ಜರ್ಮನ್ ಚಾನ್ಸಲರ್ ನಿರ್ಲಕ್ಷಿಸಿ ರಾಹುಲ್ ಗಾಂಧಿ ಸ್ವಾಗತಕ್ಕೆ ಸಿಎಂ, ಡಿಸಿಎಂ ಆದ್ಯತೆ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು : ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರ ಸ್ವಾಗತಕ್ಕೆ ಸಚಿವರೊಬ್ಬರನ್ನು ನಿಯೋಜಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಳ್ಳಲು ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಕಾಂಗ್ರೆಸ್‌ಗೆ ‘ಹೈಕಮಾಂಡ್ ಓಲೈಕೆ’ಯೇ ಮುಖ್ಯವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಜರ್ಮನ್ ಚಾನ್ಸಲರ್ ಮೆರ್ಜ್ ಅವರು ಮಂಗಳವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಹಿರಿಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು.

ಈ ಬಗ್ಗೆ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿರುವ ವಿಧಾನಸಭೆಯ ವಿಪಕ್ಷದ ನಾಯಕ ಆರ್. ಅಶೋಕ ಅವರು, ಸಿದ್ದರಾಮಯ್ಯ ಮತ್ತು ಶಿವಕುಮಾರ ಅವರ ನಡೆ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ. ” ಜರ್ಮನ್ ಚಾನ್ಸಲರ್ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಇದು ನಮ್ಮ ರಾಜ್ಯದ ರಾಜತಾಂತ್ರಿಕ, ಆರ್ಥಿಕ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ಷಣವಾಗಿದೆ. ಯಾವುದೇ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿದ್ದರೆ, ಈ ಭೇಟಿಯನ್ನು ಗಂಭೀರವಾಗಿ ಪರಿಗಣಿಸಿ ಹೂಡಿಕೆ, ಉದ್ಯಮ ಮತ್ತು ಉದ್ಯೋಗದ ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದ್ದರು ” ಎಂದು ಅಶೋಕ ಬರೆದಿದ್ದಾರೆ.

ರಾಜಕೀಯ ನಿಷ್ಠೆಯೇ ಮೊದಲು:
“ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾದ ದೇಶದ ಮುಖ್ಯಸ್ಥರು ಬೆಂಗಳೂರಿಗೆ ಬಂದಾಗ, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಊಟಿಗೆ ಪ್ರಯಾಣಿಸುತ್ತಿದ್ದ ರಾಹುಲ್ ಗಾಂಧಿಯವರನ್ನು ಸ್ವಾಗತಿಸಲು ಮೈಸೂರಿನಲ್ಲಿದ್ದರು. ಇದು ಕರ್ನಾಟಕದ ಹಿತಾಸಕ್ತಿ ಬಗ್ಗೆ ಕಾಂಗ್ರೆಸ್‌ಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಅವರಿಗೆ ರಾಜ್ಯದ ಸ್ಥಾನಮಾನಕ್ಕಿಂತ ರಾಜಕೀಯ ನಿಷ್ಠೆ ಮತ್ತು ಹೈಕಮಾಂಡ್ ಓಲೈಕೆಯೇ ಮುಖ್ಯವಾಯಿತು,” ಎಂದು ಅವರು ಲೇವಡಿ ಮಾಡಿದ್ದಾರೆ.
ಕಳೆದ ತಿಂಗಳು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಿದ್ದ ಔತಣಕೂಟಕ್ಕೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸದಿದ್ದಾಗ ಇದೇ ಕಾಂಗ್ರೆಸ್ ಪ್ರತಿಭಟಿಸಿತ್ತು ಎಂದು ಬಿಜೆಪಿ ನಾಯಕರು ನೆನಪಿಸಿದ್ದಾರೆ.
ಮಂಗಳವಾರ ಬೆಂಗಳೂರು ಭೇಟಿಯ ಸಮಯದಲ್ಲಿ ಜರ್ಮನ್ ಚಾನ್ಸಲರ್ ಮತ್ತು ಅವರ ನಿಯೋಗವು ಅಡುಗೋಡಿಯ ‘ಬಾಷ್’ (Bosch) ಕ್ಯಾಂಪಸ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (IISc) ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಕೇಂದ್ರಕ್ಕೆ ಭೇಟಿ ನೀಡಿತು. ಅದೇ ದಿನ ಸಂಜೆ ಅವರು ಬೆಂಗಳೂರಿನಿಂದ ನಿರ್ಗಮಿಸಿದರು.

ಪ್ರಮುಖ ಸುದ್ದಿ :-   ದೆಹಲಿ ಹೊಟೇಲ್‌ ಅಗ್ನಿ ದುರಂತ : ಐಸಿಯುನಲ್ಲಿದ್ದ ತಂದೆ ಸನಿಹ ಇರಲು ಹೊಟೇಲ್‌ನಲ್ಲಿ ತಂಗಿದ್ದ ಸಿಎ ಕುಟುಂಬದ 8 ಮಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement