ಮಾಡರ್ನ್‌ ಯುದ್ಧದ ಎಲೆಕ್ಟ್ರಾನಿಕ್‌ ದಾಳಿಗೂ ಬಗ್ಗದ ಚೀನಾ ಅಧ್ಯಕ್ಷರ ಈ ಹೈಟೆಕ್‌ ವಿಮಾನ ; ಇದರಲ್ಲಿದೆ ರಹಸ್ಯಮಯ ಅತ್ಯಾಧುನಿಕ ಭದ್ರತಾ ವ್ಯವಸ್ಥೆ

ನವದೆಹಲಿ: ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರ ಅಧಿಕೃತ ವಿಮಾನ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದೆ. ಇದು ಹೊರನೋಟಕ್ಕೆ ಸಾಮಾನ್ಯ ಬೋಯಿಂಗ್‌ 747-8 ವಿಮಾನದಂತೆಯೇ ಕಂಡರೂ, ಅದರ ಒಳಭಾಗವು ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳು, ಸೈನಿಕ ಮಟ್ಟದ ಸಂವಹನ ತಂತ್ರಜ್ಞಾನ ಮತ್ತು ಐಷಾರಾಮಿ ಸೌಲಭ್ಯಗಳಿಂದ ಕೂಡಿದ “ಹಾರುವ ಕಮಾಂಡ್ ಸೆಂಟರ್‌” ಆಗಿದೆ.
ಚೀನಾ ಅಧ್ಯಕ್ಷ ಜಿನ್‌ಪಿಂಗ್ ಬಳಸುತ್ತಿರುವ ವಿಮಾನವು ಏರ್‌ ಚೈನಾ ಸಂಸ್ಥೆಯ ಮಾರ್ಪಡಿಸಲಾದ ಬೋಯಿಂಗ್‌ 747-8 ಇಂಟರ್‌ಕಾಂಟಿನೆಂಟಲ್‌ ಮಾದರಿಯಾಗಿದೆ. ಇದು ಪ್ರಸ್ತುತ ಚೀನಾದ ಪ್ರಮುಖ ಅಧ್ಯಕ್ಷೀಯ ವಿಮಾನವಾಗಿದ್ದು, ರಾಷ್ಟ್ರದ ಅತ್ಯುನ್ನತ ನಾಯಕರ ಅಧಿಕೃತ ವಿದೇಶ ಪ್ರವಾಸಗಳಿಗೆ ಬಳಸಲಾಗುತ್ತದೆ.
ಈ ವಿಮಾನವು ಮೂಲತಃ 2014ರ ಕೊನೆಯಲ್ಲಿ ಏರ್‌ ಚೈನಾದ ವಾಣಿಜ್ಯ ಪ್ರಯಾಣಿಕ ವಿಮಾನವಾಗಿ ಸೇವೆಗೆ ಸೇರ್ಪಡೆಯಾಗಿತ್ತು. ಆದರೆ 2015ರ ಮೇ ತಿಂಗಳಲ್ಲಿ ಇದನ್ನು ಶಾಶ್ವತವಾಗಿ ವಾಣಿಜ್ಯ ಸೇವೆಯಿಂದ ಹಿಂತೆಗೆದು, ಹಲವು ತಿಂಗಳುಗಳ ಕಾಲ ವಿಶೇಷ ಪರಿವರ್ತನೆ ಕಾರ್ಯಗಳನ್ನು ನಡೆಸಲಾಯಿತು. ಈ ಅವಧಿಯಲ್ಲಿ ವಿಮಾನಕ್ಕೆ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳು, ವಿಶೇಷ ಸಂವಹನ ತಂತ್ರಜ್ಞಾನಗಳು ಹಾಗೂ ಐಷಾರಾಮಿ ವಿಐಪಿ ಒಳಾಂಗಣ ಸೌಲಭ್ಯಗಳನ್ನು ಅಳವಡಿಸಲಾಯಿತು. ಬಳಿಕ 2016ರಲ್ಲಿ ಇದು ಅಧಿಕೃತ ಅಧ್ಯಕ್ಷೀಯ ವಿಮಾನವಾಗಿ ಸೇವೆಗೆ ಸೇರ್ಪಡೆಗೊಂಡಿತು.

ಈ ವಿಮಾನದ ಉದ್ದ 76.4 ಮೀಟರ್‌ಗಳಾಗಿದ್ದು, ಗರಿಷ್ಠ ಟೇಕ್‌ಆಫ್‌ ತೂಕ ಸುಮಾರು 4.42 ಲಕ್ಷ ಕಿಲೋಗ್ರಾಂಗಳಷ್ಟಿದೆ. ನಾಲ್ಕು ಜನರಲ್‌ ಎಲೆಕ್ಟ್ರಿಕ್‌ GEnx-2B67 ಟರ್ಬೊಫ್ಯಾನ್‌ ಎಂಜಿನ್‌ಗಳನ್ನು ಹೊಂದಿರುವ ಈ ವಿಮಾನವು ಗರಿಷ್ಠ ಮ್ಯಾಕ್‌ 0.855 ವೇಗದಲ್ಲಿ, ಅಂದರೆ ಗಂಟೆಗೆ ಸುಮಾರು 982 ಕಿಲೋಮೀಟರ್‌ ವೇಗದಲ್ಲಿ ಸಂಚರಿಸಬಲ್ಲದು.ಒಂದು ಸಲ ಇಂಧನ ತುಂಬಿಸಿದರೆ ಸುಮಾರು 14,500 ಕಿಲೋಮೀಟರ್‌ಗಳಷ್ಟು ದೂರ ಹಾರುವ ಸಾಮರ್ಥ್ಯ ಇದಕ್ಕಿದೆ.
ಈ ವಿಮಾನದ ಅತ್ಯಂತ ಮಹತ್ವದ ವಿಶೇಷತೆ ಎಂದರೆ ಇದರ ಸಂವಹನ ವ್ಯವಸ್ಥೆ. ಉಪಗ್ರಹ ಆಧಾರಿತ, ಸೈನಿಕ ಮಟ್ಟದ ಎನ್‌ಕ್ರಿಪ್ಟೆಡ್‌ (ರಹಸ್ಯೀಕೃತ) ಸಂವಹನ ವ್ಯವಸ್ಥೆಗಳ ಮೂಲಕ ಶೀ ಜಿನ್‌ಪಿಂಗ್ ಅವರು ಭೂಮಿಯ ಯಾವುದೇ ಭಾಗದಲ್ಲಿದ್ದರೂ ಚೀನಾದ ಸರ್ಕಾರ ಮತ್ತು ಸೇನಾ ಕಮಾಂಡ್‌ ಕೇಂದ್ರಗಳ ಜೊತೆ ನಿರಂತರ ಸಂಪರ್ಕದಲ್ಲಿರಬಹುದು.
ಇದರ ಜೊತೆಗೆ, ಕ್ಷಿಪಣಿ ದಾಳಿಗಳನ್ನು ಪತ್ತೆಹಚ್ಚುವ ಮತ್ತು ಅವುಗಳಿಗೆ ಪ್ರತಿರೋಧ ಒದಗಿಸುವ ಅತ್ಯಾಧುನಿಕ ಭದ್ರತಾ ತಂತ್ರಜ್ಞಾನಗಳನ್ನು ವಿಮಾನದಲ್ಲಿ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ಪರಮಾಣು ಯುದ್ಧದ ಸಂದರ್ಭದಲ್ಲೂ ಎಲೆಕ್ಟ್ರಾನಿಕ್‌ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಬಲ್ಲ ಎಲೆಕ್ಟ್ರೋಮ್ಯಾಗ್ನೆಟಿಕ್‌ ಪಲ್ಸ್‌ (ಇಎಂಪಿ) ದಾಳಿಗಳಿಂದ ವಿಮಾನದ ಅವಿಯಾನಿಕ್ಸ್‌ ಹಾಗೂ ಸಂವಹನ ವ್ಯವಸ್ಥೆಗಳನ್ನು ರಕ್ಷಿಸಲು ವಿಶೇಷ ಇಎಂಪಿ ಶೀಲ್ಡಿಂಗ್‌ ವ್ಯವಸ್ಥೆಯೂ ಇದೆ.

ಪ್ರಮುಖ ಸುದ್ದಿ :-   ಭಾರತದ ಕರಾವಳಿ ಪ್ರದೇಶಗಳಿಗೆ 3 ಅತ್ಯಂತ ಪ್ರಬಲ ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ : ಇಸ್ರೋ ಮುನ್ನೆಚ್ಚರಿಕೆ

ಇಎಂಪಿ ಶೀಲ್ಡಿಂಗ್‌ ಎಂದರೆ ಶಕ್ತಿಶಾಲಿ ವಿದ್ಯುತ್ಕಾಂತೀಯ ಅಲೆಗಳ ಹೊಡೆತವನ್ನು ತಡೆಯುವ, ಹೀರಿಕೊಳ್ಳುವ ಅಥವಾ ಬೇರೆಡೆಗೆ ತಿರುಗಿಸುವ ವಸ್ತುಗಳು, ತಡೆಗೋಡೆಗಳು ಹಾಗೂ ಫಿಲ್ಟರ್‌ಗಳ ಸಂಯೋಜನೆಯಾಗಿದೆ. ಇದರಿಂದ ವಿಮಾನದ ಸೂಕ್ಷ್ಮ ಎಲೆಕ್ಟ್ರಾನಿಕ್‌ ಸಾಧನಗಳು ಸುರಕ್ಷಿತವಾಗಿರುತ್ತವೆ.
ಚೀನಾದಲ್ಲಿ ಅಧ್ಯಕ್ಷೀಯ ವಿಮಾನ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ವಿದೇಶ ಪ್ರವಾಸಗಳಿಗಾಗಿ ಕೇವಲ ಚೀನಾ ಅಧ್ಯಕ್ಷರು ಮತ್ತು ಸ್ಟೇಟ್‌ ಕೌನ್ಸಿಲ್‌ ಪ್ರಧಾನಿಯವರಿಗೆ ಮಾತ್ರ ಈ ವಿಶೇಷ ವಿಮಾನ ಬಳಸಲು ಅವಕಾಶವಿದೆ. ಇತರ ಉನ್ನತ ಮಟ್ಟದ ನಾಯಕರು ತಮ್ಮ ಪ್ರವಾಸಗಳಿಗಾಗಿ ಚಾರ್ಟರ್‌ ವಿಮಾನಗಳನ್ನು ಬಳಸುತ್ತಾರೆ.
ಈ ಚಾರ್ಟರ್‌ ವಿಮಾನಗಳು ಸಾಮಾನ್ಯವಾಗಿ ಏರ್‌ ಚೈನಾದ ವಾಣಿಜ್ಯ ಪ್ರಯಾಣಿಕರ ವಿಮಾನಗಳೇ ಆಗಿದ್ದು, ರಾಜತಾಂತ್ರಿಕ ಪ್ರವಾಸಗಳಿಲ್ಲದ ಸಂದರ್ಭದಲ್ಲಿ ಸಾಮಾನ್ಯ ವಾಣಿಜ್ಯ ಸೇವೆಗಳನ್ನು ನಿರ್ವಹಿಸುತ್ತವೆ. ಇದರಿಂದ ವಿಮಾನಯಾನ ಸಂಪನ್ಮೂಲಗಳ ಸಮರ್ಪಕ ಬಳಕೆಯ ಜೊತೆಗೆ ಸರ್ಕಾರಿ ಭೇಟಿಗಳಿಗೆ ಅಗತ್ಯವಾದ ಸೌಲಭ್ಯವೂ ಲಭ್ಯವಾಗುತ್ತದೆ.
ಆದರೆ ಚೀನಾದ ಅಧ್ಯಕ್ಷರಿಗೆ ಯಾವಾಗಲೂ ಇಂತಹ ಶಾಶ್ವತ ಅಧ್ಯಕ್ಷೀಯ ವಿಮಾನ ಇರಲಿಲ್ಲ. 2016ಕ್ಕೂ ಮೊದಲು ಚೀನಾದ ನಾಯಕರು ವಾಣಿಜ್ಯ ಬೋಯಿಂಗ್‌ 747-400 ವಿಮಾನಗಳಲ್ಲಿಯೇ ಪ್ರಯಾಣಿಸುತ್ತಿದ್ದರು. ವಿದೇಶಿ ರಾಜತಾಂತ್ರಿಕ ಭೇಟಿಗಳಿಗೆ ಸುಮಾರು 20 ದಿನಗಳ ಮುಂಚಿತವಾಗಿ ಚೀನಾದ ವಾಯುಪಡೆಯು ಆ ವಿಮಾನಗಳನ್ನು ತಾತ್ಕಾಲಿಕವಾಗಿ ವಿಐವಿ ಕ್ಯಾಬಿನ್‌ಗಳಾಗಿ ಪರಿವರ್ತಿಸುತ್ತಿತ್ತು. ಪ್ರವಾಸ ಮುಗಿದ ನಂತರ ಮತ್ತೆ ಅವುಗಳನ್ನು ಸಾಮಾನ್ಯ ಪ್ರಯಾಣಿಕರ ಆಸನ ವ್ಯವಸ್ಥೆಗೆ ಮರಳಿಸಿ ವಾಣಿಜ್ಯ ಸೇವೆಗೆ ಬಳಸಲಾಗುತ್ತಿತ್ತು.
2015ರಲ್ಲಿ ಶೀ ಜಿನ್‌ಪಿಂಗ್ ಮತ್ತು ಅವರ ಪತ್ನಿ ಪೆಂಗ್‌ ಲಿಯುವಾನ್‌ ಅಮೆರಿಕ ಪ್ರವಾಸ ಕೈಗೊಂಡಾಗಲೂ ಅವರು ವಾಣಿಜ್ಯ ವಿಮಾನವನ್ನೇ ಬಳಸಿದ್ದರು.

ಪ್ರಮುಖ ಸುದ್ದಿ :-   ಭಾರತ–ಚೀನಾ ಸಹಕಾರಕ್ಕೆ ಹೊಸ ಸಂದೇಶ : ‘ಒಬ್ಬರ ಶಕ್ತಿ-ಸಾಮರ್ಥ್ಯದಿಂದ ಮತ್ತೊಬ್ಬರು ಕಲಿಯಬಹುದು’ ಎಂದ ಚೀನಾ ಅಧ್ಯಕ್ಷ

ಇದಕ್ಕೂ ಮೊದಲು ಚೀನಾ ಅಮೆರಿಕದ “ಏರ್‌ ಫೋರ್ಸ್‌ ಒನ್‌” ಮಾದರಿಯ ವಿಶೇಷ ಅಧ್ಯಕ್ಷೀಯ ವಿಮಾನ ಹೊಂದಲು ಪ್ರಯತ್ನಿಸಿತ್ತು. 2001ರಲ್ಲಿ ಅಂದಿನ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ಅವರ ಬಳಕೆಗೆ ಅಮೆರಿಕದ ಸ್ಯಾನ್‌ ಆಂಟೋನಿಯೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷವಾಗಿ ಮಾರ್ಪಡಿಸಲಾದ ವಿಮಾನವೊಂದನ್ನು ಸಿದ್ಧಪಡಿಸಲಾಗಿತ್ತು.
ಆದರೆ ಆ ವಿಮಾನ ಬೀಜಿಂಗ್‌ಗೆ ತಲುಪಿದ ಬಳಿಕ ಅದರೊಳಗೆ 27 ಗುಪ್ತ ಶ್ರವಣ ಸಾಧನಗಳನ್ನು ಅಳವಡಿಸಲಾಗಿತ್ತು ಎಂಬ ಆರೋಪಗಳು ಕೇಳಿಬಂದವು. ಈ ಕುರಿತು ಚೀನಾ ಸರ್ಕಾರ ಅಧಿಕೃತವಾಗಿ ದೃಢೀಕರಿಸಿಯೂ ಇಲ್ಲ, ತಳ್ಳಿಹಾಕಿಯೂ ಇಲ್ಲ. ಆದರೆ ಕೆಲವು ತಿಂಗಳುಗಳ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು “ಚೀನಾದ ಮೇಲೆ ಕದ್ದಾಲಿಕೆ ನಡೆಸುವುದು ಸಂಪೂರ್ಣ ಅನಗತ್ಯ” ಎಂದು ಪ್ರತಿಕ್ರಿಯಿಸಿದ್ದರು.
ಈ ಘಟನೆಯ ನಂತರ ಚೀನಾ ತನ್ನ ಅಧ್ಯಕ್ಷೀಯ ವಿಮಾನಗಳ ಭದ್ರತೆ ಮತ್ತು ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಿದೆ ಎನ್ನಲಾಗುತ್ತದೆ. ಅದರ ಫಲವಾಗಿ ಇಂದಿನ ಬೋಯಿಂಗ್‌ 747-8 ಅಧ್ಯಕ್ಷೀಯ ವಿಮಾನವು ಕೇವಲ ಐಷಾರಾಮಿ ಪ್ರಯಾಣದ ಸಾಧನವಲ್ಲ, ಬದಲಾಗಿ ಭದ್ರತೆ, ಸಂವಹನ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆಗೆ ಸಜ್ಜುಗೊಂಡ ಅತ್ಯಾಧುನಿಕ ಹಾರುವ ಕಮಾಂಡ್‌ ಕೇಂದ್ರವಾಗಿ ರೂಪುಗೊಂಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement