ಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು

ಸೋನಿಪತ್ (ಹರಿಯಾಣ) : ತಮ್ಮ ಜೀವನವನ್ನೇ ಮೂವರು ಪುತ್ರಿಯರ ಶಿಕ್ಷಣ, ಭವಿಷ್ಯ ಮತ್ತು ಸುಖಕ್ಕಾಗಿ ಮುಡಿಪಾಗಿಟ್ಟಿದ್ದ ತಂದೆಯೊಬ್ಬರು ಹರಿಯಾಣದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದು, ಅವರ ಅಂತ್ಯಕ್ರಿಯೆಗೆ ಮೂವರು ಪುತ್ರಿಯರೂ ಬರಲಿಲ್ಲ. ಬದಲಾಗಿ, ನೇಪಾಳ, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿದ್ದ ಅವರು ವಿಡಿಯೊ ಕಾಲ್ ಮೂಲಕ ತಂದೆಯ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದ ಘಟನೆ ನಡೆದಿದೆ.
ಮುಂಬೈ ಮೂಲದ ಹಾಗೂ ಮಾಜಿ ಜವಳಿ ವ್ಯಾಪಾರಿಯಾಗಿದ್ದ ಶಿವಚರಣ ರಾಮ ರತನ್ ಗುಪ್ತಾ ಅವರು ಕಳೆದ ಸುಮಾರು ಎರಡು ವರ್ಷಗಳಿಂದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಪತ್ನಿ ಮೀನಾ ಅವರ ಜೊತೆ ಅಲ್ಲಿಗೆ ಬಂದಿದ್ದ ಅವರು, ಪತ್ನಿ ಕೆಲವು ತಿಂಗಳ ಹಿಂದೆಯೇ ನಿಧನ ಹೊಂದಿದ ಬಳಿಕ ಒಬ್ಬರೇ ವೃದ್ಧಾಶ್ರಮದಲ್ಲಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಚರಣ ಗುಪ್ತಾ ಅವರು ಮಂಗಳವಾರ ಮುಂಜಾನೆ ಸುಮಾರು 3:30 ಗಂಟೆಗೆ ಕೊನೆಯುಸಿರೆಳೆದರು. ಅವರ ನಿಧನದ ತಕ್ಷಣವೇ ವೃದ್ಧಾಶ್ರಮದ ಆಡಳಿತವು ಮೂವರು ಪುತ್ರಿಯರಿಗೂ ಮಾಹಿತಿ ನೀಡಿತು.

ವಿಡಿಯೊ ಕಾಲ್ ಮೂಲಕವೇ ಅಂತಿಮ ವಿಧಿವಿಧಾನ ವೀಕ್ಷಣೆ
ತಂದೆಯ ಅಂತ್ಯಸಂಸ್ಕಾರಕ್ಕೆ ಸೋನಿಪತ್‌ಗೆ ಬರಲು ವೃದ್ಧಾಶ್ರಮದ ಆಡಳಿತವು ಅವಕಾಶ ಕಲ್ಪಿಸುವುದಾಗಿ ತಿಳಿಸಿದರೂ, ಪುತ್ರಿಯರು ತಮಗೆ ಪ್ರಯಾಣಿಸಲು ಸಮಯವಿಲ್ಲ ಎಂದು ತಿಳಿಸಿದರು. ಪರಿಣಾಮವಾಗಿ, ವೃದ್ಧಾಶ್ರಮದ ಆಡಳಿತ ಮತ್ತು ಸ್ಥಳೀಯ ನಿವಾಸಿಗಳ ಸಹಕಾರದಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಪುತ್ರಿಯರು ವಿಡಿಯೊ ಕಾಲ್ ಮೂಲಕ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದರು.
ಅನಾರೋಗ್ಯದ ಮಾಹಿತಿ ಮುಂಚೆಯೇ ನೀಡಲಾಗಿತ್ತು
ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದಕುಮಾರ ಅವರ ಪ್ರಕಾರ, ಶಿವಚರಣ ಗುಪ್ತಾ ಅವರ ಬಳಿ ಮೊಬೈಲ್ ಫೋನ್ ಇದ್ದು, ಅದರ ಮೂಲಕ ಅವರು ಪುತ್ರಿಯರೊಂದಿಗೆ ಆಗಾಗ ಮಾತನಾಡುತ್ತಿದ್ದರು. ಆದರೆ ಆರೋಗ್ಯ ಹದಗೆಟ್ಟ ನಂತರ ಅವರೊಂದಿಗೆ ದೂರವಾಣಿ ಸಂಪರ್ಕ ಕಡಿಮೆಯಾಯಿತು.
ಸುಮಾರು 20 ದಿನಗಳ ಹಿಂದೆಯೇ ತಂದೆಯ ಆರೋಗ್ಯ ಗಂಭೀರವಾಗಿದೆ ಎಂದು ಪುತ್ರಿಯರಿಗೆ ತಿಳಿಸಲಾಗಿತ್ತು. ಆದರೂ ಅವರು ಭೇಟಿಗೆ ಬರಲಿಲ್ಲ ಎಂದು ತಿಳಿಸಿದ್ದಾರೆ.
“ಶಿವಚರಣ ಅವರ ಬಳಿ ಫೋನ್ ಇತ್ತು. ಅದರಲ್ಲಿ ಅವರು ತಮ್ಮ ಪುತ್ರಿಯರೊಂದಿಗೆ ಮಾತನಾಡುತ್ತಿದ್ದರು. ಆದರೆ ಅವರು ಅಸ್ವಸ್ಥರಾದ ನಂತರ ಕರೆಗಳು ಕಡಿಮೆಯಾದವು. ಅವರ ಆರೋಗ್ಯದ ಬಗ್ಗೆ ನಾವು ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ, ಮಕ್ಕಳು ಅವರನ್ನು ನೋಡಲು ಬರಲಿಲ್ಲ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜನ್‌ ಝಡ್‌ (Gen Z) ಅಹವಾಲುಗಳು ನ್ಯಾಯಸಮ್ಮತ; ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ: ಮೋಹನ ಭಾಗವತ್

₹5,100 ಕಳುಹಿಸಿದ ಪುತ್ರಿ
ನೇಪಾಳದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಪುತ್ರಿ ಅನಿತಾ ಅವರು ಆನ್‌ಲೈನ್ ಮೂಲಕ ₹5,100 ಹಣ ಕಳುಹಿಸಿ, ತಂದೆಯ ಅಂತ್ಯಕ್ರಿಯೆಯನ್ನು ವಿಧಿವಿಧಾನಬದ್ಧವಾಗಿ ನೆರವೇರಿಸುವಂತೆ ವೃದ್ಧಾಶ್ರಮದ ಆಡಳಿತವನ್ನು ಕೋರಿದರು.
ಅಂತ್ಯಕ್ರಿಯೆ ಮುಗಿದ ಬಳಿಕ ಅದರ ವಿಡಿಯೊವನ್ನು ಕೂಡ ಕಳುಹಿಸುವಂತೆ ಪುತ್ರಿಯರು ಮನವಿ ಮಾಡಿದರು. ವಿಡಿಯೊ ಕಾಲ್ ವೇಳೆ ಪುತ್ರಿಯರಲ್ಲಿ ಒಬ್ಬರು, “ಇನ್ನೆಷ್ಟು ಸಮಯ ಆಗುತ್ತದೆ? ನಮಗೆ ಊಟ ಮಾಡಬೇಕು, ಸ್ನಾನವೂ ಮಾಡಬೇಕು” ಎಂದು ಹೇಳಿರುವುದು ಅಲ್ಲಿದ್ದವರ ಮನಸ್ಸಿಗೆ ನೋವುಂಟು ಮಾಡಿತು.
ಮಕ್ಕಳ ಶಿಕ್ಷಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ತಂದೆ
ಶಿವಚರಣ ಗುಪ್ತಾ ಅವರು ತಮ್ಮ ಮೂವರು ಪುತ್ರಿಯರಿಗೂ ಉತ್ತಮ ಶಿಕ್ಷಣ ನೀಡಲು ಜೀವನವಿಡೀ ಶ್ರಮಿಸಿದ್ದರು. ಪುತ್ರಿಯರ ಸಾಧನೆಯ ಬಗ್ಗೆ ಅವರಿಗೆ ಅಪಾರ ಹೆಮ್ಮೆ ಇತ್ತು ಎಂದು ವೃದ್ಧಾಶ್ರಮದ ಆಡಳಿತ ತಿಳಿಸಿದೆ. ಅವರ ಮೂವರು ಪುತ್ರಿಯರಲ್ಲಿ ಇಬ್ಬರು ಶಿಕ್ಷಕಿಯರಾಗಿದ್ದಾರೆ. ಹಿರಿಯ ಪುತ್ರಿ ನೇಪಾಳದಲ್ಲಿ ಶಿಕ್ಷಕಿ, ಎರಡನೆಯ ಪುತ್ರಿ ಉತ್ತರ ಪ್ರದೇಶದ ಆಜಂಘಢ್ ನಿವಾಸಿ ಹಾಗೂ ಮೂರನೆಯ ಪುತ್ರಿ ಮುಂಬೈ ನಿವಾಸಿಯಾಗಿದ್ದಾರೆ. ಮೂವರೂ ವಿವಾಹಿತರಾಗಿದ್ದು, ತಮ್ಮ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ : ತೆಹಲ್ಕಾ ಮಾಜಿ ಸಂಪಾದಕ ತರುಣ ತೇಜಪಾಲಗೆ 10 ವರ್ಷ ಜೈಲು ಶಿಕ್ಷೆ

ಅಸ್ಥಿಗಳನ್ನು ಗಂಗೆಯಲ್ಲಿ ವಿಸರ್ಜಿಸಲು ಮನವಿ
ಆರಂಭದಲ್ಲಿ ತಂದೆಯ ಅಸ್ಥಿಗಳನ್ನು ಸಂಗ್ರಹಿಸಿಡುವಂತೆ ಪುತ್ರಿಯರು ವೃದ್ಧಾಶ್ರಮದ ಆಡಳಿತವನ್ನು ಕೋರಿದ್ದರು. ಬಳಿಕ ತಮಗೆ ಸೋನಿಪತ್‌ಗೆ ಬರಲು ಸಮಯವಿಲ್ಲ ಎಂದು ತಿಳಿಸಿ, ಅಸ್ಥಿಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸುವಂತೆ ಮನವಿ ಮಾಡಿದರು.
ಸಾವಿನ ಬಳಿಕ ನೇತ್ರದಾನ
ಈ ಘಟನೆಯಲ್ಲಿ ಮತ್ತೊಂದು ಮಹತ್ವದ ಸಂಗತಿ ಎಂದರೆ, ಶಿವಚರಣ ಗುಪ್ತಾ ಅವರ ಕಣ್ಣುಗಳನ್ನು ಅವರ ಕುಟುಂಬದ ಇಚ್ಛೆಯಂತೆ ದಾನ ಮಾಡಲಾಯಿತು. ಅವರ ನೇತ್ರದಾನದಿಂದ ದೃಷ್ಟಿಹೀನರಿಗೆ ಬೆಳಕು ದೊರೆಯುವ ಸಾಧ್ಯತೆ ಇದೆ. ಈ ಮೂಲಕ ಅವರ ಸಾವಿನ ನಂತರವೂ ಮತ್ತೊಬ್ಬರ ಬದುಕಿಗೆ ಬೆಳಕಾಗುವ ಮಾನವೀಯ ಕಾರ್ಯ ನೆರವೇರಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement