ಕುಮಟಾ: ‘ಸೌರಭ’ಕ್ಕೆ ರಜತ ಸಂಭ್ರಮ, ಮೇ 12ರಂದು ಬೆಳಿಗ್ಗೆಯಿಂದ ರಾತ್ರಿ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ

 ಕುಮಟಾ : ಸಾಂಸ್ಕೃತಿಕ ಸಂಘಟನೆ ‘ಸೌರಭ’ವು ರಜತ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ಈ ನಿಮಿತ್ತ ಮೇ 12ರಂದು ಬೆಳಿಗ್ಗೆ 7 ರಿಂದ ರಾತ್ರಿ 9ರ ವರೆಗೆ ಉತ್ತರ ಕನ್ನಡ ಜಿಲ್ಲೆಯ   ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮವನ್ನು ನಗರದ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದೆ.
12ರಂದು ಬೆಳಿಗ್ಗೆ 7 ಗಂಟೆಗೆ ‘ಉದಯರಾಗ ಸೌರಭ’ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಗಾಯಕ ಪಂ. ಶ್ರೀಪಾದ ಹೆಗಡೆ, ಕಂಪ್ಲಿ ಉದಯರಾಗ ಪ್ರಸ್ತುತಪಡಿಸಲಿದ್ದಾರೆ. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಸತೀಶ ಭಟ್ಟ, ಹೆಗ್ಗಾರ ಸಾಥ್‌ ನೀಡಲಿದ್ದಾರೆ.
ಬೆಳಗ್ಗೆ 9:30 ರಿಂದ ಕಾವ್ಯಾಭಿನಯ ಸೌರಭ ಕಾರ್ಯಕ್ರಮದಲ್ಲಿ ಡಾ. ಶ್ರೀಪಾದ ಭಟ್ ಪರಿಕಲ್ಪನೆಯ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯವನ್ನು ಉಡುಪಿ, ಕೊಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕಾವ್ಯಾ ಹಂದೆ ಪ್ರಸ್ತುತಪಡಿಸಲಿದ್ದಾರೆ. ಬೆಳಿಗ್ಗೆ 10 :30 ರಿಂದ ಯುವ ಸಾಹಿತಿ, ಪತ್ರಕರ್ತ ಪ್ರಮೋದ ಮೋಹನ ಹೆಗಡೆ ಜೊತೆಗೆ ಯುವ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ‘ಚಿಂತನ ಸೌರಭ’ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಚಿಂತಕ, ಸಾಹಿತಿ, ಚಂದನ ವಾಹಿನಿಯ ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರು ಭಾರತೀಯತೆಯ ಹಿರಿಮೆ ಘರಿಮೆ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಪ್ರಮುಖ ಸುದ್ದಿ :-   ಕರ್ಣಾಟಕ ಬ್ಯಾಂಕ್‌ ಎಂಡಿ-ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕ ರಾಜೀನಾಮೆ

ಮಧ್ಯಾಹ್ನ 12ಕ್ಕೆ ನಡೆಯುವ ‘ಯಕ್ಷ-ಗಾನ- ವ್ಯಾಖ್ಯಾನ ಸೌರಭ’ ಕಾರ್ಯಕ್ರಮದಲ್ಲಿ ಯಕ್ಷಗಾನ ಪದ್ಯಗಳನ್ನು ಆಧರಿಸಿದ ಕಥನ – ವ್ಯಾಖ್ಯಾನ – ವಿಶ್ಲೇಷಣೆ ನಡೆಯಲಿದ್ದು, ವಿದ್ವಾನ್ ಗಣಪತಿ ಭಟ್ಟ ಯಲ್ಲಾಪುರ, ವಿದ್ವಾನ್ ಕೆ. ಶ್ರೀಪತಿ ಉಪಾಧ್ಯಾಯ ಅವರು ಭಾಗವತರಾಗಿ ಪಾಲ್ಗೊಳ್ಳಲಿದ್ದು, ಮೃದಂಗದಲ್ಲಿ ಬಾಲಚಂದ್ರ ಭಾಗ್ವತ, ವಯೋಲಿನ್ ನಲ್ಲಿ ಶರ್ಮಿಳಾ ರಾವ್ ಉಡುಪಿ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ 2:30ರಿಂದ ‘ಯಕ್ಷ ರೂಪಕ ಸೌರಭ’ ಕಾರ್ಯಕ್ರಮದಲ್ಲಿ ಎಂ.ಎ ಹೆಗಡೆ ದಂಡಕಲ್ ವಿರಚಿತ ‘ದಶಾವತಾರ’ದ ಅನನ್ಯ ಪ್ರಸ್ತುತಿ ‘ಲೀಲಾವತಾರಮ್’ ರೂಪಕ ಪ್ರಸ್ತುತವಾಗಲಿದೆ. ಬಾಲ ಪ್ರತಿಭೆ ತುಳಸಿ ಹೆಗಡೆ ಯಕ್ಷ ರೂಪಕದಲ್ಲಿ ರಂಜಿಸಲಿದ್ದಾರೆ. ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮೃದಂಗದಲ್ಲಿ ಶಂಕರ ಭಾಗ್ವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 3:45 ರಿಂದ ಸೌರಭ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಭಟ್ಟ ಅಧ್ಯಕ್ಷತೆಯಲ್ಲಿ ‘ಸಭಾ ಸೌರಭ’ ನಡೆಯಲಿದ್ದು, ತಾನಸೇನ್ ಪ್ರಶಸ್ತಿ ಪುರಸ್ಕೃತ ಹಿಂದುಸ್ತಾನೀ ಗಾಯಕ ಪಂ. ಗಣಪತಿ ಭಟ್ಟ, ಹಾಸಣಗಿಯವರಿಗೆ “ಸೌರಭ ರಾಷ್ಟ್ರೀಯ ಸಮ್ಮಾನ” ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಡಾ. ನಾ ಸೋಮೇಶ್ವರ ಶಿಖರನುಡಿ ಆಡಲಿದ್ದಾರೆ. ಸಾಯಂಕಾಲ 5:15 ರಿಂದ ನಡೆಯುವ ‘ಸಂಧ್ಯಾ ರಾಗ ಸೌರಭ’ ಕಾರ್ಯಕ್ರಮದಲ್ಲಿ ಪಂ. ಗಣಪತಿ ಭಟ್ಟ ಹಾಸಣಗಿ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ ಸಾಥ್‌ ನೀಡಲಿದ್ದಾರೆ.
ಸಾಯಂಕಾಲ 7 ಗಂಟೆಗೆ ‘ನೃತ್ಯ ಸೌರಭ’ ಕಾರ್ಯಕ್ರಮ ಕಾರ್ಯಕ್ರಮ ನಡೆಯಲಿದ್ದು, ದೆಹಲಿ ದೂರದರ್ಶನ ‘ಬಿ’ ಶ್ರೇಣಿಯ ಕಲಾವಿದೆ ದೀಪ್ತಿ ವಿ. ಹೆಗಡೆ, ವಿದುಷಿ ಡಾ. ಜಯಶ್ರೀ ಶ್ರೀಕಾಂತ ಭಟ್ಟ ಬಳ್ಳಾರೆ, ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿ ಡಾ. ಮಂಜರಿ ಚಂದ್ರ ಪುಷ್ಪರಾಜ ಹಾಗೂ ಅವರ ಶಿಷ್ಯರಿಂದ ಭರತನಾಟ್ಯ ಪ್ರಸ್ತುತಿ “ಸಮರ್ಪಣಾ” ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಮುಖ ಸುದ್ದಿ :-   ಬೆಳಗಾವಿ | ಮರಕ್ಕೆ ಕಟ್ಟಿ ಐವರು ಶ್ರೀರಾಮಸೇನೆ ಕಾರ್ಯಕರ್ತರಿಗೆ ಥಳಿತ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement