ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ವಿದ್ಯಾರ್ಥಿನಿಯರಿಗೆ ಮೂತ್ರ ಬೆರೆಸಿದ ನೀರು ಕುಡಿಸಿದ ಸಹಪಾಠಿ ; ದೂರು ನೀಡಿದರೆ ‘ಬಾಯಿ ರುಚಿ ಕೆಟ್ಟಿದ್ರೆ ಚಾಕೊಲೇಟ್ ತಿನ್ನಿ’ ಎಂದ ಪ್ರಾಂಶುಪಾಲ

ಗುಣಾ: 5ನೇ ತರಗತಿಯ ವಿದ್ಯಾರ್ಥಿಯೊಬ್ಬ ನೀರಿನ ಬಾಟಲಿಗೆ ಮೂತ್ರ ಬೆರೆಸಿ ತನ್ನ ಇಬ್ಬರು ಸಹಪಾಠಿ ವಿದ್ಯಾರ್ಥಿನಿಯರಿಗೆ ಕುಡಿಸಿದ ಆರೋಪ ಮಧ್ಯಪ್ರದೇಶದ ಗುಣಾ ಜಿಲ್ಲೆಯ ಆರೋನ್ ಡೆವಲಪ್‌ಮೆಂಟ್‌ ಬ್ಲಾಕ್‌ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದಾಗ, ಅವರು ಅಸಂವೇದನಾಶೀಲವಾಗಿ ಪ್ರತಿಕ್ರಿಯಿಸಿ, ಬಾಯಿ ಕೆಟ್ಟ ರುಚಿ ಬರುತ್ತಿದ್ದರೆ ₹10ರ ಚಾಕೊಲೇಟ್ ತಿನ್ನುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಸೋಮವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಷಯ ಬೆಳಕಿಗೆ ಬರುತ್ತಿದ್ದಂತೆ ಶಾಲಾ ಆಡಳಿತ ಹಾಗೂ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಗುಣಾ ಜಿಲ್ಲಾಧಿಕಾರಿ ಕಿಶೋರಕುಮಾರ ಕನ್ಯಾಲ್ ಆದೇಶಿಸಿದ್ದು, ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಲಾಗಿದೆ.
“ಕೆಲ ವಿದ್ಯಾರ್ಥಿಗಳು ತಮಗೆ ಬಾಟಲಿಯಲ್ಲಿದ್ದ ಮೂತ್ರವನ್ನು ಕುಡಿಯುವಂತೆ ಮಾಡಿದ್ದಾರೆ ಎಂದು ಇಬ್ಬರು ಬಾಲಕಿಯರು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಪ್ರಾಂಶುಪಾಲರಿಗೆ ದೂರು ನೀಡಿದಾಗ, ‘ಬಾಯಿಗೆ ಕೆಟ್ಟ ರುಚಿ ಬರುತ್ತಿದ್ದರೆ ₹10ರ ಚಾಕೊಲೇಟ್ ತಿನ್ನಿ’ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)

ಘಟನೆಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗುತ್ತಿದ್ದಂತೆ ಆರೋನ್‌ನ ಉಪವಿಭಾಗಾಧಿಕಾರಿ (SDM) ಮಂಜುಷಾ ಖತ್ರಿ ಅವರು ತಹಶೀಲ್ದಾರ್ ಹಾಗೂ ಬ್ಲಾಕ್ ಶಿಕ್ಷಣಾಧಿಕಾರಿ (BEO) ಅವರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿ ಎರಡು ದಿನಗಳೊಳಗೆ ವರದಿ ಸಲ್ಲಿಸುವಂತೆ ಬಿಇಒಗೆ ಸೂಚಿಸಲಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕನ್ಯಾಲ್ ಅವರ ಪ್ರಕಾರ, ಈ ಕೃತ್ಯವನ್ನು ಅದೇ ತರಗತಿಯ ವಿದ್ಯಾರ್ಥಿಯೊಬ್ಬ ನಡೆಸಿದ್ದಾನೆ. ಆತನ ಪೋಷಕರು ಹಾಗೂ ಬಾಲಕನನ್ನು ವಿಚಾರಣೆಗೆ ಕರೆಯಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅಲ್ಲದೆ, ಪ್ರಕರಣದಲ್ಲಿ ಇನ್ನಷ್ಟು ಬಾಲಕರು ಭಾಗಿಯಾಗಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಈ ಘಟನೆಯಿಂದ ಆಕ್ರೋಶಗೊಂಡ ಬಾಲಕಿಯರ ಕುಟುಂಬಸ್ಥರು ಹಾಗೂ ಸ್ಥಳೀಯ ಗ್ರಾಮಸ್ಥರು ಮಂಗಳವಾರ ಶಾಲೆಗೆ ತೆರಳಿ ಪ್ರತಿಭಟನೆ ನಡೆಸಿದರು. ಆರೋಪಿತ ಬಾಲಕರ ವಿರುದ್ಧ ಹಾಗೂ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಲಿಲ್ಲ ಎನ್ನಲಾದ ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಶಾಲಾ ಆವರಣಕ್ಕೆ ಬೀಗ ಹಾಕಿದರು.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಆಗಮಿಸಿದರು. ಬಳಿಕ ಸಂತ್ರಸ್ತ ವಿದ್ಯಾರ್ಥಿನಿಯರು, ಅವರ ಕುಟುಂಬಸ್ಥರು ಹಾಗೂ ಆರೋಪಿತ ವಿದ್ಯಾರ್ಥಿಗಳಿಂದ ಘಟನೆಯ ಕುರಿತು ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು.
ಪ್ರಕರಣದ ತನಿಖೆ ಮುಂದುವರಿದಿದ್ದು, ಬಿಇಒ (BEO) ಸಲ್ಲಿಸುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಮುಖ ಸುದ್ದಿ :-   ಪ್ರಿಯಕರನ ಜೊತೆ ಸೇರಿ ಗಂಡ, 4 ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಂದ ಪತ್ನಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement