ಮುಂಬೈ: 13 ವರ್ಷದ ಝೈನಾಬ್, ಆಕೆಯ ಅಕ್ಕ ಮತ್ತು ತಾಯಿ ಶನಿವಾರ ರಾತ್ರಿ ಬಿರಿಯಾನಿ ಔತಣವನ್ನು ಸವಿದಿದ್ದರು. ಮಧ್ಯರಾತ್ರಿಯ ನಂತರ, ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಆದರೆ ಭಾನುವಾರ ಮುಂಜಾನೆ ತೀವ್ರ ಅನಾರೋಗ್ಯ ಕಾಣಿಸಿಕೊಂಡು, ಚಿಕಿತ್ಸೆ ಫಲಕಾರಿಯಾಗದೆ ಕುಟುಂಬದ ನಾಲ್ವರೂ ಒಬ್ಬರಾದ ಮೇಲೆ ಒಬ್ಬರಂತೆ ಮೃತಪಟ್ಟ ಬೆಚ್ಚಿಬೀಳಿಸುವಂತಹ ಘಟನೆ ಮುಂಬೈನಲ್ಲಿ ನಡೆದಿದೆ. ಈ ನಾಲ್ವರ ಸಾವು ಆಹಾರ ವಿಷಪೂರಿತ (Food Poisoning) ಕಾರಣದಿಂದ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೊಬೈಲ್ ಬಿಡಿಭಾಗಗಳ ವ್ಯಾಪಾರ ಮಾಡುತ್ತಿದ್ದ 40 ವರ್ಷದ ಅಬ್ದುಲ್ಲಾ ಅಬ್ದುಲ್ ಖಾದರ್, ಅವರ ಪತ್ನಿ ನಸ್ರೀನ್ (35), ಮತ್ತು ಮಕ್ಕಳಾದ ಝೈನಾಬ್ (13) ಹಾಗೂ ಆಯೇಷಾ (16), ಶನಿವಾರ ರಾತ್ರಿ 10:30 ರ ಸುಮಾರಿಗೆ ಇತರ ಐವರು ಸಂಬಂಧಿಕರೊಂದಿಗೆ ಬಿರಿಯಾನಿ ಊಟ ಮಾಡಿದ್ದರು. ಊಟದ ನಂತರ ಪೈಧೋನಿಯಲ್ಲಿರುವ ತಮ್ಮ ಮನೆಗೆ ಮರಳಿದ್ದರು. ಮನೆಗೆ ಬಂದಾಗ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರಾಗಿರಲಿಲ್ಲ.
ತಡರಾತ್ರಿ 1 ಗಂಟೆಯ ಸುಮಾರಿಗೆ ಕುಟುಂಬದವರು ಕಲ್ಲಂಗಡಿ ಹಣ್ಣನ್ನು ತಿಂದಿದ್ದರು. ಮುಂಜಾನೆ 5 ಗಂಟೆಯ ಸುಮಾರಿಗೆ ಎಲ್ಲರಿಗೂ ವಾಂತಿ ಮತ್ತು ಭೇದಿ ಆರಂಭವಾಗಿ ಅನಾರೋಗ್ಯಕ್ಕೀಡಾಗಿದ್ದಾರೆ. ಮೊದಲು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತಾದರೂ, ಪರಿಸ್ಥಿತಿ ಬಿಗಡಾಯಿಸಿದ ಕಾರಣ ತಕ್ಷಣ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು.
ದುರದೃಷ್ಟವಶಾತ್, ಕಿರಿಯ ಮಗಳು ಝೈನಾಬ್ ಭಾನುವಾರ ಬೆಳಿಗ್ಗೆ 10:15 ಕ್ಕೆ ಮೃತಪಟ್ಟರೆ, ನಂತರ ತಾಯಿ ನಸ್ರೀನ್ ಮತ್ತು ಅಕ್ಕ ಆಯೇಷಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ತಂದೆ ಅಬ್ದುಲ್ಲಾ ರಾತ್ರಿ 10:30 ರ ಸುಮಾರಿಗೆ ಕೊನೆಯುಸಿರೆಳೆದರು. “ಅವರು ಆಸ್ಪತ್ರೆಗೆ ಬಂದಾಗ ಅತ್ಯಂತ ಸುಸ್ತಾಗಿದ್ದರು. ಅವರಿಗೆ ತೀವ್ರ ವಾಂತಿ ಮತ್ತು ಭೇದಿಯಾಗುತ್ತಿತ್ತು. ಅವರು ಕಲ್ಲಂಗಡಿ ತಿಂದಿರುವುದಾಗಿ ತಿಳಿಸಿದ್ದರು” ಎಂದು ಕುಟುಂಬಕ್ಕೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರು ಹೇಳಿದ್ದಾರೆ.
ತನಿಖೆ ಚುರುಕು
ಪೊಲೀಸರು ಈ ಬಗ್ಗೆ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆಹಾರ ವಿಷಪೂರಿತವಾಗಿದ್ದೇ ಸಾವಿಗೆ ಕಾರಣವೇ ಎಂಬ ಶಂಕೆ ಇರುವುದರಿಂದ, ಅವರು ತಿಂದಿದ್ದ ಅರ್ಧ ತುಂಡು ಕಲ್ಲಂಗಡಿ ಹಣ್ಣನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.”ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ದೇಹದಿಂದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ತನಿಖೆಗೆ ಕಳುಹಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯ ಆಹಾರ ಮತ್ತು ಔಷಧ ಇಲಾಖೆ (FDA) ಕಲ್ಲಂಗಡಿ ಹಣ್ಣಿನಲ್ಲಿ ಯಾವುದೇ ವಿಷಕಾರಿ ಅಂಶ ಅಥವಾ ಕಲಬೆರಕೆ ಇತ್ತೇ ಎಂದು ಪರಿಶೀಲಿಸುತ್ತಿದೆ. ಜೆಜೆ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗವು ಬ್ಯಾಕ್ಟೀರಿಯಾ ಸೋಂಕಿನ ಬಗ್ಗೆ ಪರೀಕ್ಷೆ ನಡೆಸುತ್ತಿದ್ದು, ಹಿಸ್ಟೋಪಾಥಾಲಜಿ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ