
ಅಂಕೋಲಾ : ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ
ಯತ್ನಿಸಿದ ಘಟನೆ ಪಟ್ಟಣದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಕಾರವಾರ ರಸ್ತೆ ಕಣಕಣೇಶ್ವರ ದೇವಾಲಯದ ಪಕ್ಕದಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ ಹೇರ್ ಕಟಿಂಗ್ ಸೆಲೂನ್ ನಿಂದ ಗೋಪಾಲಕೃಷ್ಣ ನಾಯಕ ಅವರು ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಅವರು ಹೊರಗೆ ಬರುವುದನ್ನೇ ಕಾಯುತ್ತಿದ್ದ ದುಷ್ಕರ್ಮಿಗಳ ತಂಡವೊಂದು ಅವರನ್ನು ನೆಲಕ್ಕೆ ಕಡವಿ ತಲೆ ಮತ್ತು ಕೈ ಬುಜಕ್ಕೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ಗೋಪಾಲಕೃಷ್ಣ ಅವರು ಎದ್ದು ಓಡಿ ಹೋಗಿಹಣಕಾಸಿನ ಸಂಸ್ಥೆಯೊಂದರ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡ ಕಾರಣ ಅನಾಹುತ ತಪ್ಪಿದೆ ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಕೋರರು ಗೋವಾ ನೋಂದಣಿ ಕಾರಿನಲ್ಲಿ ಬಂದು ಹಠಾತ್ ಹಲ್ಲೆ ನಡೆಸಿ, ನಂತರ ವೇಗವಾಗಿ ಪರಾರಿಯಾಗಿದ್ದಾರೆ.
ಕಾರಿನಲ್ಲಿ 6 ಜನ ದುಷ್ಕರ್ಮಿಗಳು ಇದ್ದರು ಎಂದು ಹೇಳಲಾಗಿದೆ.
ಗೋಪಾಲಕೃಷ್ಣ ಅವರನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ತಂಡಗಳು ದಾಳಿಕೋರರಿಗಾಗಿ ಹುಡುಕಾಟ ಆರಂಭಿಸಿವೆ ಮತ್ತು ಸಿಸಿಟಿವಿ ದೃಶ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಖಾತೆಗಳಿಂದ ಸುಳಿವುಗಳನ್ನು ಸಂಗ್ರಹಿಸುತ್ತಿವೆ. ಪೊಲೀಸರು ಕೆಲವು ದುಷ್ಕರ್ಮಿಗಳನ್ನು ಗೋವಾ ಗಡಿಯಲ್ಲಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಆದರೆ ಪೊಲೀಸರು ಮಾಹಿತಿಯನ್ನು ದೃಢಪಡಿಸಿಲ್ಲ.



ನಿಮ್ಮ ಕಾಮೆಂಟ್ ಬರೆಯಿರಿ