ಅಸ್ಸಾಂನಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿಗೆ ಬಿಗ್ ಶಾಕ್: 3 ಶಾಸಕರು ಸೇರಿ ಐವರು ನಾಯಕರು ಬಿಜೆಪಿಗೆ ಸೇರ್ಪಡೆ

ಗುವಾಹತಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗಿದೆ. ಕಾಂಗ್ರೆಸ್‌ನ ಮೂವರು ಪ್ರಮುಖ ಶಾಸಕರು ಹಾಗೂ ಟಿಎಂಸಿಯ ಓರ್ವ ನಾಯಕ ಇಂದು, ಗುರುವಾರ ಅಧಿಕೃತವಾಗಿ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಶಾಕ್‌ ನೀಡಿದ್ದಾರೆ.
ಗುರುವಾರ ಗುವಾಹತಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಶಾಸಕರುಗಳಾದ ಕಮಲಾಖ್ಯ ಡೇ ಪುರಕಾಯಸ್ಥ (ಕರೀಮಗಂಜ್ ಉತ್ತರ), ಶಶಿಕಾಂತ ದಾಸ್ (ರಾಹಾ) ಮತ್ತು ಬಸಂತ ದಾಸ್ (ಮಂಗಲ್ದೋಯ್) ಅವರು ಬಿಜೆಪಿಗೆ ಸೇರ್ಪಡೆಯಾದರು.

ಇವರ ಜೊತೆಗೆ ಅಸ್ಸಾಂ ಕಾಂಗ್ರೆಸ್ ಮಾಜಿ ಜಂಟಿ ಕಾರ್ಯದರ್ಶಿ ಪಾರ್ಶ ಬೋಬ್ ಕಲಿತಾ ಮತ್ತು ತೃಣಮೂಲ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಕಂಕಣನಾಥ ಅವರು ಕೂಡ ಬಿಜೆಪಿ ಸೇರಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ ಸೈಕಿಯಾ ಮತ್ತು ಕೇಂದ್ರ ಸಚಿವ ಪಬಿತ್ರ ಮಾರ್ಘರಿಟಾ ಅವರ ಸಮ್ಮುಖದಲ್ಲಿ ಈ ನಾಯಕರು ಪಕ್ಷಕ್ಕೆ ಸೇರ್ಪಡೆಯಾದರು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಆಪ್ತರು ಎಂದು ವರದಿಯಾಗಿರುವ ಈ ಮೂವರು ಶಾಸಕರು ಕಳೆದ ಕೆಲವು ವರ್ಷಗಳಿಂದ ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದರು.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಪಕ್ಷಾಂತರದ ಅಲೆ:
ಇತ್ತೀಚೆಗಷ್ಟೇ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿ ಸೇರಿದ್ದರು. ಈಗ ಈ ಮೂವರು ಶಾಸಕರ ಸೇರ್ಪಡೆಯಿಂದ ಕಾಂಗ್ರೆಸ್ ಬಲ ಮತ್ತಷ್ಟು ಕುಸಿದಿದೆ.
2021ರ ಚುನಾವಣೆಯಲ್ಲಿ ಕಮಲಾಖ್ಯ ಅವರು 8,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು. ಬಸಂತ ದಾಸ್ ಅವರು ಮಂಗಲ್ದೋಯ್ ಕ್ಷೇತ್ರದಲ್ಲಿ 24,000ಕ್ಕೂ ಅಧಿಕ ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದರು. ಶಶಿಕಾಂತ ದಾಸ್ ಅವರು ರಹಾ ಕ್ಷೇತ್ರದಲ್ಲಿ 13,058 ಮತಗಳಿಂದ ಜಯಗಳಿಸಿದ್ದರು.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಈ ವರ್ಷದ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement