ಯೂ ಟ್ಯೂಬ್ (You tube) ನೋಡಿ ಬಾಂಬ್ ತಯಾರಿಸುವುದನ್ನು ಕಲಿತ 12ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕಿಯೊಬ್ಬರ ಕುರ್ಚಿಯ ಕೆಳಗೆ ಅದನ್ನು ಇಟ್ಟು ಸ್ಪೋಟಿಸಿದ (Bomb Blast), ಆಘಾತಕಾರಿ ಘಟನೆ ವರದಿಯಾಗಿದೆ.
ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಶಿಕ್ಷಕಿ ಅಪಾಯದಿಂದ ಪಾರಾಗಿದ್ದಾರೆ. ವರದಿಯ ಪ್ರಕಾರ, 12 ನೇ ತರಗತಿಯ ವಿದ್ಯಾರ್ಥಿಗಳ ಗುಂಪೊಂದುಶಿಕ್ಷಕಿಯನ್ನು ಹೆದರಿಸಲು ತರಗತಿಯ ಕುರ್ಚಿಯ ಕೆಳಗೆ ಬಾಂಬ್ ಇರಿಸಿದೆ, ಅದು ಸರಿಯಾಗಿ ಸ್ಫೋಟಿಸಲಿಲ್ಲ. ಹೀಗಾಗಿ ವಿಜ್ಞಾನ ಶಿಕ್ಷಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
12ನೇ ತರಗತಿಯ 13 ವಿದ್ಯಾರ್ಥಿಗಳು ಸೇರಿ ಯೂಟ್ಯೂಬ್ನಲ್ಲಿ ಬಾಂಬ್ ತಯಾರಿಸುವುದನ್ನು ಕಲಿತು ಈ ಕೃತ್ಯ ಎಸಗಿದ್ದಾರೆ. ಈಗ ಪಟಾಕಿಯಂತಹ ಬಾಂಬ್ ಅನ್ನು ಸ್ಫೋಟಿಸಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತುಗೊಳಿಸಲಾದೆ. ಅವರು ಯೂಟ್ಯೂಬ್ ಸಹಾಯದಿಂದ ಸ್ಫೋಟಕಗಳನ್ನು ತಯಾರಿಸಲು ಕಲಿತಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಶಿಕ್ಷಕಿಯು ವಿದ್ಯಾರ್ಥಿಗಳಿಗೆ ಬೈದಿದ್ದಕ್ಕೆ ಪ್ರತಿಯಾಗಿ ವಿದ್ಯಾರ್ಥಗಳ ತಂಡ ಈ ತರಹದ ಕೃತ್ಯಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಚೇಷ್ಟೆಯಿಂದಲೇ ಆಕೆಗೆ ತಕ್ಕ ಪಾಠ ಕಲಿಸಲು ಪ್ಲಾನ್ ಮಾಡಿದರು. ಆಘಾತಕಾರಿ ಸಂಗತಿಯೆಂದರೆ, ವಿದ್ಯಾರ್ಥಿಗಳು ರಿಮೋಟ್ ಕಂಟ್ರೋಲ್ ತರಹದ ಸಾಧನವನ್ನು ಬಳಸಿ ಕುರ್ಚಿಯ ಕೆಳಗೆ ಹಾಕಲಾದ ಸ್ಫೋಟಕ ವಸ್ತುವನ್ನು ಸ್ಫೋಟಿಸಿದ್ದಾರೆ. ಅವರು ವಿದ್ಯಾರ್ಥಿಗಳು ಯೂಟ್ಯೂಬ್ನಲ್ಲಿ ಬಾಂಬ್ ತರಹದ ಕ್ರ್ಯಾಕರ್ ಅನ್ನು ತಯಾರಿಸಲು ಕಲಿತು ಅದನ್ನು ರಿಮೋಟ್ ಕಂಟ್ರೋಲ್ ಸಹಾಯದಿಂದ ಸ್ಪೋಟಿಸಿದರು. ಘಟನೆಯಿಂದ ಬೆಚ್ಚಿಬಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿಲಕ್ಷಣ ಘಟನೆಯ ಬಗ್ಗೆ ವಿಚಾರಿಸಿದರು.
ಹರಿಯಾಣ ಶಿಕ್ಷಣ ಇಲಾಖೆಯು ಅಪಾಯಕಾರಿ ಕೃತ್ಯದಲ್ಲಿ ತೊಡಗಿದ್ದ 13 ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಿದೆ. ಈ ಆತಂಕಕಾರಿ ಘಟನೆಯ ಅನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ಕೂಲಂಕುಷವಾಗಿ ತನಿಖೆ ಆರಂಭಿಸಿದ್ದಾರೆ.
ಆರೋಪಿ ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿ ಬಳಿ ಕ್ಷಮೆಯಾಚಿಸಿದ್ದಾರೆ ಮತ್ತು ತಮ್ಮ ಮಕ್ಕಳು ಭವಿಷ್ಯದಲ್ಲಿ ಇಂತಹ ಕೃತ್ಯವನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದರು. ಶಿಕ್ಷಕಿಯು ವಿದ್ಯಾರ್ಥಿಗಳನ್ನು ಕ್ಷಮಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಗಿಲ್ಲ ಎಂದು ವರದಿಯಾಗಿದೆ.
ಸದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಒಂದು ವಾರದವರೆಗೆ ಅಮಾನತುಗೊಳಿಸಲಾಗಿದ್ದು, ಮುಂದೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ನರೇಶ್ ಮೆಹ್ತಾ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ