50 ಕೆಜಿ ವಿಷ, 30000 ಖಾಲಿ ಕ್ಯಾಪ್ಸುಲ್‌, ಇರಾನ್ ಪ್ರವಾಸ: ಮೊಹರಂನಲ್ಲಿ ಸಾಮೂಹಿಕ ಹತ್ಯೆ ನಡೆಸಲು ಫಯ್ಯಾಜ್ ಪ್ರೇಂಜಿಯ ಭೀಕರ ಸಂಚು !

ಮುಂಬೈ : ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಸುಮಾರು 15 ಸಾವಿರ ಜನರನ್ನು ಹತ್ಯೆ ಮಾಡುವ ಉದ್ದೇಶದಿಂದ ವಿಷಕಾರಿ ಕ್ಯಾಪ್ಸುಲ್‌ಗಳನ್ನು ವಿತರಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಫಯ್ಯಾಜ್ ಪ್ರೇಂಜಿ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನೋವು ನಿವಾರಕ ಮಾತ್ರೆಗಳು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಕ್ಯಾಪ್ಸುಲ್‌ಗಳೆಂದು ಬಿಂಬಿಸಿ ಸಾವಿರಾರು ವಿಷಕಾರಿ ಕ್ಯಾಪ್ಸುಲ್‌ಗಳನ್ನು ಜನರಿಗೆ ಹಂಚುವ ಮೂಲಕ ನೂರಾರು ಜನರನ್ನು ಸಾಯಿಸಲು ಆತ ಯೋಜನೆ ರೂಪಿಸಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರ ಪ್ರಕಾರ, ಫಯ್ಯಾಜ್ ಪ್ರೇಂಜಿ ಸಾವಿರಾರು ಖಾಲಿ ಕ್ಯಾಪ್ಸುಲ್‌ಗಳಲ್ಲಿ ಜಿಂಕ್ ಫಾಸ್ಫೈಡ್ (Zinc Phosphide) ಎಂಬ ವಿಷಕಾರಿ ರಾಸಾಯನಿಕವನ್ನು ತುಂಬಿ, ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರಿಗೆ ಅವುಗಳನ್ನು ನೋವು ನಿವಾರಕ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳೆಂದು ಹೇಳಿ ವಿತರಿಸಲು ಯತ್ನಿಸಿದ್ದ.
ವಿಷಕಾರಿ ಕ್ಯಾಪ್ಸುಲ್ ಸೇವಿಸಿದವರಲ್ಲಿ ಹಲವರು ತೀವ್ರ ಅಸ್ವಸ್ಥರಾಗಿದ್ದಾರೆ. ಕೆಲವರು, ಕ್ಯಾಪ್ಸುಲ್‌ಗಳನ್ನು ವಿಟಮಿನ್ ಮತ್ತು ಇಮ್ಯುನಿಟಿ ಬೂಸ್ಟರ್ ಎಂದು ನಂಬಿ ಸೇವಿಸಿದ್ದಾಗಿ ತಿಳಿಸಿದ್ದಾರೆ. ಮಾತ್ರೆ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಅವರಿಗೆ ವಾಂತಿ ಆರಂಭವಾಗಿ ತೀವ್ರ ಅಸ್ವಸ್ಥತೆ ಉಂಟಾಗಿದೆ. ವರದಿಗಳ ಪ್ರಕಾರ, ಇದುವರೆಗೆ ಕನಿಷ್ಠ 11 ಮಂದಿ ವಿಷಕಾರಿ ಕ್ಯಾಪ್ಸುಲ್ ಸೇವಿಸಿ ಅಸ್ವಸ್ಥರಾಗಿದ್ದು, ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ವಯಂಸೇವಕರನ್ನೂ ಮೋಸಗೊಳಿಸಿದ್ದ ಆರೋಪಿ
ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕ್ಯಾಪ್ಸುಲ್‌ಗಳನ್ನು ಒಬ್ಬನೇ ವಿತರಿಸಲು ಸಾಧ್ಯವಿಲ್ಲವೆಂದು ಅರಿತಿದ್ದ ಫಯ್ಯಾಜ್, ಹಲವು ಸ್ವಯಂಸೇವಕರ ಸಹಾಯವನ್ನೂ ಪಡೆದಿದ್ದಾನೆ. ಆದರೆ ಅವರಿಗೆ ಈ ಕ್ಯಾಪ್ಸುಲ್‌ಗಳು ವಿಷಕಾರಿ ಎಂಬ ವಿಷಯ ತಿಳಿದಿರಲಿಲ್ಲ. ಜನರಿಗೆ ಆರೋಗ್ಯಕರ ಔಷಧಿಗಳನ್ನು ವಿತರಿಸುವ ಪುಣ್ಯದ ಕೆಲಸ ಮಾಡುತ್ತಿದ್ದೀರಿ ಎಂದು ನಂಬಿಸಿ ಅವರಿಂದಲೂ ಕ್ಯಾಪ್ಸುಲ್‌ಗಳನ್ನು ಹಂಚಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಫಯ್ಯಾಜ್ ಪ್ರೇಂಜಿ ಯಾರು?
ಬಂಧಿತ ಫಯ್ಯಾಜ್ ಪ್ರೇಂಜಿ ಮೂಲತಃ ಪುಣೆಯ ವಿಮಾನನಗರ (Viman Nagar) ನಿವಾಸಿಯಾಗಿದ್ದು, ವಿಚ್ಛೇದಿತನಾಗಿದ್ದಾನೆ ಎಂದು ಹೇಳಲಾಗಿದ್ದು,  ಆತ ಪುಣೆಯಲ್ಲಿ ಪೇಂಟಿಂಗ್ ವ್ಯವಹಾರ ನಡೆಸುತ್ತಿದ್ದಾನೆ ಎನ್ನಲಾಗಿದೆ. ಆತನ ತಾಯಿ ಹಾಗೂ ಸಹೋದರಿ ಇರಾನಿನಲ್ಲಿ ವಾಸಿಸುತ್ತಿದ್ದಾರೆ. 2019ರಿಂದ 2025ರವರೆಗೆ ಆತ ಇರಾನ್ ಹಾಗೂ ಇರಾಕ್ ದೇಶಗಳಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ. ಕಳೆದ ಒಂದು ವರ್ಷದಲ್ಲೇ ಈ ಎರಡು ರಾಷ್ಟ್ರಗಳಿಗೆ 19 ಬಾರಿ ಪ್ರಯಾಣಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ, ಆತನ ಆರ್ಥಿಕ ವ್ಯವಹಾರಗಳು, ಮೊಬೈಲ್ ಕರೆಗಳ ದಾಖಲೆಗಳು, ಡಿಜಿಟಲ್ ಸಂವಹನಗಳು ಹಾಗೂ ಸಂಪರ್ಕಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.  ಈ ಸಂಚನ್ನು ಈತ ಒಬ್ಬನೇ ರೂಪಿಸಿದ್ದಾನೆಯೇ ಅಥವಾ ಇದರ ಹಿಂದೆ ದೊಡ್ಡ ಜಾಲ ಅಥವಾ ವಿದೇಶಿ ಸಂಚುಕೋರರ ಕೈವಾಡ ಇದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ಮಾರಣಾಂತಿಕ ಸಂಚು
ತನಿಖೆಯಲ್ಲಿ ಫಯ್ಯಾಜ್ ಅತ್ಯಂತ ವ್ಯವಸ್ಥಿತವಾಗಿ ಈ ಸಂಚು ರೂಪಿಸಿದ್ದಾನೆ ಎಂಬುದು ಬಹಿರಂಗವಾಗಿದೆ. ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದು ಅದನ್ನೇ ತನ್ನ ಕಾರ್ಯಾಚರಣೆಯ ಕೇಂದ್ರವನ್ನಾಗಿ ಬಳಸಿಕೊಂಡಿದ್ದ ಹಾಗೂ ಅಲ್ಲಿಯೇ ಆನ್‌ಲೈನ್ ಮೂಲಕ 50 ಕೆಜಿ ಜಿಂಕ್ ಫಾಸ್ಫೈಡ್ ಹಾಗೂ 30 ಸಾವಿರ ಖಾಲಿ ಕ್ಯಾಪ್ಸುಲ್‌ಗಳನ್ನು ಖರೀದಿಸಿದ್ದಾನೆ ಎನ್ನಲಾಗಿದೆ. ನಂತರ ಹಲವು ದಿನಗಳ ಕಾಲ ಒಂದೊಂದೇ ಕ್ಯಾಪ್ಸುಲ್‌ನಲ್ಲಿ ಸುಮಾರು ಒಂದು ಗ್ರಾಂ ವಿಷ ತುಂಬುವ ಕೆಲಸ ಮಾಡಿದ್ದಾನೆ. ಪೊಲೀಸರು ಡೋಂಗ್ರಿಯಲ್ಲಿದ್ದ ಆತನ ಕೊಠಡಿಯ ಮೇಲೆ ದಾಳಿ ನಡೆಸಿ, ದೊಡ್ಡ ಪ್ರಮಾಣದ ಜಿಂಕ್ ಫಾಸ್ಫೈಡ್ ಹಾಗೂ  ವಿಷ ತುಂಬಿದ್ದ ಸುಮಾರು 15 ಸಾವಿರ ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 30 ಸಾವಿರ ಕ್ಯಾಪ್ಸುಲ್‌ಗಳನ್ನು ತಯಾರಿಸಿ ಮೊಹರಂ ಮೆರವಣಿಗೆಯಲ್ಲಿ ವಿತರಿಸುವುದು ಆತನ ಉದ್ದೇಶವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮೂಲಗಳನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, ವಿಚಾರಣೆ ವೇಳೆ ಫಯ್ಯಾಜ್, “15 ಸಾವಿರ ಜನರನ್ನು ಕೊಲ್ಲಲು ಬಯಸಿದ್ದೆ” ಎಂದು ತಪ್ಪೊಪ್ಪಿಕೊಂಡಿರುವುದಾಗಿ ಹೇಳಲಾಗಿದೆ.
ಜಿಂಕ್ ಫಾಸ್ಫೈಡ್ ಎಂದರೇನು?
ಜಿಂಕ್ ಫಾಸ್ಫೈಡ್ ಒಂದು ಅತ್ಯಂತ ವಿಷಕಾರಿ ಇಲಿ ವಿಷ (Rodenticide) ಆಗಿದ್ದು, ರೈತರು ಬೆಳೆಗಳನ್ನು ಇಲಿಗಳಿಂದ ರಕ್ಷಿಸಲು ಬಳಸುತ್ತಾರೆ. ಆದರೆ ಇದು ಮಾನವನ ದೇಹಕ್ಕೆ ಸೇರಿದರೆ ಅತ್ಯಂತ ಅಪಾಯಕಾರಿಯಾಗಬಹುದು ಹಾಗೂ ಚಿಕಿತ್ಸೆ ಸಿಗದಿದ್ದರೆ ಸಾವಿಗೂ ಕಾರಣವಾಗಬಹುದು.
ಈ ರಾಸಾಯನಿಕ ಹೊಟ್ಟೆಯೊಳಗೆ ಸೇರಿದ ಬಳಿಕ ಅಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಪ್ರತಿಕ್ರಿಯಿಸಿ ಫಾಸ್ಫಿನ್ ಅನಿಲ (Phosphine Gas) ಬಿಡುಗಡೆ ಮಾಡುತ್ತದೆ. ಈ ಅನಿಲ ದೇಹದ ಜೀವಕೋಶಗಳು ಹಾಗೂ ಪ್ರಮುಖ ಅಂಗಾಂಗಗಳ ಮೇಲೆ ನೇರವಾಗಿ ದಾಳಿ ಮಾಡುತ್ತದೆ. ಇದರ ಪರಿಣಾಮವಾಗಿ ತೀವ್ರ ವಾಕರಿಕೆ, ವಾಂತಿ, ಹೊಟ್ಟೆನೋವು, ಅತಿಸಾರ, ತಲೆಸುತ್ತು ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ. ಗಂಭೀರ ಸ್ಥಿತಿಯಲ್ಲಿ ಶ್ವಾಸಕೋಶದಲ್ಲಿ ದ್ರವ ಸಂಗ್ರಹ (Pulmonary Oedema), ಹೃದಯಾಘಾತ, ಯಕೃತ್ ಹಾಗೂ ಮೂತ್ರಪಿಂಡ ವೈಫಲ್ಯ ಉಂಟಾಗಬಹುದು. ಕೇವಲ ಕೆಲವು ನೂರಾರು ಮಿಲಿಗ್ರಾಂ ಪ್ರಮಾಣವೇ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟುಮಾಡಲು ಸಾಕು ಎಂದು ತಜ್ಞರು ತಿಳಿಸಿದ್ದಾರೆ.
ಎಟಿಎಸ್ ಹಾಗೂ ಕೇಂದ್ರ ಸಂಸ್ಥೆಗಳ ತನಿಖೆ ಮುಂದುವರಿಕೆ
ಈ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು, ಎಂಟಿ ಟೆರರಿಸಂ ಸ್ಕ್ವಾಡ್ (ATS) ಹಾಗೂ ಇತರ ಕೇಂದ್ರ ತನಿಖಾ ಸಂಸ್ಥೆಗಳು ಜಂಟಿಯಾಗಿ ನಡೆಸುತ್ತಿವೆ. ವಶಪಡಿಸಿಕೊಂಡಿರುವ ವಿಷಕಾರಿ ಕ್ಯಾಪ್ಸುಲ್‌ಗಳನ್ನು ವಿಧಿವಿಜ್ಞಾನ (ಫೊರೆನ್ಸಿಕ್) ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement