ಹೈದರಾಬಾದ್: ನಿವೃತ್ತ ಸರ್ಕಾರಿ ನೌಕರರ ಬಾಕಿ ಇರುವ ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲು ತೆಲಂಗಾಣ ಸರ್ಕಾರವು ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ 50% ಕಡಿತಗೊಳಿಸಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಮಾಹಿತಿ ನೀಡಿದ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, “ಎಲ್ಲಾ ಸಚಿವರು ತಮ್ಮ ವೇತನದಲ್ಲಿ ಶೇ. 50 ರಷ್ಟು ಕಡಿತಗೊಳಿಸಿಕೊಳ್ಳಲು ಸ್ವಯಂಪ್ರೇರಿತವಾಗಿ ನಿರ್ಧರಿಸಿದ್ದಾರೆ. ಅಗತ್ಯ ಬಿದ್ದರೆ ಇತರ ಜನಪ್ರತಿನಿಧಿಗಳ ವೇತನವನ್ನೂ ಕಡಿತಗೊಳಿಸಿ ನಿವೃತ್ತ ನೌಕರರ ಬಾಕಿ ತೀರಿಸಲಾಗುವುದು” ಎಂದು ತಿಳಿಸಿದ್ದಾರೆ.
ನಿವೃತ್ತರಿಗೆ ವೇತನ ಹಾಗೂ ಸೌಲಭ್ಯಗಳನ್ನು ನೀಡಲು ಸರ್ಕಾರ 100 ದಿನಗಳ ಕಾಲಮಿತಿಯನ್ನು ನಿಗದಿಪಡಿಸಿದೆ. ಇದಕ್ಕಾಗಿ ವಿಶೇಷ ಸಂಪನ್ಮೂಲ ಕ್ರೋಢೀಕರಣ ಉಪಸಮಿತಿಯನ್ನು ರಚಿಸಲಾಗಿದೆ. ಪ್ರಸ್ತುತ ಸೇವೆಯಲ್ಲಿರುವ ನೌಕರರಿಗೆ ಸುಮಾರು ₹6,200 ಕೋಟಿ ಮತ್ತು ನಿವೃತ್ತ ನೌಕರರಿಗೆ ₹8,000 ಕೋಟಿ ಬಾಕಿ ಪಾವತಿಸಬೇಕಿದೆ ಎಂದು ಸಂಪುಟ ಗುರುತಿಸಿದೆ.
“ನಿವೃತ್ತ ನೌಕರರು ತಮ್ಮ ಹಕ್ಕಿನ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯಬಾರದು. ವಿಳಂಬದಿಂದಾಗಿ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ” ಎಂದು ಸರ್ಕಾರ ಹೇಳಿದೆ.
ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶ ಸರ್ಕಾರವು ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ವೇತನ ಕಡಿತಗೊಳಿಸಿತ್ತು. ಅದೇ ಮಾದರಿಯನ್ನು ಈಗ ತೆಲಂಗಾಣ ಸರ್ಕಾರ ಅನುಸರಿಸಿದೆ. ತೆಲಂಗಾಣ ರಾಜ್ಯ ರಚನೆಯ ಸಮಯದಲ್ಲಿ ಯಾವುದೇ ಬಾಕಿ ಇರಲಿಲ್ಲ, ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಬಾಕಿ ಮೊತ್ತ ಬೆಟ್ಟದಂತೆ ಬೆಳೆದಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರವು ಕೇವಲ ವೇತನ ಕಡಿತಕ್ಕೆ ಸೀಮಿತವಾಗದೆ, ಬಾಕಿ ಹಣವನ್ನು ಸಕಾಲದಲ್ಲಿ ಪಾವತಿಸಲು ಇತರ ಆದಾಯದ ಮೂಲಗಳನ್ನು ಹುಡುಕುವುದಾಗಿ ಭರವಸೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ