ಕಾಶ್ಮೀರ : ಗುರುವಾರ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನ ಚೋಸಿತಿ ಗ್ರಾಮದಲ್ಲಿ ಸಂಭವಿಸಿದ ಭಾರಿ ಮೇಘಸ್ಫೋಟದಲ್ಲಿ ಇಬ್ಬರು ಸಿಐಎಸ್ಎಫ್ ಯೋಧರು ಸೇರಿದಂತೆ ಕನಿಷ್ಠ 40 ಜನರು ಸಾವಿಗೀಡಾಗಿದ್ದಾರೆ ಮತ್ತು 220 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಭಾರಿ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿ ದೊಡ್ಡ ಪ್ರಮಾಣದ ವಿನಾಶ ಸಂಭವಿಸಿದೆ. ದಿಢೀರ್ ಪ್ರವಾಹದಿಂದ 120 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ತಂಡಗಳು ಬದುಕುಳಿದವರನ್ನು ಹುಡುಕಲು ಹರಸಾಹಸ ಪಡುತ್ತಿದ್ದಾರೆ.
ಕಿಶ್ತ್ವಾರ್ನಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಗಳ ಪ್ರಕಾರ, 38 ಶವಗಳನ್ನು ಹೊರತೆಗೆಯಲಾಗಿದೆ. ಮಚೈಲ್ ಮಾತಾ ಯಾತ್ರೆಗೆ ಚಶೋತಿ ಆರಂಭಿಕ ಸ್ಥಳವಾಗಿದ್ದು, ಕಿಶ್ತ್ವಾರ್ನಲ್ಲಿರುವ ಹಿಮಾಲಯದ ಮಾತಾ ಚಂಡಿ ದೇವಾಲಯಕ್ಕೆ ಹೋಗುವ ದಾರಿಯಲ್ಲಿರುವ ಕೊನೆಯ ವಾಹನ ಸಂಚಾರ ಯೋಗ್ಯ ಗ್ರಾಮವಾಗಿದೆ. ಹಠಾತ್ ಪ್ರವಾಹದ ನಂತರ ವಾರ್ಷಿಕ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮಚೈಲ್ ಮಾತಾ ಯಾತ್ರೆಯ ಆರಂಭಿಕ ಸ್ಥಳವಾದ ಕಿಶ್ತ್ವಾರ್ನ ಚಶೋತಿ ಪ್ರದೇಶದಲ್ಲಿ ಹಠಾತ್ ಪ್ರವಾಹ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ” ಎಂದು ಕಿಶ್ತ್ವಾರ್ ಉಪ ಆಯುಕ್ತ ಪಂಕಜ ಶರ್ಮಾ ಹೇಳಿದರು.
ಹಿಮಾಲಯದ ಮಾತಾ ಚಂಡಿ ದೇಗುಲಕ್ಕೆ ಮಚೈಲ್ ಮಾತಾ ಯಾತ್ರೆಯ ಮಾರ್ಗದಲ್ಲಿ ಈ ದುರಂತ ಸಂಭವಿಸಿದ್ದು, ತೀರ್ಥಯಾತ್ರೆಯ ಹಾದಿ ಅಸ್ತವ್ಯಸ್ತವಾಗಿದೆ. ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಬದುಕುಳಿದವರನ್ನು ಹುಡುಕಲು ಮತ್ತು ಸಿಕ್ಕಿಬಿದ್ದವರನ್ನು ಸ್ಥಳಾಂತರಿಸಲು ದೊಡ್ಡ ಪ್ರಮಾಣದ ಕಾರ್ಯಾಚರಣೆಗಳು ನಡೆಯುತ್ತಿವೆ.
ಕಿಶ್ತ್ವಾರ್ ಪ್ರದೇಶದ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಮೇಘಸ್ಫೋಟ ಪೀಡಿತ ಪ್ರದೇಶದಿಂದ ದೃಢಪಡಿಸಿದ ಮಾಹಿತಿ ನಿಧಾನವಾಗಿ ಬರುತ್ತಿದೆ, ಆದರೆ “ರಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ಎಲ್ಲಾ ಸಂಭಾವ್ಯ ರೀತಿಯಿಂದಲೂ ಸಜ್ಜುಗೊಳಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ