ಭೋಪಾಲ: ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿದ್ದು, ಆತನನ್ನು ರಕ್ಷಿಸಲು ಹೋದ ಪೊಲೀಸ್ ಅಧಿಕಾರಿಯನ್ನು ಕೂಡ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ನಲ್ಲಿ ನಡೆದಿದೆ.
ಪೊಲೀಸ್ ತಂಡದ ಮೇಲೆ ದಾಳಿ ಮಾಡುವ ಮೊದಲು ಆದಿವಾಸಿಗಳ ಗುಂಪೊಂದು ವ್ಯಕ್ತಿಯನ್ನು ಅಪಹರಿಸಿ ಕೊಂದಿದೆ. ಘಟನೆ ಶನಿವಾರ ನಡೆದಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ರೇವಾ ರೇಂಜ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲಿಸ್ ಸಾಕೇತ್ ಪಾಂಡೆ ಪ್ರಕಾರ, ಘಟನೆಯಲ್ಲಿ ಎಎಸ್‌ಐ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇತರ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೂಲಗಳ ಪ್ರಕಾರ ಕೆಲವು ತಿಂಗಳ ಹಿಂದೆ ಅಶೋಕಕುಮಾರ ಎಂಬ ಬುಡಕಟ್ಟು ವ್ಯಕ್ತಿಯನ್ನು ಸನ್ನಿ ದ್ವಿವೇದಿ ಎಂಬ ವ್ಯಕ್ತಿ ಕೊಂದಿದ್ದಾನೆ ಎಂದು ಕೋಲ್ ಆದಿವಾಸಿಗಳ ಗುಂಪೊಂದು ನಂಬಿತ್ತು. ಅದಕ್ಕಾಗಿ ಅವರು ಸನ್ನಿ ದ್ವಿವೇದಿ ಅವರನ್ನು ಅಪಹರಿಸಿ ಕೊಲ್ಲಲು ಮುಂದಾಗಿದ್ದರು. ಆದರೆ, ವಾಸ್ತವವಾಗಿ ರಸ್ತೆ ಅಪಘಾತದಲ್ಲಿ ಅಶೋಕಕುಮಾರ ಸಾವಿಗೀಡಾಗಿದ್ದರು ಎಂದು ಪೊಲೀಸ್ ದಾಖಲೆಗಳು ದೃಢಪಡಿಸಿವೆ.
ಸನ್ನಿ ದ್ವೀವೇದಿ ಅಪಹರಣದ ಮಾಹಿತಿ ಪಡೆದ ನಂತರ, ಶಹಪುರ ಪೊಲೀಸ್ ಠಾಣೆಯ ಗೃಹ ಅಧಿಕಾರಿ ಸಂದೀಪ್ ಭಾರ್ತಿಯಾ ನೇತೃತ್ವದ ತಂಡವು ದ್ವಿವೇದಿಯನ್ನು ರಕ್ಷಿಸಲು ಗದ್ರಾ ಗ್ರಾಮಕ್ಕೆ ಧಾವಿಸಿತು. ಆದರೆ ಅವರು ಬರುವಷ್ಟರಲ್ಲಿ ಆತನನ್ನು ಕೊಠಡಿಯೊಂದರಲ್ಲಿ ಹೊಡೆದು ಸಾಯಿಸಲಾಗಿತ್ತು. ಪೊಲೀಸರು ಬಾಗಿಲು ತೆರೆದಾಗ ಆದಿವಾಸಿಗಳು ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಗಂಭೀರವಾಗಿ ಗಾಯಗೊಂಡಿದ್ದ ವಿಶೇಷ ಸಶಸ್ತ್ರ ಪಡೆಯ ಎಎಸ್ಐ ಚರಣ ಗೌತಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಭಾರೀ ಭದ್ರತೆ ನಿಯೋಜನೆ…
ಹಿಂಸಾಚಾರ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಅನ್ನು ವಿಧಿಸಲಾಗಿದೆ ಎಂದು ಮೌಗಂಜ್ ಕಲೆಕ್ಟರ್ ಅಜಯ್ ಶ್ರೀವಾಸ್ತವ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಚನಾ ಠಾಕೂರ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ