2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ: ಅಮಿತ್ ಶಾ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಇಂದು, ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿಯ ಬೂತ್ ಅಧ್ಯಕ್ಷರು ಮತ್ತು ಬೂತ್ ಮಟ್ಟದ ಏಜೆಂಟರ ಸಮಾವೇಶದಲ್ಲಿ ಮಾತನಾಡಿದ ಅವರು ಜೆಡಿಎಸ್‌ಗೆ ಮತ ಹಾಕುವುದೆಂದರೆ ಅದು ಕಾಂಗ್ರೆಸ್‌ಗೆ ಮತ ಹಾಕಿದಂತೆ ಎಂದರು.
ಕರ್ನಾಟಕದಲ್ಲಿ ಈ ಬಾರಿ ನೇರ ಹಣಾಹಣಿ ನಡೆಯಲಿದೆ. ಆದರೆ ಪತ್ರಕರ್ತರು ತ್ರಿಕೋನ ಹೋರಾಟ ಎಂದು ಹೇಳುತ್ತಿದ್ದಾರೆ. ಆದರೆ ಜೆಡಿಎಸ್‌ಗೆ ಮತ ಹಾಕುವುದು ಎಂದರೆ ಕಾಂಗ್ರೆಸ್‌ಗೆ ಮತ ಹಾಕಿದಂತೆ. ಆದ್ದರಿಂದ ಇದು ನೇರ ಹೋರಾಟ ಎಂದು ವಿಶ್ಲೇಷಿಸಿದರು.

ಬಿಜೆಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕರ್ನಾಟಕದ ಪಕ್ಷದ ಕಾರ್ಯಕರ್ತರು ಮತ್ತು ಜನರಿಗೆ ಹೇಳಲು ಬಂದಿದ್ದೇನೆ. ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಮತ್ತು ನಾವೇ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.
ಎರಡು ಪಕ್ಷ ಇರುವುದು ಸ್ಪಷ್ಟ. ಒಂದು ಕಡೆ ಬಿಜೆಪಿಯ ರೂಪದಲ್ಲಿ ದೇಶಭಕ್ತರ ಸಂಘಟನೆ ಇದೆ, ಇನ್ನೊಂದು ಕಡೆ ಕಾಂಗ್ರೆಸ್ ನೇತೃತ್ವದಲ್ಲಿ ತುಕಡೇ-ತುಕ್ಡೆ ಗ್ಯಾಂಗ್ ಸೇರಿದೆ. ದೇಶಭಕ್ತರೊಂದಿಗಿರುತ್ತೀರೋ ಅಥವಾ ಈ ದೇಶವನ್ನು ವಿಭಜಿಸಲು ಬಯಸುವ ಜನರನ್ನು ಬೆಂಬಲಿಸುವವರ ಜೊತೆಯಲ್ಲಿರುತ್ತೀರೋ ಎಂಬುದನ್ನು ನಿರ್ಧರಿಸಿ ಎಂದರು.
ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರದಲ್ಲಿ ಬಿಜೆಪಿಯ ಗೆಲುವು ಮತ್ತು ಗುಜರಾತ್‌ನಲ್ಲಿ ಪ್ರಚಂಡ ವಿಜಯದ ಬಗ್ಗೆ ಮಾತನಾಡಿದ ಅಮಿತ್‌ ಶಾ, “ನೀವು ಸರ್ಕಾರ ರಚಿಸಲು ಬಯಸಿದರೆ, ಅಪೂರ್ಣ ಸರ್ಕಾರವನ್ನು ರಚಿಸಬೇಡಿ, ಮೂರನೇ ಎರಡರಷ್ಟು ಬಹುಮತದ ಪೂರ್ಣ ಸರ್ಕಾರ ರಚಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ನಾನು ಕರ್ನಾಟಕದ ಜನರ ಮನಸ್ಥಿತಿಯನ್ನು ನೋಡಿದ್ದೇನೆ. ಜನರು (ನಮ್ಮನ್ನು ಬೆಂಬಲಿಸಲು) ಸಿದ್ಧರಾಗಿದ್ದಾರೆ, ನಾವು ಅವರ ಬಳಿಗೆ ಹೋಗಬೇಕಾಗಿದೆ” ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂದ ಅವರು, ”ಜೆಡಿ(ಎಸ್)ಗೆ ಮತ ಹಾಕಿದರೆ, ಕುಮಾರಸ್ವಾಮಿ(ಜೆಡಿಎಸ್ ನಾಯಕ) ಕಾಂಗ್ರೆಸ್ ಮಡಿಲಲ್ಲಿ ಕೂರುತ್ತಾರೆ, ಬಿಜೆಪಿಗೆ ಸಂಪೂರ್ಣ ಸರ್ಕಾರ ರಚಿಸಲು ಅವಕಾಶ ನೀಡಿ. ಐದು ವರ್ಷಗಳಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಮತ್ತು ಜಾತಿವಾದವನ್ನು ಕೊನೆಗೊಳಿಸಿ ದೇಶಭಕ್ತರ ಸರ್ಕಾರವನ್ನು ನೀಡುತ್ತೇವೆ ಎಂದು ಹೇಳಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರು ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವನ್ನಾಗಿ ಮಾಡಿದರು, ಆದರೆ ಸಂಖ್ಯಾಬಲದ ಕೊರತೆ ಇತ್ತು ಎಂದು ಹೇಳಿದ ಅವರು, ಯಾವಾಗಲೂ ಚುನಾವಣೆಯ ಸಮಯದಲ್ಲಿ ಪರಸ್ಪರ ಸೆಣಸಾಡುವ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಚುನಾವಣೆ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪರಸ್ಪರರ ಒಟ್ಟಾಗಿ ನಡೆಯುತ್ತವೆ ಎಂದು ಹೇಳಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ಪರಸ್ಪರ ಸೆಣಸಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಮ್ಮಿಶ್ರ ಸರ್ಕಾರ ರಚನೆಗೆ ಕೈಜೋಡಿಸಿದ್ದನ್ನು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಮತ್ತು ಸಿಟಿ ರವಿ ಹಲವರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement