ದೀದಿಗೆ ಸವಾಲು ; ಟಿಎಂಸಿಯಲ್ಲಿ ‘ಶಿವಸೇನೆ ಮಾದರಿ’ ಬಂಡಾಯ..? ‘ಅಸಲಿ ತೃಣಮೂಲ’ ಬಣ ರಚನೆಗೆ ರೆಬೆಲ್‌ ಶಾಸಕರ ಸಿದ್ಧತೆ ?

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ವಿಧಾನಸಭೆಯಲ್ಲಿ ಪಕ್ಷವು ಇಬ್ಭಾಗವಾಗುವತ್ತ ಹೆಜ್ಜೆ ಇಟ್ಟಿದೆಯೇ ಎಂಬ ಬಲವಾದ ಅನುಮಾನಗಳು ಮೂಡಿವೆ. ವಿಧಾನಸಭೆಯ ವಿಪಕ್ಷದ ನಾಯಕನ (Leader of Opposition) ಆಯ್ಕೆಯ ವಿಷಯವು ಪಕ್ಷದೊಳಗಿನ ಆಂತರಿಕ ಭಿನ್ನಮತವನ್ನು ಬೀದಿಗೆ ತಂದಿದೆ.
ಪಕ್ಷದ ಸುಪ್ರೀಮೋ ಮಮತಾ ಬ್ಯಾನರ್ಜಿ ಅವರ ಆಪ್ತ ಹಾಗೂ ಶಾಸಕ ಶೋಭಂದೇಬ ಚಟ್ಟೋಪಾಧ್ಯಾಯ ಅವರನ್ನು ವಿಪಕ್ಷ ನಾಯಕನ ಹುದ್ದೆಗೆ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಆದರೆ, ಮಮತಾ ಬ್ಯಾನರ್ಜಿ ಅವರ ಈ ತೀರ್ಮಾನದ ವಿರುದ್ಧ ಟಿಎಂಸಿ ಶಾಸಕರ ಒಂದು ದೊಡ್ಡ ಬಣವೇ ದಂಗೆ ಎದ್ದಿದ್ದು, “ಉಚ್ಚಾಟಿತ” ಶಾಸಕ ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಬೆಂಬಲಿಸಲು ನಿರ್ಧರಿಸಿದೆ ಎಂಬ ವರದಿಗಳು ಹೊರಹೊಮ್ಮುತ್ತಿವೆ.
ಬಂಗಾಳದಲ್ಲಿ ‘ಶಿವಸೇನಾ ಮಾದರಿ’ ಬಂಡಾಯ !?
ಈ ಆಂತರಿಕ ಕಲಹ ತಾರಕಕ್ಕೇರುತ್ತಿದ್ದಂತೆ, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಟಿಎಂಸಿ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಆದರೆ, ಈ ಕ್ರಮವು ಪಕ್ಷದೊಳಗಿನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಟಿಎಂಸಿಯ ಅಮಾನತುಗೊಂಡಿರುವ ನಾಯಕ ಹಾಗೂ ಪಕ್ಷದ ಮಾಜಿ ವಕ್ತಾರ ರಿಜು ದತ್ತಾ ಅವರು ಈ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದು, “ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರದ ಶಿವಸೇನೆ  ಮಾದರಿ ಪ್ರಸ್ತುತ ಜಾರಿಯಲ್ಲಿದೆ” ಎಂದು ಪಕ್ಷದಲ್ಲಿನ ಭಿನ್ನಮತದ ಕುರಿತಾಗಿ ಹೇಳಿದ್ದಾರೆ. ಸುಮಾರು 50 ಶಾಸಕರನ್ನು ಒಳಗೊಂಡಿರುವ ಟಿಎಂಸಿಯ ಈ ಬಂಡಾಯ ಬಣವು ವಿಧಾನಸಭೆ ಸ್ಪೀಕರ್ ಮುಂದೆ ತಾವೇ “ನೈಜ ಟಿಎಂಸಿ” ಎಂದು ಮಂಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
“ಟಿಎಂಸಿಯ ಒಟ್ಟು 80 ಶಾಸಕರಲ್ಲಿ ಮೂರನೇ ಎರಡರಷ್ಟು (2/3) ಶಾಸಕರು ಈಗಾಗಲೇ ನಮ್ಮೊಂದಿಗೆ ಕೈಜೋಡಿಸಿರುವುದರಿಂದ, ನಮ್ಮ ಅಭ್ಯರ್ಥಿಯೇ ವಿಧಾನಸಭೆಯ ಅಧಿಕೃತ ವಿರೋಧ ಪಕ್ಷದ ನಾಯಕನಾಗಲಿದ್ದಾರೆ,” ಎಂದು ರಿಜು ದತ್ತಾ ಹೇಳಿದ್ದಾರೆ.
ಅಭಿಷೇಕ ಬ್ಯಾನರ್ಜಿ ವಿರುದ್ಧ ತಿರುಗಿಬಿದ್ದ ಶಾಸಕರು
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದಾಗಿನಿಂದ ಟಿಎಂಸಿ ಒಳಗಿನ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಗಮನಾರ್ಹ ಸಂಗತಿಯೆಂದರೆ, ಅತೃಪ್ತ ಶಾಸಕರ ಕೋಪ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ಮೇಲಿಗಿಂತ ಹೆಚ್ಚಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಅವರ ಕಾರ್ಯವೈಖರಿಯ ಮೇಲಿದೆ ಎಂದು ಕೆಲವು ವರದಿಗಳು ಹೇಳುತ್ತವೆ. ಭಾನುವಾರ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಕರೆಯಲಾಗಿದ್ದ ಪ್ರಮುಖ ಸಭೆಗೆ 80 ಶಾಸಕರ ಪೈಕಿ 60 ಶಾಸಕರು ಗೈರುಹಾಜರಾಗುವ ಮೂಲಕ ತಮ್ಮ ಪ್ರತಿಭಟನೆಯನ್ನು ಬಹಿರಂಗಪಡಿಸಿದ್ದರು. ಪ್ರಸ್ತುತ ಕೋಲ್ಕತ್ತಾದಲ್ಲಿ ಭಿನ್ನಮತೀಯ ಶಾಸಕರನ್ನು ಮನವೊಲಿಸಲು ಮತ್ತು ವಿಧಾನಸಭೆಯಲ್ಲಿ ಪಕ್ಷ ಒಡೆಯದಂತೆ ತಡೆಯಲು ತೀವ್ರ ಕಸರತ್ತುಗಳು ಮತ್ತು ಸರಣಿ ಸಭೆಗಳು ನಡೆಯುತ್ತಿವೆ.
ಸಹಿ ನಕಲು ಆರೋಪ: ಸಿಐಡಿ ತನಿಖೆಗೆ ಸಿಲುಕಿದ ಅಭಿಷೇಕ ಬ್ಯಾನರ್ಜಿ
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ನೇಮಕಾತಿಯ ವಿವಾದಕ್ಕೆ ಮತ್ತೊಂದು ಆಘಾತಕಾರಿ ತಿರುವು ಸಿಕ್ಕಿದೆ. ಶೋಭಂದೇಬ ಚಟ್ಟೋಪಾಧ್ಯಾಯ ಅವರನ್ನು ಬೆಂಬಲಿಸಿ ಸ್ಪೀಕರ್‌ಗೆ ಕಳುಹಿಸಲಾದ ಪತ್ರದಲ್ಲಿ ಕೆಲವು ಟಿಎಂಸಿ ಶಾಸಕರ ಸಹಿಗಳನ್ನು ನಕಲು (Forgery) ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಗಂಭೀರ ಆರೋಪ ಮಾಡಿದ್ದಾರೆ.
 ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ತೃಣಮೂಲ ಕಾಂಗ್ರೆಸ್‌ನ ಭ್ರಷ್ಟಾಚಾರ ಕೇವಲ ಬಂಗಾಳದ ಜನರನ್ನಷ್ಟೇ ಅಲ್ಲ, ಸ್ವಂತ ಪಕ್ಷದ ಶಾಸಕರನ್ನೂ ಬಿಟ್ಟಿಲ್ಲ” ಎಂದು ಹೇಳಿದ್ದಾರೆ. “ಟಿಎಂಸಿ ತನ್ನದೇ ಶಾಸಕರ ಸಹಿಗಳನ್ನು ಕದ್ದಿದೆ. (ಈಗ ಉಚ್ಚಾಟಿತರಾಗಿರವ) ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರೇ ಈ ಬಗ್ಗೆ ದೂರು ನೀಡಿದ್ದಾರೆ. ಇದರಲ್ಲಿ ನಮ್ಮ (ಬಿಜೆಪಿ) ಯಾವುದೇ ಪಾತ್ರವಿಲ್ಲ,” ಎಂದು ಲೇವಡಿ ಮಾಡಿದರು.
ಪಕ್ಷದಿಂದ ಉಚ್ಚಾಟನೆಗೊಂಡ ಶಾಸಕ ಸಂದೀಪನ್ ಸಹಾ ಅವರು ನೇರವಾಗಿ ಅಭಿಷೇಕ ಬ್ಯಾನರ್ಜಿ ಅವರತ್ತ ಬೆರಳು ಮಾಡಿದ್ದು, ಶಾಸಕರ ಪಟ್ಟಿಗೆ ಸಹಿ ಹಾಕಿದ್ದು ಪಕ್ಷದ ಪ್ರಧಾನ ಕಾರ್ಯದರ್ಶಿಯೇ ಎಂದು ಆರೋಪಿಸಿದ್ದಾರೆ. ಸದ್ಯ ಈ ನಕಲಿ ಸಹಿ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಸಿಐಡಿ (CID) ನಡೆಸುತ್ತಿದ್ದು, ಈಗಾಗಲೇ ಹಲವು ಟಿಎಂಸಿ ನಾಯಕರಿಗೆ ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ಅಭಿಷೇಕ ಬ್ಯಾನರ್ಜಿ ಅವರಿಗೂ ಸಿಐಡಿ ಸಮನ್ಸ್ ನೀಡಿದೆ.
‘ಅತ್ತೆ-ಸೋರಳಿಯ ಮಾತ್ರ ಉಳಿಯುತ್ತಾರೆ’: ಬಿಜೆಪಿಯ ವ್ಯಂಗ್ಯ
ಚುನಾವಣಾ ಸೋಲಿನ ನಂತರ ಟಿಎಂಸಿ ತನ್ನ ನಾಯಕರನ್ನು ಹಿಡಿದಿಟ್ಟುಕೊಳ್ಳಲು ತೀವ್ರವಾಗಿ ಹೆಣಗಾಡುತ್ತಿದೆ. ಅಧಿಕಾರ ಕೈತಪ್ಪಿದ ಬೆನ್ನಲ್ಲೇ ಹಲವು ಹಿರಿಯ ನಾಯಕರು ಪಕ್ಷದ ಕಾರ್ಯವೈಖರಿಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಟಿಎಂಸಿಯ ಈ ಆಂತರಿಕ ಬಿಕ್ಕಟ್ಟನ್ನು ಲೇವಡಿ ಮಾಡಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಸಚಿವ ದಿಲೀಪ್ ಘೋಷ್, “ಮುಂದಿನ ದಿನಗಳಲ್ಲಿ ಆ ಪಕ್ಷದಲ್ಲಿ ಕೇವಲ ಅತ್ತೆ ಮತ್ತು ಸೋದರಳಿಯ (ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ ಬ್ಯಾನರ್ಜಿ) ಮಾತ್ರ ಉಳಿಯಲಿದ್ದಾರೆ, ಉಳಿದೆಲ್ಲಾ ನಾಯಕರು ಪಕ್ಷ ತೊರೆಯಲಿದ್ದಾರೆ,” ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ, ನಾಯಕರ ವಲಸೆ, ಸಹಿ ನಕಲು ಪ್ರಕರಣದ ಸಿಐಡಿ ತನಿಖೆ ಮತ್ತು ಶಾಸಕರ ಮಹಾರಾಷ್ಟ್ರ ಮಾದರಿಯ ಬಂಡಾಯದ ಸಂಭವನೀಯತೆಯ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಸದ್ಯ  ಅತ್ಯಂತ ಕಠಿಣ ರಾಜಕೀಯ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement