ಹೆತ್ತ ತಾಯಿಯ ಹುಡುಕಾಟಕ್ಕಾಗಿ 40 ವರ್ಷಗಳ ನಂತರ ಭಾರತಕ್ಕೆ ಬಂದ ನೆದರ್ಲ್ಯಾಂಡ್ಸ್ ನಗರದ ಮೇಯರ್…!

ನಾಗಪುರ: ಅದು 1985ರ ಫೆಬ್ರವರಿ ತಿಂಗಳು. ಮಹಾರಾಷ್ಟ್ರದ ನಾಗಪುರದ ಅಂಬಾಜರಿ ರಸ್ತೆಯಲ್ಲಿರುವ ‘ಮಾತೃ ಸೇವಾ ಸಂಘ’ದ ಮುಂದೆ 21 ವರ್ಷದ ಯುವತಿಯೊಬ್ಬಳು ತನ್ನ ಮೂರೇ ದಿನದ ಕಂದಮ್ಮನನ್ನು ಬಿಟ್ಟು ನಾಪತ್ತೆಯಾಗಿದ್ದರು. ಅವಿವಾಹಿತೆಯಾಗಿದ್ದ ಆಕೆಗೆ ಅಂದು ಅಸಹಾಯಕತೆ ಮತ್ತು ಸಾಮಾಜಿಕ ಒತ್ತಡಗಳೇ ದೊಡ್ಡದಾಗಿದ್ದರಿಂದ ಆಕೆ ಹೀಗೆ ಮಾಡಿದ್ದಿರಬಹುದು. ಇಂದು ಅದೇ ಮಗು 40 ವರ್ಷಗಳ ನಂತರ ದೂರದ ದೇಶದಿಂದ ದೊಡ್ಡ ವ್ಯಕ್ತಿಯಾಗಿ ಬಂದು  ಬಂದು ತನ್ನನ್ನು ಹೆತ್ತ ತಾಯಿಗಾಗಿ ನಾಗಪುರದ ಬೀದಿಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಆ ಮಗುವೇ ಇಂದಿನ ಫಾಲ್ಗುಣ ಬಿನ್ನೆಂಡಿಜ್ಕ್ (Falgun Binnendijk). ಪ್ರಸ್ತುತ ನೆದರ್ಲ್ಯಾಂಡ್ಸ್‌ನ ‘ಹೀಮ್‌ಸ್ಟೆಡ್’ ನಗರದ ಮೇಯರ್ ಆಗಿರುವ ಇವರು, ತಮಗೆ ಜನ್ಮ ನೀಡಿದ ತಾಯಿಯನ್ನು ಭೇಟಿಯಾಗಲು ಮೂರನೇ ಬಾರಿಗೆ ಭಾರತಕ್ಕೆ ಬಂದಿದ್ದಾರೆ.
ಹೆಸರಿಟ್ಟ ನರ್ಸ್ ಭೇಟಿ: ಕಣ್ಣೀರ ಕ್ಷಣ
ಫಾಲ್ಗುಣ ಜನಿಸಿದ್ದು 1985ರ ಫೆಬ್ರವರಿ ತಿಂಗಳಲ್ಲಿ. ಹಾಗಾಗಿ ಅಂದು ಆಶ್ರಮದಲ್ಲಿದ್ದ ನರ್ಸ್ ಒಬ್ಬರು ಅವರಿಗೆ ‘ಫಾಲ್ಗುಣ’ ಎಂದು ಹೆಸರಿಟ್ಟಿದ್ದರು. ಈ ಬಾರಿ ನಾಗಪುರಕ್ಕೆ ಭೇಟಿ ನೀಡಿದಾಗ, ಅಂದು ತಮಗೆ ಹೆಸರಿಟ್ಟಿದ್ದ ಅದೇ ನಿವೃತ್ತ ನರ್ಸ್ ಅವರನ್ನು ಭೇಟಿಯಾಗುವಲ್ಲಿ ಫಾಲ್ಗುಣ ಯಶಸ್ವಿಯಾಗಿದ್ದಾರೆ. ಆ ನರ್ಸ್ ಅವರನ್ನು ಕಂಡಾಗ ಫಾಲ್ಗುಣ ಭಾವುಕರಾಗಿ ಕಣ್ಣೀರು ಹಾಕಿದರು. ತಮ್ಮ ಬದುಕಿನ ಮೊದಲ ದಿನಗಳಲ್ಲಿ ತಮ್ಮನ್ನು ನೋಡಿಕೊಂಡಿದ್ದ ವ್ಯಕ್ತಿಯನ್ನು ಭೇಟಿಯಾದ ಕ್ಷಣ ಅವರಿಗೆ ಅವಿಸ್ಮರಣೀಯವಾಗಿತ್ತು.
ತಮ್ಮ ದತ್ತು ಸ್ವೀಕಾರದ ಬಗ್ಗೆ ಫಾಲ್ಗುಣ ಅವರಿಗೆ ಬಾಲ್ಯದಿಂದಲೇ ತಿಳಿದಿತ್ತು.ತಮ್ಮ ಡಚ್ ಪೋಷಕರು ಯಾವುದನ್ನೂ ತಮ್ಮಿಂದ ಯಾವುದನ್ನೂ ಮುಚ್ಚಿಟ್ಟಿರಲಿಲ್ಲ ಎಂದು ಅವರು TOIಗೆ ತಿಳಿಸಿದ್ದಾರೆ. ಮಹಾಭಾರತ ಓದಿದ ಫಾಲ್ಗುಣ ಅವರಿಗೆ ಕರ್ಣನ ಪಾತ್ರ ತುಂಬಾ ಹತ್ತಿರವಾಯಿತು. “ಪ್ರತಿಯೊಬ್ಬ ಕರ್ಣನಿಗೂ ತನ್ನ ಕುಂತಿಯನ್ನು ಭೇಟಿಯಾಗುವ ಹಕ್ಕಿದೆ” ಎಂದು ಅವರು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಬದುಕಿನ ಹಾದಿ ಮತ್ತು ಅನ್ವೇಷಣೆ:
1985ರಲ್ಲಿ ಅವರು ಮಾತೃ ಸೇವಾ ಸಂಘದಿಂದ ಮುಂಬೈಗೆ, ಅಲ್ಲಿಂದ ನೆದರ್ಲ್ಯಾಂಡ್ಸ್‌ಗೆ ದತ್ತು ಹೋದರು. 2006ರಲ್ಲಿ ತಮ್ಮ 21ನೇ ವಯಸ್ಸಿನಲ್ಲಿ ಅವರು ಪ್ರವಾಸಿಗನಾಗಿ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. 2017ರಲ್ಲಿ ತಾಯಿಯ ಹುಡುಕಾಟಕ್ಕಾಗಿ ಅವರು ಎರಡನೇ ಸಲ ಭಾರತಕ್ಕೆ ಭೇಟಿ ನೀಡಿದ್ದರು. ಅವರಿಗೆ ದಾಖಲೆಗಳಲ್ಲಿ ತಾಯಿಯ ಹೆಸರು ಸಿಕ್ಕರೂ ವಿಳಾಸ ಮಾತ್ರ ಪತ್ತೆಯಾಗಲಿಲ್ಲ.
2025ರಲ್ಲಿ ನೆದರ್ಲ್ಯಾಂಡ್ಸ್‌ನ ಆಮ್ಸ್ಟರ್‌ಡ್ಯಾಮ್ ಬಳಿಯ ಹೀಮ್‌ಸ್ಟೆಡ್‌ನ ಮೇಯರ್ ಆಗಿ ಆಯ್ಕೆಯಾಗಿರುವ ಫಾಲ್ಗುಣ ಈಗ ನಾಲ್ಕು ಮಕ್ಕಳ ತಂದೆ.  ಅವರು ತಮ್ಮ ಹೆತ್ತ ತಾಯಿಯ ಹುಡುಕಾಟಕ್ಕೆ ಮತ್ತೆ ನಾಗಪುರಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರಿಗಳ ಸಹಾಯದಿಂದ ಹಳೆಯ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ತಮ್ಮ ಹೆತ್ತ ತಾಯಯನ್ನು ಹುಡುಕುತ್ತಿದ್ದಾರೆ. ಡಿಸೆಂಬರ್ 2025 ರಲ್ಲಿ, ಪರಿಶ್ರಮ ಅನಿರೀಕ್ಷಿತ ರೀತಿಯಲ್ಲಿ ಅವರಿಗೆ ಫಲ ನೀಡಿತು. ಅಧಿಕಾರಿಗಳು ಮಾತೃ ಸೇವಾ ಸಂಘದ ನಿವೃತ್ತ ನರ್ಸ್ ಅನ್ನು ಪತ್ತೆಹಚ್ಚಿದರು. ಫಾಲ್ಗುಣ ಬಿನ್ನೆಂಡಿಜ್ಕ್ ಅವರು ಈ ನಿವೃತ್ತ ನರ್ಸ್‌ ಅವರನ್ನು ಭೇಟಿಯಾದರು. ಯಾಕೆಂದರೆ ಇವರಿಗೆ 40 ವರ್ಷಗಳ ಹಿಂದೆ ಫಾಲ್ಗುಣ ಎಂದು ಹೆಸರಿಟ್ಟವರು ಇದೇ ನರ್ಸ್‌ ಆಗಿದ್ದರು.  ಅವರು ತಮ್ಮ ಜೀವನದಲ್ಲಿ ಮೊದಲು ಕಂಡ ಕೆಲವೇ ಜನರಲ್ಲಿ ಈ ನರ್ಸ್‌ ಕೂಡ ಒಬ್ಬರು.  ಅವರು ನರ್ಸ್‌ ಅನ್ನು ಕಂಡು ಕಣ್ಣೀರಿಟ್ಟರು.

ತಾಯಿಯ ಬಗ್ಗೆ ಕೋಪವಿಲ್ಲ, ಪ್ರೀತಿಯಿದೆ

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ
ತಾಯಿಯನ್ನು ಬಿಟ್ಟು ಹೋದ ಬಗ್ಗೆ ಫಾಲ್ಗುಣ ಅವರಿಗೆ ಕಿಂಚಿತ್ತೂ ಸಿಟ್ಟಿಲ್ಲ. “ನನ್ನ ತಾಯಿ ಬಹುಶಃ ತಾನು ಮಾಡಿದ್ದು ದೊಡ್ಡ ತಪ್ಪು ಎಂದು ಇಂದಿಗೂ ಅಪರಾಧಿ ಪ್ರಜ್ಞೆಯಲ್ಲಿ ಇರಬಹುದು. ಆದರೆ ನಾನು ಚೆನ್ನಾಗಿದ್ದೇನೆ, ಸುಂದರವಾದ ಬದುಕು ನನಗಿದೆ ಮತ್ತು ಅವಳ ಮಗು ಪ್ರೀತಿಯಿಂದ ಬೆಳೆದಿದೆ ಎಂದು ಅವಳಿಗೆ ಹೇಳಲು ಬಯಸುತ್ತೇನೆ” ಎನ್ನುತ್ತಾರೆ ಅವರು.
ವಿಶೇಷವೆಂದರೆ, ಫಾಲ್ಗುಣ ತಮ್ಮ ನಾಲ್ವರು ಮಕ್ಕಳಿಗೆ ಭಾರತೀಯ ಮತ್ತು ಡಚ್ ಹೆಸರುಗಳನ್ನು ಇಟ್ಟಿದ್ದಾರೆ. ಒಬ್ಬ ಮಗಳಿಗೆ ತನ್ನ ಜನ್ಮದಾತ ತಾಯಿಯ ಹೆಸರನ್ನೇ ಇಟ್ಟಿದ್ದಾರೆ. ಮುಂದಿನ ವರ್ಷವೂ ಮತ್ತೆ ಭಾರತಕ್ಕೆ ಬಂದು ತಾಯಿಯನ್ನು ಹುಡುಕುವುದನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement