
ಕೋಲ್ಕತಾ : ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜು ಸಮೀಪ ಶುಕ್ರವಾರ ರಾತ್ರಿ ಒಡಿಶಾ ಮೂಲದ ದ್ವಿತೀಯ ವರ್ಷದ ಎಂಬಿಬಿಎಸ್ (MBBS) ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಅಧಿಕಾರಿಗಳ ಪ್ರಕಾರ, ಒಡಿಶಾದ ಜಲೇಶ್ವರದವರಾದ ಮತ್ತು ದುರ್ಗಾಪುರದ ಶಿವಪುರ ಪ್ರದೇಶದಲ್ಲಿರುವ ಐಕ್ಯೂ ಸಿಟಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಸುಮಾರು 8:30ಕ್ಕೆ ತನ್ನ ತನ್ನ ಸ್ನೇಹಿತನೊಂದಿಗೆ ಹೊರಗೆ ಹೋಗಿದ್ದರು. ಕಾಲೇಜಿನ ಗೇಟ್ ಬಳಿ ಕೆಲವರು ಇವರನ್ನು ತಡೆದು ವಿದ್ಯಾರ್ಥಿನಿಯನ್ನು ಗಿಡಮರಗಳಿಂದ ಆವೃತವಾದ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. 23 ವರ್ಷದ ವಿದ್ಯಾರ್ಥಿನಿಯ ಸ್ನೇಹಿತ ಸ್ಥಳದಿಂದ ಓಡಿಹೋಗಿದ್ದಾನೆ ಎನ್ನಲಾಗಿದ್ದು, ಹೀಗಾಗಿ ಈ ಕೃತ್ಯದಲ್ಲಿ ಆತನ ಪಾತ್ರವೂ ಇರಬಹುದೆಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ದೂರಿನಲ್ಲಿ, ಸಂತ್ರಸ್ತೆಯ ತಂದೆ, ಆಕೆಯ ಸ್ನೇಹಿತ “ಸುಳ್ಳು ನೆಪಗಳನ್ನು ಹೇಳಿ, ವೈದ್ಯ ವಿದ್ಯಾರ್ಥಿನಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾನೆ” ಎಂದು ತಿಳಿಸಿದ್ದಾರೆ. ದಾಳಿಕೋರರು ತಮ್ಮ ಮಗಳ ಮೊಬೈಲ್ ಫೋನ್ ಕಸಿದು ₹5,000 ಹಣವನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯನ್ನು ನಂತರ ದುರ್ಗಾಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಪೊಲೀಸ್ ತನಿಖೆ
ಶನಿವಾರದಂದು, ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಂತ್ರಸ್ತೆಯ ಸ್ನೇಹಿತ ಸೇರಿದಂತೆ ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆಯ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ, ಆದರೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಪಶ್ಚಿಮ ಬಂಗಾಳ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ. “ದುರ್ಗಾಪುರದಲ್ಲಿ ಒಡಿಶಾದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದಿಂದ ನಮಗೆ ತೀವ್ರ ದುಃಖವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ ಎಂದು ನಾವು ಎಲ್ಲರಿಗೂ ಭರವಸೆ ನೀಡುತ್ತೇವೆ. ಸಂತ್ರಸ್ತೆಯ ನೋವು ಒಡಿಶಾದಷ್ಟೇ ನಮ್ಮದಾಗಿದೆ. ಅಪರಾಧಿಗಳಿಗೆ ನ್ಯಾಯ ಒದಗಿಸಲು ನಾವು ಪ್ರತಿಯೊಂದು ಪ್ರಯತ್ನವನ್ನೂ ಮಾಡುತ್ತೇವೆ. ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದು, ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ” ಎಂದು ತಮ್ಮ ‘ಎಕ್ಸ್’ (X) ಹ್ಯಾಂಡಲ್‌ನಲ್ಲಿ ತಿಳಿಸಿದೆ.
“ಈ ವಿಷಯದಲ್ಲಿ ದೃಢೀಕರಿಸದ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ಮಹಿಳೆಯರ ವಿರುದ್ಧದ ಅಪರಾಧಗಳ ವಿಷಯದಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಶೂನ್ಯ ಸಹಿಷ್ಣುತಾ ನೀತಿಗೆ ಬದ್ಧರಾಗಿದ್ದಾರೆ” ಎಂದು ಹೇಳಿಕೆ ತಿಳಿಸಿದೆ.
ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಶಶಿ ಪಾಂಜಾ ಮಾತನಾಡಿ, ವಿದ್ಯಾರ್ಥಿನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಮಾನಸಿಕ ಸಮಾಲೋಚನೆಯನ್ನೂ ನೀಡಲಾಗುವುದು ಎಂದಿದ್ದಾರೆ.
“ಪೋಷಕರು ಪೊಲೀಸ್ ತನಿಖೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂತಹ ಅಪರಾಧಗಳನ್ನು ರಾಜಕೀಕರಣಗೊಳಿಸಬಾರದು. ದುರದೃಷ್ಟವಶಾತ್, ಬಿಜೆಪಿ ಯಾವಾಗಲೂ ಇಂತಹ ಘಟನೆಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡುತ್ತದೆ” ಎಂದು ಸ್ಥಳೀಯ ಬಿಜೆಪಿ ಘಟಕ ದುರ್ಗಾಪುರದಲ್ಲಿ ಪ್ರತಿಭಟನೆ ನಡೆಸಿದ ನಂತರ ಅವರು ಹೇಳಿದರು.
ಸುದ್ದಿ ಸಂಸ್ಥೆ ಪಿಟಿಐ (PTI) ವರದಿಯ ಪ್ರಕಾರ, ರಾಜ್ಯ ಆರೋಗ್ಯ ಇಲಾಖೆಯು ಕಾಲೇಜಿನಿಂದ ವರದಿಯನ್ನು ಕೇಳಿದೆ. ಅಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗದ (NCW) ತಂಡವು ಸಂತ್ರಸ್ತೆ ಮತ್ತು ಆಕೆಯ ಪೋಷಕರನ್ನು ಭೇಟಿಯಾಗಲು ದುರ್ಗಾಪುರಕ್ಕೆ ತೆರಳುತ್ತಿದೆ. “ಬಂಗಾಳದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ಬಹಳ ದುರದೃಷ್ಟಕರ. ಇಂತಹ ಅಪರಾಧಗಳ ಏರಿಕೆಯನ್ನು ತಡೆಯಲು ಮುಖ್ಯಮಂತ್ರಿಗಳು ಮುಂದೆ ಬಂದು ಸಹಕರಿಸಬೇಕೆಂದು ನಾನು ವಿನಂತಿಸುತ್ತೇನೆ” ಎಂದು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಅರ್ಚನಾ ಮಜುಮ್ದಾರ ಹೇಳಿದ್ದಾರೆ.
ಕೋಲ್ಕತ್ತಾದ ಕಾಲೇಜು ಕ್ಯಾಂಪಸ್‌ಗಳಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳ ನಂತರ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯವಾಗಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಜುಲೈನಲ್ಲಿ, ಕೋಲ್ಕತ್ತಾದ ಕಾಸ್ಬಾ ಪ್ರದೇಶದಲ್ಲಿರುವ ಸೌತ್ ಕಲ್ಕತ್ತಾ ಲಾ ಕಾಲೇಜಿನ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ರಾಜಕೀಯ ಸಂಪರ್ಕಗಳನ್ನು ಹೊಂದಿದ್ದ ಆರೋಪದ ಮೇರೆಗೆ ಒಬ್ಬ ಮಾಜಿ ವಿದ್ಯಾರ್ಥಿ, ಇಬ್ಬರು ವಿದ್ಯಾರ್ಥಿಗಳು ಮತ್ತು ಒಬ್ಬ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.
ಕಳೆದ ವರ್ಷ ಆಗಸ್ಟ್‌ನಲ್ಲಿ, ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ