ಮುಂಡಗೋಡ | ಹಾವು ಕಡಿದು 5 ವರ್ಷದ ಅಂಗನವಾಡಿ ಬಾಲಕಿ ಸಾವು

ಮುಂಡಗೋಡ: ಹಾವು ಕಡಿದು ಅಂಗನವಾಡಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ  ಪಟ್ಟಣದಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಮೃತ ಬಾಲಕಿಯನ್ನು ಮಯೂರಿ ಸುರೇಶ ಕುಂಬಳಪ್ಪನವರ (5) ಎಂದು ಗುರುತಿಸಲಾಗಿದೆ. ಮಯೂರಿ ಎಂದಿನಂತೆ ಅಂಗನವಾಡಿಗೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಅಂಗನವಾಡಿಯ ಹಿಂಬದಿ ತೆರಳಿದಾಗ ಹಾವು ಕಡಿದಿದೆ. ಬಾಲಕಿ ತಕ್ಷಣ, ಕಾಲಿಗೆ ಹಾವು ಕಡಿದಿದೆ ಎಂದು ಅಳುತ್ತಾ ಓಡಿ ಬಂದಿದ್ದಾಳೆ. ಬಾಲಕಿಯ ಕಿರುಚಾಟ ಕೇಳಿದ ಅಂಗನವಾಡಿ ಸಿಬ್ಬಂದಿ ಓಡಿಬಂದಿದ್ದಾರೆ. ನಂತರ ಸ್ಥಳೀಯರು ಆಟೋದಲ್ಲಿ ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಸುರೇಶ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಮೃತ ಮಯೂರಿ ಕಿರಿಯವಳು. ಬಾಲಕಿಗೆ ಹಾವು ಕಡಿದು ಮೃತಪಟ್ಟಿದ್ದಾಳೆ ಎಂಬ ಸುದ್ದಿ ಕೇಳಿ ಕುಟುಂಬವರ ಆಕ್ರಂದನ ಮುಗಿಲು ಮುಟ್ಟಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement