
ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 4 ಸಾರಿಗೆ ನಿಗಮಗಳ ನೌಕರರ ಸಂಘಗಳ ಒಕ್ಕೂಟವು ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದೂಡಿದೆ.
ಇಂದಿನಿಂದ (ಆಗಸ್ಟ್ ೫ರಿಂದ) ಕರೆಕೊಟ್ಟಿದ್ದ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ. ತಕ್ಷಣದಿಂದ ಬಸ್‌ಗಳ ಸಂಚಾರ ಆರಂಭಿಸಲು ಸಂಘಟನೆಗಳ ಮುಖಂಡರು ಸೂಚನೆ ನೀಡಿದ್ದಾರೆ. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿದ್ದ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಜೆಎಸಿ)ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್ ಮುಷ್ಕರ ನಡೆಸಬಾರದೆಂದು ಆದೇಶ ನೀಡಿದ್ದರೂ, ನೀವು ಪಾಲಿಸಿಲ್ಲ. ನಾಳೆ (ಬುಧವಾರ) ಮುಷ್ಕರ ನಿಂತಿರುವ ಬಗ್ಗೆ ಮಾಹಿತಿ ನೀಡಬೇಕೆಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿತು. ಮುಷ್ಕರ ನಿಂತಿರುವ ಬಗ್ಗೆ ಮಾಹಿತಿ ನೀಡಬೇಕು, ನಾಳೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತು. ಈ ವೇಳೆ ನಾಳೆ (ಬುಧವಾರ) ಸಾರಿಗೆ ನೌಕರರು ಮುಷ್ಕರ ನಡೆಸುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದರು.

ಹೈಕೋರ್ಟ್ ಆದೇಶದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಜೆಎಸಿ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಅವರು, ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಮುಂದೂಡಿಕೆಯಾಗಿದೆ. ಎಲ್ಲಾ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿ . ಈ ಕ್ಷಣದಿಂದಲೇ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕರೆ ನೀಡಿದರು.
ವೇತನ ಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯ ಮಾಡಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳು ಮಂಗಳವಾರದಿಂದ ಮುಷ್ಕರ ಆರಂಭಿಸಿದ್ದವು. ಮಂಗಳವಾರ ಬೆಳಿಗ್ಗೆಯಿಂದಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಬೇಕಾಯಿತು. ಈಗ ಹೈಕೋರ್ಟ್ ಸೂಚನೆ ಮೇರೆಗೆ ಮುಷ್ಕರ ಮುಂದೂಡಲಾಗಿದೆ.
ಮುಂದೂಡಿಕೆ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಖ್ಯಸ್ಥ ಅನಂತ ಸುಬ್ಬರಾವ್, ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ನೌಕರರು ಬಸ್‌ಗಳ ಸಂಚಾರ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ ರಾಜ್ಯದಾದ್ಯಂತ ಕೈಗೊಂಡ ಅನಿರ್ಧಿಷ್ಟವದಿ ಮುಷ್ಕರದ ಬಿಸಿ ಕಲ್ಯಾಣ ನಾಡಿನ ಕೇಂದ್ರ ಸ್ಥಾನ ಕಲಬುರಗಿಗೂ ತಟ್ಟಿತ್ತು. ಕಲಬುರಗಿಯಲ್ಲೂ ಬಂದ್ ಬಿಸಿ ಭಾರಿ ಪ್ರಮಾಣದಲ್ಲಿ ತಟ್ಟಿದ್ದು, ಒಂದೇ ಒಂದು ಬಸ್ ಸಹ ರಸ್ತೆಗೆ ಇಳಿಯದ ಹಿನ್ನಲೆ ಪ್ರತಿನಿತ್ಯ ಬೆಳಗಿನ ಜಾವವೇ ಎದ್ದು ದೂರದ ಶಾಲಾ, ಕಾಲೇಜ್, ನೌಕರಿಗಳಿಗೆ ಹೋಗುವವರು ಭಾರಿ ಪರದಾಟ ನಡೆಸಿದರು. ಜತೆಗೆ ದೂರದೂರಿನಿಂದ ಆಸ್ಪತ್ರೆ ಸೇರಿ ವಿವಿಧ ಕಾರ್ಯ ನಿಮಿತ್ತ ಆಗಮಿಸಿ ಮರಳಿ ತಮ್ಮ ಊರಿಗೆ ಹೋಗುವ ಪ್ರಯಾಣಿಕರು ಸಹ ತೊಂದರೆ ಪಡಬೇಕಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ