ವಾಷಿಂಗ್ಟನ್: ಭಾರತೀಯ ಮೂಲದ ಪ್ರಖ್ಯಾತ ವಿದೇಶಾಂಗ ನೀತಿ ವಿದ್ವಾಂಸ ಮತ್ತು ರಕ್ಷಣಾ ತಂತ್ರಜ್ಞ, ಆಶ್ಲೇ ಜೆ. ಟೆಲ್ಲಿಸ್ (Ashley J Tellis) ಅವರನ್ನು ವರ್ಗೀಕೃತ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಇಟ್ಟುಕೊಂಡ ಆರೋಪದ ಮೇಲೆ ಬಂಧಿಸಿ, ದೋಷಾರೋಪ ಹೊರಿಸಲಾಗಿದೆ ಎಂದು ಅಮೆರಿಕ ಅಟಾರ್ನಿ ಕಚೇರಿ ಫಾರ್ ದಿ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ವರ್ಜೀನಿಯಾ ತಿಳಿಸಿದೆ.
ಅಮೆರಿಕದ ಭದ್ರತೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು (Classified Documents) ಸಂಗ್ರಹಿಸಿ ಹಾಗೂ ಚೀನಾ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಈ ವಾರ ಬಹಿರಂಗಗೊಂಡ ನ್ಯಾಯಾಲಯದ ದಾಖಲೆಗಳಿಂದ ಈ ವಿಷಯ ತಿಳಿದುಬಂದಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯು (Justice Department) ನೀಡಿರುವ ಹೇಳಿಕೆಯ ಪ್ರಕಾರ, ಆಶ್ಲೇ ಟೆಲ್ಲಿಸ್ (64) ಅವರು ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಇರಿಸಿಕೊಂಡಿದ್ದರು. ವರ್ಜೀನಿಯಾದ ವಿಯೆನ್ನಾದಲ್ಲಿರುವ ಅವರ ಮನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪುಟಗಳ ಟಾಪ್ ಸೀಕ್ರೆಟ್ ದಾಖಲೆಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ.
ಅಮೆರಿಕಾ-ಭಾರತ ಸಂಬಂಧಗಳ ಕುರಿತು ಧ್ವನಿಯಾಗಿದ್ದ ಹಾಗೂ ಅನೇಕ ಆಡಳಿತಗಳ ಅಡಿಯಲ್ಲಿ ಸೇವೆ ಸಲ್ಲಿಸಿದ್ದ ಟೆಲ್ಲಿಸ್ ಅವರನ್ನು ವಾರಾಂತ್ಯದಲ್ಲಿ ಬಂಧಿಸಲಾಗಿದ್ದು, ಸೋಮವಾರದಂದು ಔಪಚಾರಿಕವಾಗಿ ದೋಷಾರೋಪಣೆಗೆ ಒಳಪಡಿಸಲಾಗಿದೆ.
ಟೆಲ್ಲಿಸ್ ಹಿನ್ನೆಲೆ: ಉನ್ನತ ಹುದ್ದೆಗಳಲ್ಲಿ ಸೇವೆ
ಮುಂಬೈನಲ್ಲಿ ಜನಿಸಿದ್ದ ಆ್ಯಷ್ಲೆ ಟೆಲ್ಲಿಸ್ ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ವ್ಯೂಹಾತ್ಮಕ ಸಲಹೆಗಾರ. ಆ್ಯಷ್ಲೆ ಅವರು 2008ರಲ್ಲಿ ನಡೆದ ಭಾರತ – ಅಮೆರಿಕ ಅಣು ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಭಾರತ, ಚೀನಾ ಮತ್ತು ಆಗ್ನೇಯ ಏಷ್ಯಾ ವಿಚಾರದಲ್ಲಿ ಪರಿಣತರು. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಆ್ಯಷ್ಲೆ ಅವರು ಆಪ್ತ ಸಲಹೆಗಾರರಲ್ಲಿ ಒಬ್ಬರಾಗಿದ್ದರು. ಬುಷ್ ಅವರಿಗೆ ಹಿರಿಯ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿದ್ದರು.
ಟೆಲ್ಲಿಸ್ ಅವರು ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅವರ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (National Security Council) ಕೆಲಸ ಮಾಡಿದ್ದರು. ಎಫ್‌ಬಿಐ (FBI) ಪ್ರಮಾಣಪತ್ರದ ಪ್ರಕಾರ, ಅವರು ಇತ್ತೀಚೆಗೆ ಸ್ಟೇಟ್ ಡಿಪಾರ್ಟ್‌ಮೆಂಟ್‌ಗೆ ಸಂಬಳ ರಹಿತ ಸಲಹೆಗಾರರಾಗಿ ಮತ್ತು ಪೆಂಟಗನ್‌ನ ಪೆಂಟಗನ್‌ನ ನಿವ್ವಳ ಮೌಲ್ಯಮಾಪನ ಕಚೇರಿ (Pentagon’s Office of Net Assessment) ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ, ಅವರು ವಾಷಿಂಗ್ಟನ್‌ನ ಪ್ರಭಾವಿ ಚಿಂತಕರ ಚಾವಡಿ (Think Tank) ಆದ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್‌ನಲ್ಲಿ ಹಿರಿಯ ಸಹೋದ್ಯೋಗಿಯಾಗಿದ್ದರು. ಮುಂಬೈ ಮೂಲದ ಟೆಲ್ಲಿಸ್ ಅವರು ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಅಧ್ಯಯನ ಮಾಡಿ, ಬಳಿಕ ಚಿಕಾಗೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. ಅವರು ಅಮೆರಿಕ-ಭಾರತ-ಚೀನಾ ನೀತಿ ವಲಯದಲ್ಲಿ ಪರಿಚಿತ ಮುಖವಾಗಿದ್ದರು.
ಅಕ್ಟೋಬರ್ 11ರಂದು ಅವರ ಮನೆಯಲ್ಲಿ ನಡೆಸಿದ ಶೋಧದ ವೇಳೆ, ಬೀಗ ಹಾಕಿದ ಕಪಾಟುಗಳು, ನೆಲಮಾಳಿಗೆಯ ಕಚೇರಿಯ ಡೆಸ್ಕ್ ಮತ್ತು ಸ್ಟೋರೇಜ್ ರೂಂನಲ್ಲಿ ಇರಿಸಿದ್ದ ಕಪ್ಪು ಕಸದ ಚೀಲಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಗೌಪ್ಯ ಕಾಗದಪತ್ರಗಳು ಪತ್ತೆಯಾಗಿವೆ. ಅವರ ಸರ್ಕಾರಿ ಪಾತ್ರಗಳಿಂದಾಗಿ ಟೆಲ್ಲಿಸ್ ಅವರು ಟಾಪ್ ಸೀಕ್ರೆಟ್ ಭದ್ರತಾ ಅನುಮತಿಯನ್ನು ಹೊಂದಿದ್ದರು.
ಚೀನೀ ಅಧಿಕಾರಿಗಳೊಂದಿಗೆ ರಹಸ್ಯ ಭೇಟಿಗಳು
ಈ ಪ್ರಕರಣವು ಟೆಲ್ಲಿಸ್ ಅವರು ಇತ್ತೀಚಿನ ವರ್ಷಗಳಲ್ಲಿ ಚೀನಾ ಸರ್ಕಾರದ ಅಧಿಕಾರಿಗಳನ್ನು ಹಲವಾರು ಬಾರಿ ಭೇಟಿ ಮಾಡಿದ್ದಾರೆ ಎಂಬ ಆರೋಪದಿಂದ ಮತ್ತಷ್ಟು ಗಮನ ಸೆಳೆದಿದೆ.
ಎಫ್‌ಬಿಐ ಪ್ರಕಾರ, 2025ರ ಸೆಪ್ಟೆಂಬರ್ 15ರಂದು ವರ್ಜೀನಿಯಾದ ಫೇರ್‌ಫ್ಯಾಕ್ಸ್‌ನ ರೆಸ್ಟೋರೆಂಟ್‌ನಲ್ಲಿ ಒಂದು ಸಭೆ ನಡೆದಿದೆ. ಟೆಲ್ಲಿಸ್ ಅವರು ಮನಿಲಾ ಲಕೋಟೆಯೊಂದಿಗೆ ಬಂದಿದ್ದರು, ಆದರೆ ಹೊರಡುವಾಗ ಅದು ಅವರ ಬಳಿ ಇರಲಿಲ್ಲ ಎಂದು ಏಜೆಂಟರು ತಿಳಿಸಿದ್ದಾರೆ.
2023ರ ಏಪ್ರಿಲ್‌ನಲ್ಲಿ ವಾಷಿಂಗ್ಟನ್, ಡಿ.ಸಿ. ಉಪನಗರದಲ್ಲಿ ನಡೆದ ಮತ್ತೊಂದು ಭೋಜನದ ವೇಳೆ, ಟೆಲ್ಲಿಸ್ ಮತ್ತು ಚೀನೀ ಅಧಿಕಾರಿಗಳು ಇರಾನ್-ಚೀನಾ ಸಂಬಂಧಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಚರ್ಚಿಸುತ್ತಿರುವುದನ್ನು ಹತ್ತಿರದ ಗ್ರಾಹಕರು ಕೇಳಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 2ರಂದು ನಡೆದ ಮತ್ತೊಂದು ಸಭೆಯಲ್ಲಿ ಟೆಲ್ಲಿಸ್ ಅವರು ಚೀನೀ ಅಧಿಕಾರಿಗಳಿಂದ ಗಿಫ್ಟ್ ಇದ್ದ ಚೀಲವನ್ನು ಸ್ವೀಕರಿಸಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ವಿವರಿಸಿವೆ.
ವರ್ಜೀನಿಯಾದ ಪೂರ್ವ ಜಿಲ್ಲೆಯ ಅಮೆರಿಕದ ಅಟಾರ್ನಿ ಲಿಂಡ್ಸೆ ಹಾಲಿಗನ್ ಹೇಳಿಕೆ ನೀಡಿ, “ಈ ಪ್ರಕರಣದಲ್ಲಿ ಮಾಡಲಾದ ಆರೋಪಗಳು ನಮ್ಮ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ” ಎಂದಿದ್ದಾರೆ. ಒಂದು ವೇಳೆ ಟೆಲ್ಲಿಸ್ ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು $250,000 ದಂಡವನ್ನು ವಿಧಿಸಬಹುದು ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ