ಭಾರತದ ಹದಿಹರೆಯದ ವಿದ್ಯಾರ್ಥಿಯೊಬ್ಬ ತನ್ನ ಅದ್ಭುತ ಭಾಷಾ ಕೌಶಲ್ಯದಿಂದ ಎಲ್ಲರನ್ನು ಬೆರಗುಗೊಳಿಸಿದ್ದಾರೆ. 400 ಭಾಷೆಗಳನ್ನು ಅಧ್ಯಯನ ಮಾಡಿರುವ ಇವರು 46 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಮೂಲಕ ವಿಶ್ವ ದಾಖಲೆಗಳನ್ನು ಸ್ಥಾಪಿಸುತ್ತಿದ್ದಾರೆ.
ಚೆನ್ನೈನ 19 ವರ್ಷದ ಮಹಮೂದ್ ಅಕ್ರಂ ಎಂಬವರೇ ಭಾರತದ ಈ ಭಾಷಾ ಪ್ರತಿಭೆ. ಅಕ್ರಂ ತಂದೆ ಸಹ ಭಾಷಾ ತಜ್ಞರು. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಮಗನಿಗೆ ಅವರು ಇದೇ ಹಾದಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ.
19 ವರ್ಷದ ವಿದ್ಯಾರ್ಥಿ ಮಹಮೂದ್ ಅಕ್ರಂ ಅವರ ಮೆದುಳು ನೂರಾರು ಭಾಷೆಗಳಿಗೆ ಸೂಪರ್ ಕಂಪ್ಯೂಟರ್‌ನಂತೆ ಕೆಲಸ ಮಾಡುತ್ತದೆ. ಪ್ರಾಚೀನ ಪಠ್ಯಗಳನ್ನು ಡೀಕೋಡ್ ಮಾಡುವುದರಿಂದ ಹಿಡಿದು ಅಪರೂಪದ ಭಾಷೆಗಳಲ್ಲಿ ಟೈಪ್ ಮಾಡುವವರೆಗೆ ಇವರ ಭಾಷಾ ಕೌಶಲ್ಯಗಳು ವಿಶ್ವದಾದ್ಯಂತ ತಜ್ಞರನ್ನು ಬೆರಗುಗೊಳಿಸಿವೆ. ಇವರು ತನಗೆ 10 ವರ್ಷ ಆಗುವುದಕ್ಕಿಂತ ಮುಂಚೆಯೇ ಅನೇಕ ವಿಶ್ವ ದಾಖಲೆಗಳನ್ನು ಸಹ ಮಾಡಿದ್ದಾರೆ.
ಮಹಮೂದ್ ಅಕ್ರಮ್ 46 ಭಾಷೆಗಳಲ್ಲಿ ನಿರರ್ಗಳವಾಗಿ ಓದುತ್ತಾರೆ, ಬರೆಯುತ್ತಾರೆ ಹಾಗೂ ಮಾತನಾಡುತ್ತಾರೆ. ಅಲ್ಲದೆ, 400 ಕ್ಕಿಂತ ಹೆಚ್ಚು ಭಾಷೆಗಳನ್ನು ಟೈಪ್ ಮಾಡುತ್ತಾರೆ. ಇವರ ತಂದೆ ಭಾಷಾಶಾಸ್ತ್ರಜ್ಞ ಶಿಲ್ಬೀ ಮೋಜಿಪ್ರಿಯನ್ ಅವರು 16 ಭಾಷೆಗಳನ್ನು ಮಾತನಾಡುತ್ತಾರೆ. ಹೀಗಾಗಿ ಅಕ್ರಂ ಅವರಿಗೆ ಚಿಕ್ಕ ವಯಸ್ಸಿನಿಂದಲೇ ವಿಭಿನ್ನ ಲಿಪಿಗಳು ಮತ್ತು ಉಪಭಾಷೆಗಳನ್ನು ಅವರು ಪರಿಚಯಿಸಿದ್ದಾರೆ.
ಈತನ ತಂದೆ-ತಾಯಿಗಳು ಆತನಿಗೆ ನಾಲ್ಕನೇ ವಯಸ್ಸಿನಲ್ಲಿ ತಮಿಳು ಮತ್ತು ಇಂಗ್ಲಿಷ್ ವರ್ಣಮಾಲೆಗಳನ್ನು ಕಲಿಸಲು ಪ್ರಾರಂಭಿಸಿದರು, ಮತ್ತು ಅವರು ಆರು ದಿನಗಳಲ್ಲಿ ಇಂಗ್ಲಿಷ್ ಕಲಿತು ಎಲ್ಲರನ್ನೂ ವಿಸ್ಮಯಗೊಳಿಸಿದ್ದಾರೆ. ಆರನೇ ವಯಸ್ಸಿಗೆ, ಹಳೆಯ ತಮಿಳು ಲಿಪಿಗಳಾದ ವಟ್ಟೆಲುಟ್ಟು, ಗ್ರಂಥ ಮತ್ತು ತಮಿಳಿಗಳ ಬಗ್ಗೆ ತಮ್ಮ ತಂದೆಗೆ ತಿಳಿದಿರುವುದಕ್ಕಿಂತ ಹೆಚ್ಚಿನದನ್ನು ಕಲಿತಿದ್ದಾರೆ. ಅವರ ಕಲಿಕಾ ಸಾಮರ್ಥ್ಯವು ಅವರಿಗೆ ಓಮ್ನಿಗ್ಲೋಟ್ ಮತ್ತು ಪುಸ್ತಕಗಳಂತಹ ವೆಬ್‌ಸೈಟ್‌ಗಳನ್ನು ಸಂಪರ್ಕಿಸುವಂತೆ ಮಾಡಿತು ಮತ್ತು ಎಂಟನೇ ವಯಸ್ಸಿನಲ್ಲಿ 50 ಭಾಷೆಗಳನ್ನು ಕಲಿಯಲು ಅವರಿಗೆ ಅವಕಾಶ ಮಾಡಿಕೊಟ್ಟಿತು.
ಅವರು ಎಂಟು ವರ್ಷದವರಾಗಿದ್ದಾಗ, ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ವಿವಿಧ ಭಾಷೆಗಳಲ್ಲಿ ಟೈಪ್ ಮಾಡುವ ಮೂಲಕ ವಿಶ್ವದ ಅತ್ಯಂತ ಕಿರಿಯ ದ್ವಿಭಾಷಾ ಟೈಪ್ ರೈಟರ್ ಎಂದು ತಮ್ಮ ಮೊದಲ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ. ಹತ್ತು ವರ್ಷದವರಾಗಿದ್ದಾಗ, ಒಂದು ಗಂಟೆಯೊಳಗೆ 20 ಭಾಷೆಗಳಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಟೈಪ್ ಮಾಡುವ ಮೂಲಕ ಎರಡನೇ ವಿಶ್ವ ದಾಖಲೆ ಮತ್ತು ಜರ್ಮನ್ ಯಂಗ್ ಟ್ಯಾಲೆಂಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
“ನನ್ನ ಕೆಲಸದ ಕಾರಣಕ್ಕೆ ನಾನು ಇಸ್ರೇಲ್, ಸ್ಪೇನ್‌ನಂತಹ ದೇಶಗಳಿಗೆ ಹೋಗಬೇಕಾದಾಗ ನಿರ್ದಿಷ್ಟ ರಾಜ್ಯ ಅಥವಾ ದೇಶದ ಭಾಷೆ ತಿಳಿದಿಲ್ಲದ ಕಾರಣ ನನಗೆ ಕಷ್ಟವಾಯಿತು. ನನ್ನ ಮಗನಿಗೆ ಭಾಷೆಯ ಕಾರಣದಿಂದ ಅವಕಾಶಗಳನ್ನು ತಪ್ಪಿಹೋಗುವುದು ನನಗೆ ಇಷ್ಟವಿರಲಿಲ್ಲ. ನನ್ನ ಹೆಂಡತಿ ಗರ್ಭಣಿಯಿದ್ದಾಗ ಮಗುವಿನ ಆಸಕ್ತಿ ಕೆರಳಿಸಲು ಸಹಾಯವಾಗುತ್ತದೆ ಎಂಬಭರವಸೆಯಿಂದ ನಾವು ಭಾಷೆಗಳ ಬಗ್ಗೆ ಸಂಭಾಷಣೆ ನಡೆಸುತ್ತಿದ್ದೆವು ಎಂದು ಅಕ್ರಂ ತಂದೆ ಹೇಳುತ್ತಾರೆ.
“ನನ್ನ ಭಾಷಾ ಪ್ರಯಾಣವು ನಾಲ್ಕನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ನನ್ನ ತಂದೆ-ತಾಯಿಗಳು ನನಗೆ ತಮಿಳು ಮತ್ತು ಇಂಗ್ಲಿಷ್ ವರ್ಣಮಾಲೆಗಳನ್ನು ಕಲಿಸಲು ಪ್ರಾರಂಭಿಸಿದರು, ಮತ್ತು ನಾನು ಆರು ದಿನಗಳಲ್ಲಿ ಇಂಗ್ಲಿಷ್ ವರ್ಣಮಾಲೆಯನ್ನು ಕರಗತ ಮಾಡಿಕೊಂಡೆ. ಅವರು ಆಶ್ಚರ್ಯಚಕಿತರಾದರು ಎಂದು ಅಕ್ರಂ ಹೇಳುತ್ತಾರೆ.
ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಡ್ಯಾನ್ಯೂಬ್ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೇತನ ಪಡೆದ ಅಕ್ರಂ ಈಗ ಚೆನ್ನೈನ ಅಳಗಪ್ಪ ವಿಶ್ವವಿದ್ಯಾಲಯದಿಂದ ಅನಿಮೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಯುನೈಟೆಡ್ ಕಿಂಗ್ಡಂ(UK)ನ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ಹಲವಾರು ಕೋರ್ಸ್ ಅಧ್ಯಯನ ಮಾಡುತ್ತಿದ್ದಾರೆ.
ತಾನು ಸಂಪಾದಿಸಿರುವ ಹಲವಾರು ಭಾಷೆಗಳಲ್ಲಿ ತಮಿಳು ತನ್ನ ಹೃದಯಕ್ಕೆ ಅತ್ಯಂತ ಪ್ರಿಯವಾದದ್ದು ಎಂದು ಆತ ಹೇಳಿದ್ದಾರೆ “ಇದು ನನ್ನ ಮಾತೃಭಾಷೆ ಮತ್ತು ನನ್ನ ಹೃದಯಕ್ಕೆ ಹತ್ತಿರವಾಗಿದೆ” ಎಂದು ಹೇಳುತ್ತಾರೆ.
ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಈ ಯುವ ಪ್ರಾಡಿಜಿಯಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ, ಇದರಲ್ಲಿ ಭಾಷೆಗಳನ್ನು ಕಲಿಸುವುದು ಮತ್ತು ಮ್ಯಾನ್ಮಾರ್ ಮತ್ತು ಕಾಂಬೋಡಿಯಾದಂತಹ ರಾಷ್ಟ್ರಗಳಲ್ಲಿ ಕಾರ್ಯಾಗಾರಗಳನ್ನು ನಡೆಸುವುದು ಸೇರಿದೆ.
ನಿಮ್ಮ ಕಾಮೆಂಟ್ ಬರೆಯಿರಿ