ಇರಾನ್‌ ಯುದ್ಧದ ಬಿಕ್ಕಟ್ಟು ; ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಭಾರಿ ಹೆಚ್ಚಳ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬುಧವಾರ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯನ್ನು ಏರಿಕೆ ಮಾಡಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಮತ್ತು 5 ಕೆಜಿ ಮಿನಿ ಸಿಲಿಂಡರ್‌ಗಳ ದರದಲ್ಲಿ ಈ ಹೆಚ್ಚಳ ಕಂಡುಬಂದಿದೆ.
ನಗರಗಳಿಗೆ ಅನುಗುಣವಾಗಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹195 ರಿಂದ ₹218 ರವರೆಗೆ ಏರಿಕೆಯಾಗಿದೆ. 5 ಕೆಜಿ ಮಿನಿ ಸಿಲಿಂಡರ್ ಬೆಲೆಯಲ್ಲಿ ₹51 ಹೆಚ್ಚಳವಾಗಿದೆ.
ದರಗಳ ಪರಿಷ್ಕರಣೆಯ ನಂತರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ದೆಹಲಿ ಮತ್ತು ಮುಂಬೈನಲ್ಲಿ ಕ್ರಮವಾಗಿ 2,078.50 ಮತ್ತು 2,031 ರೂ.ಗಳಷ್ಟಾಗಿದೆ. ಈ ಎರಡೂ ನಗರಗಳಲ್ಲಿ 195.5 ರೂ.ಗಳಷ್ಟು ಏರಿಕೆಯಾಗಿವೆ. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ, ಬೆಲೆಗಳು ಕ್ರಮವಾಗಿ ಪ್ರತಿ ಸಿಲಿಂಡರ್‌ ಬೆಲೆ ಕ್ರಮವಾಗಿ 2,208 ಮತ್ತು 2,246 ರೂ.ಗಳಿಗೆ ಏರಿದೆ. ಅಂದರೆ ಪ್ರತಿ ಸಿಲಿಂಡರ್‌ಗಳಿಗೆ 218 ಮತ್ತು 203 ರೂ.ಗಳ ಏರಿಕೆಯನ್ನು ಕಂಡವು.

ಬೆಲೆ ಏರಿಕೆಗೆ ಕಾರಣವೇನು?
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಯುದ್ಧವು ಜಾಗತಿಕ ಇಂಧನ ಸರಬರಾಜಿನ ಮೇಲೆ ತೀವ್ರ ಪರಿಣಾಮ ಬೀರಿದೆ. ವಿಶೇಷವಾಗಿ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಮುಚ್ಚಲ್ಪಟ್ಟಿರುವ ಕಾರಣ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು 50% ರಷ್ಟು ಜಿಗಿತ ಕಂಡಿವೆ. ಇದು ಭಾರತೀಯ ತೈಲ ಕಂಪನಿಗಳ ಮೇಲೆ ಒತ್ತಡ ಹೇರಿದ್ದು, ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು ಪ್ರತಿ ಸಿಲಿಂಡರ್ ಬೆಲೆಯನ್ನು ₹114.5 ಹೆಚ್ಚಿಸಲಾಗಿತ್ತು.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

ಸಾಮಾನ್ಯ ಜನರಿಗೆ ಸದ್ಯಕ್ಕೆ ರಿಲೀಫ್:
ಹೋಟೆಲ್, ರೆಸ್ಟೋರೆಂಟ್ ಮತ್ತು ಕೈಗಾರಿಕೆಗಳಿಗೆ ಈ ಬೆಲೆ ಏರಿಕೆ ಬಿಸಿ ತಟ್ಟಲಿದೆಯಾದರೂ, ಮನೆಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ.
ಪೆಟ್ರೋಲ್ ಮತ್ತು ಡೀಸೆಲ್: ಇವುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ₹94.72 ಮತ್ತು ಡೀಸೆಲ್ ₹87.62 ರಂತೆ ಮಾರಾಟವಾಗುತ್ತಿದೆ.
ಇಂಡಿಯನ್ ಆಯಿಲ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳಿಗೆ ಅನುಗುಣವಾಗಿ ಬೆಲೆಗಳನ್ನು ಪರಿಷ್ಕರಿಸುತ್ತವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement