
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳ ಮೇಲೆ ನಡೆದ ದಾಳಿ ಮತ್ತು ಪ್ರತಿಭಟನಾಕಾರರ ಬೆದರಿಕೆಯನ್ನು ಸುಪ್ರೀಂ ಕೋರ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಾಲಯ, ಅಧಿಕಾರಿಗಳ ರಕ್ಷಣೆಗಾಗಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸುವಂತೆ ಆದೇಶಿಸಿದೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದನ್ನು ಪ್ರತಿಭಟಿಸಿ, ಚುನಾವಣಾ ಕಾರ್ಯದಲ್ಲಿದ್ದ ಏಳು ನ್ಯಾಯಾಂಗ ಅಧಿಕಾರಿಗಳನ್ನು (ಮೂವರು ಮಹಿಳಾ ನ್ಯಾಯಾಧೀಶರು ಸೇರಿದಂತೆ) ಗಂಟೆಗಳ ಕಾಲ ಅಕ್ರಮವಾಗಿ ದಿಗ್ಬಂಧನದಲ್ಲಿರಿಸಿದ ಘಟನೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪಿನ್ ಪಾಂಚೋಲಿ ಅವರಿದ್ದ ಪೀಠವು ಈ ಘಟನೆಯನ್ನು “ನ್ಯಾಯಾಂಗದ ಮೇಲಿನ ವ್ಯವಸ್ಥಿತ ದಾಳಿ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ಪ್ರತಿಯೊಬ್ಬರೂ “ರಾಜಕೀಯ ಭಾಷೆ”ಯನ್ನೇ ಮಾತನಾಡುತ್ತಾರೆ. ಇದು ದೇಶದ ಅತ್ಯಂತ ಧ್ರುವೀಕೃತ ರಾಜ್ಯ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳಿಗೆ ಅಪಾಯವಿರುವ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಮಾಹಿತಿ ನೀಡಿದ್ದರೂ, ರಾಜ್ಯ ಸರ್ಕಾರ ಮತ್ತು ಪೊಲೀಸರು ಸಕಾಲದಲ್ಲಿ ಸ್ಪಂದಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅತ್ಯುನ್ನತ ಕೋರ್ಟ್ ಕಿಡಿಕಾರಿದೆ.
ಮಧ್ಯರಾತ್ರಿ 12 ಗಂಟೆಯ ನಂತರ ನ್ಯಾಯಾಧೀಶರನ್ನು ಬಿಡುಗಡೆಗೊಳಿಸಲಾಯಿತು. ಅವರು ತೆರಳುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಮತ್ತು ದೊಣ್ಣೆಗಳಿಂದ ದಾಳಿ ನಡೆಸಲಾಗಿದೆ.
ನ್ಯಾಯಾಂಗ ಅಧಿಕಾರಿಗಳ ಸುರಕ್ಷಿತ ಕೆಲಸಕ್ಕಾಗಿ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ತಕ್ಷಣವೇ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಚುನಾವಣಾ ಆಯೋಗಕ್ಕೆ (ECI) ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ಲದೆ, ಈ ಹಲ್ಲೆ ಪ್ರಕರಣದ ತನಿಖೆಯನ್ನು ಸಿಬಿಐ (CBI) ಅಥವಾ ಎನ್ಐಎ (NIA) ಗೆ ವಹಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್ಎಸ್ಪಿ ಅವರಿಗೆ ನ್ಯಾಯಾಲಯದಿಂದ ನೋಟಿಸ್ ನೀಡಲಾಗಿದ್ದು, ಏಪ್ರಿಲ್ 6 ರಂದು ಖುದ್ದಾಗಿ ಹಾಜರಿರುವಂತೆ ಸೂಚಿಸಲಾಗಿದೆ.
“ದುಷ್ಕರ್ಮಿಗಳು ಯಾರು ಎಂಬುದು ನಮಗೆ ತಿಳಿಯದ ವಿಷಯವೇನಲ್ಲ. ಮಧ್ಯರಾತ್ರಿ 2 ಗಂಟೆಯವರೆಗೂ ನಾನು ಪರಿಸ್ಥಿತಿಯನ್ನು ಗಮನಿಸುತ್ತಿದ್ದೆ,” ಎಂದು ಸಿಜೆಐ ಸೂರ್ಯಕಾಂತ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ಗೆ ಎಚ್ಚರಿಕೆ ನೀಡಿದರು.
ಈ ಆದೇಶದ ಮೂಲಕ ಸುಪ್ರೀಂ ಕೋರ್ಟ್, ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ