ಚಿಕ್ಕಮಗಳೂರು : ಜಿಲ್ಲೆಯ ಬೀರೂರಿನಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ ಎಂದು ವರದಿಯಾಗಿದೆ.
ಮನೆಯಲ್ಲಿ ಹಿರಿಯರು ಮೃತಪಟ್ಟರೆ ಅಂತ್ಯ ಸಂಸ್ಕಾರ (funeral) ಹಾಗೂ ದೇಹಕ್ಕೆ ಅಗ್ನಿಸ್ಪರ್ಶ ಮಾಡುವ ವಿಧಿ-ವಿಧಾನಗಳನ್ನು ಸಾಮಾನ್ಯವಾಗಿ ಗಂಡು ಮಕ್ಕಳೇ ಮಾಡುವುದು ವಾಡಿಕೆಯಾಗಿ ಬಂದಿದೆ. ಆದರೆ ಇಲ್ಲಿ ಮೃತರ ಇಬ್ಬರು ಪುತ್ರಿಯರೇ ತಮ್ಮ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಬೀರೂರಿನಲ್ಲಿ ಭಾವಸಾರ ಸಮಾಜದ ಬಾಂಗ್ರೆ ಬಿ.ಎಸ್. ವಿಶ್ವನಾಥ ಅವರು ನಿಧನರಾದರು. ಅವರಿಗೆ ಗಂಡು ಮಕ್ಕಳು ಇಲ್ಲದ ಕಾರಣ ಅವರ ಮಗಳಾದ ಬಿ.ವಿ. ಐಶ್ವರ್ಯ, ತಾನೇ ಅಂತ್ಯಸಂಸ್ಕಾರದ ವಿಧಿ ನೆರವೇರಿಸುವುದಾಗಿ ಕುಟುಂಬದ ಹಿರಿಯರಲ್ಲಿ ತಿಳಿಸಿದಾಗ ಎಲ್ಲರೂ ಒಪ್ಪಿಗೆ ನೀಡಿದರು. ತಂಗಿ ಭಾವನಾ ಅವರ ಜತೆಗೂಡಿ ಶುಕ್ರವಾರ ಅಂತ್ಯಕ್ರಿಯೆ ನಡೆಸಿದರು.ಮೃತದೇಹದ ಸುತ್ತ ಹೆಗಲ ಮೇಲೆ ಕುಡಿಕೆ ಹೊತ್ತು ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಹೆಣ್ಣುಮಗಳು ಎಲ್ಲರ ಗಮನ ಸೆಳೆದರು. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕುಟುಂಬ ಸದಸ್ಯರು, ಹಿರಿಯರು, ಸ್ನೇಹಿತರು ಇವರಿಗೆ ಸಹಕರಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ