ್ಲದು ಮತ್ತು ಪ್ರಮಾಣಿತ 290 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ, ಇದು ಅದರ ಮುಂದುವರಿದ ರೂಪಾಂತರಗಳಲ್ಲಿ 500 ಕಿ.ಮೀ- 800 ಕಿ.ಮೀ ವರೆಗೆ ವಿಸ್ತರಿಸುತ್ತದೆ. ಇದು 200 ರಿಂದ 300 ಕಿಲೋಗ್ರಾಂಗಳಷ್ಟು ತೂಕದ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 15 ಕಿ.ಮೀ ಎತ್ತರದಲ್ಲಿ ಹಾರಬಲ್ಲದು. ಇದು ನೆಲಮಟ್ಟದಿಂದ 10 ಮೀಟರ್‌ಗಳಷ್ಟು ಕಡಿಮೆ ಎತ್ತರದ ಗುರಿಗಳನ್ನು ಹೊಡೆಯಬಲ್ಲದು, ಇದು ನಿಖರವಾದ ದಾಳಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement