ಮೈ ಜುಂ ಎನ್ನುವ ವಿಡಿಯೋ | 2ನೇ ಮಹಡಿಯಿಂದ ಬಿದ್ದ ಬಾಲಕ ; ತಕ್ಷಣವೇ ಓಡಿಬಂದು ಆತನನ್ನು ಹಿಡಿದು ರಕ್ಷಿಸಿದ ಯುವಕ

ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದ ಐದು ವರ್ಷದ ಬಾಲಕನನ್ನು ಯುವಕನೊಬ್ಬ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಾಹಸಮಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಈಜಿಪ್ಟ್‌ನ ಗಿಜಾ ನಗರದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಗಲ್ಫ್ ನ್ಯೂಸ್ ವರದಿ ಪ್ರಕಾರ, ಅಹ್ಮದ್ ರಗಾಬ್ ಎಂಬ ಯುವಕ ಗಿಜಾ ನಗರದ ಅರ್ದ್ ಎಲ್-ಲೆವಾ ಪ್ರದೇಶದ ಅಂಗಡಿಯೊಂದರ ಸಮೀಪ ಇದ್ದಾಗ ಏಕಾಏಕಿ ಕೂಗಾಟ ಮತ್ತು ಅಳುವಿನ ಶಬ್ದ ಕೇಳಿಬಂದಿತು. ತಕ್ಷಣ ಸಮೀಪದ ಕಟ್ಟಡದತ್ತ ಗಮನ ಹರಿಸಿದ ಅವರು, ಮೇಲಿನಿಂದ ಬಾಲಕನೊಬ್ಬ ಕೆಳಗೆ ಬೀಳುತ್ತಿರುವುದನ್ನು ಗಮನಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

ರಗಾಬ್ ತಕ್ಷಣವೇ ಓಡಿ ಹೋಗಿ ಬೀಳುತ್ತಿರುವ ಬಾಲಕನನ್ನು ಹಿಡಿದಿದ್ದಾರೆ. ಕೆಳಗೆ ಬೀಳುವ ವೇಳೆ ಬಾಲಕ ಮೊದಲು ಬಟ್ಟೆ ಒಣಗಿಸಲು ಕಟ್ಟಿದ್ದ ಹಗ್ಗಕ್ಕೆ ತಾಗಿದ್ದರಿಂದ, ರಗಾಬ್‌ಗೆ ಆತನನ್ನು ಹಿಡಿಯಲು ಸ್ವಲ್ಪ ಸಮಯ ದೊರೆಯಿತು. ಕೊನೆಗೆ ಬಾಲಕ ನೆಲಕ್ಕೆ ಅಪ್ಪಳಿಸುವ ಮುನ್ನವೇ ರಗಾಬ್ ಅವನನ್ನು ಹಿಡಿದು ರಕ್ಷಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ರಗಾಬ್, ಎಲ್ಲವೂ ಅತಿ ವೇಗವಾಗಿ ನಡೆದ ಕಾರಣ ತಮ್ಮ ಸುರಕ್ಷತೆಯ ಬಗ್ಗೆ ಯೋಚಿಸಲು ಕೂಡ ಸಮಯ ಸಿಗಲಿಲ್ಲ ಎಂದು ಹೇಳಿದ್ದಾರೆ. ಅಪಾಯದಲ್ಲಿದ್ದ ಬಾಲಕನನ್ನು ಕಂಡ ಕೂಡಲೇ ತಾವು ಸಹಜವಾಗಿ ಪ್ರತಿಕ್ರಿಯೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.
ಅಷ್ಟು ವೇಗವಾಗಿ ತನಗೆ ಹೇಗೆ ಬಾಲಕನನ್ನು ತಲುಪಲು ಸಾಧ್ಯವಾಯಿತು ಎಂಬುದನ್ನು ನಿಖರವಾಗಿ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಇದೇ ರೀತಿಯ ಪರಿಸ್ಥಿತಿ ಮತ್ತೊಮ್ಮೆ ಎದುರಾದರೆ ಅದೇ ರೀತಿ ಪುನರಾವರ್ತಿಸಲು ಸಾಧ್ಯವೇ ಎಂಬುದರ ಬಗ್ಗೆ ತಮಗೆ ಖಚಿತತೆ ಇಲ್ಲ ಎಂದಿದ್ದಾರೆ.

ಈ ವಿಡಿಯೊ ಈಜಿಪ್ಟ್‌ನ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಿಪ್ರವಾಗಿ ಹರಡಿದ್ದು, ರಗಾಬ್ ಅವರ ಸಮಯಪ್ರಜ್ಞೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಪ್ರಶಂಸೆಯ ಕುರಿತು ಮಾತನಾಡಿರುವ ರಗಾಬ್, ಆ ಕ್ಷಣದಲ್ಲಿ ತಮ್ಮ ಮನಸ್ಸಿನಲ್ಲಿದ್ದ ಏಕೈಕ ಉದ್ದೇಶ ಬಾಲಕ ನೆಲಕ್ಕೆ ಬೀಳದಂತೆ ತಡೆಯುವುದಾಗಿತ್ತು ಎಂದು ಹೇಳಿದ್ದಾರೆ.
ಇದರ ಜೊತೆಗೆ, ಚಿಕ್ಕ ಮಕ್ಕಳ ಮೇಲೆ ಪೋಷಕರು ನಿರಂತರ ನಿಗಾ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮಕ್ಕಳು ಏರಬಹುದಾದ ಕುರ್ಚಿಗಳು ಅಥವಾ ಇತರೆ ವಸ್ತುಗಳನ್ನು ಬಾಲ್ಕನಿ ಹಾಗೂ ಕಿಟಕಿಗಳ ಸಮೀಪ ಇಡಬಾರದು ಎಂದು ಪೋಷಕರಿಗೆ ಸಲಹೆಯನ್ನೂ ನೀಡಿದ್ದಾರೆ.

ಪ್ರಮುಖ ಸುದ್ದಿ :-   550 ವರ್ಷಗಳಷ್ಟು ಹಳೆಯ ಹವಾಯಿ ಸಮುದ್ರ ಕಮಾನು ಪತನ; ಸಾಗರ ಪಾಲಾದ ನೈಸರ್ಗಿಕ ಅದ್ಭುತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement