
ಬೆಳಗಾವಿ : ಕೇವಲ 5000 ರೂಪಾಯಿಗಾಗಿ ಯುವ ಗಾಯಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು 22 ವರ್ಷದ ಯುವಕ ಮಾರುತಿ ಅಡಿವೆಪ್ಪ ಲಠ್ಠೆ (22) ಎಂದು ಗುರುತಿಸಲಾಗಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡುಗಳನ್ನು ರಚಿಸಿ ಹಾಡುವ ಮೂಲಕ ಇವರು ಜನಪ್ರಿಯವಾಗುತ್ತಿದ್ದರು. ತನ್ನದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡುಗಳನ್ನು ಕಂಪೋಸ್ ಮಾಡಿ ಹಾಡುತ್ತಿದ್ದರು.
ಇವರಿಗೆ ಉತ್ತರ ಕರ್ನಾಟದಲ್ಲಿ ತನ್ನದೇ ಆದ ಅಭಿಮಾನಿ ಬಳಗ ಇತ್ತು. ಆದರೆ ಇವರನ್ನು ಕೇವಲ 5000 ರೂಪಾಯಿಗಳ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಮಾರುತಿ ತನ್ನ ಸ್ನೇಹಿತನೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದಾಗ ಬೈಕ್ ಅಡ್ಡಗಟ್ಟಿದ ಈರಪ್ಪ ಎಂಬಾತ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈರಪ್ಪ ಬಳಿ ಮಾರುತಿ 50 ಸಾವಿರ ಸಾಲ ಪಡೆದಿದ್ದರಂತೆ. ಬಹುತೇಕ ಸಾಲ ತೀರಿಸಿದ್ದು, 5 ಸಾವಿರ ಮಾತ್ರ ಬಾಕಿ ಇತ್ತು ಎನ್ನಲಾಗಿದೆ. ಇದೀಗ 5 ಸಾವಿರ ರೂಪಾಯಿಗೆ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಆರೋಪಿ ಈರಪ್ಪ ಅಕ್ಕಿವಾಟೆ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದು, ಅದರಲ್ಲಿ 45 ಸಾವಿರ ರೂ. ಹಣ ಹಿಂದಿರುಗಿಸಿದ್ದಾರೆ. ಆದರೆ ತನ್ನ ಹಣವನ್ನು ಮರಳಿಸದ ಕಾರಣ ಕೋಪಗೊಂಡ ಈರಪ್ಪ ಹಾಗೂ ಆತನ ಗ್ಯಾಂಗ್ ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, ನಂತರ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಾರುತಿ ಮೇಲೆ ಕಾರು ಹರಿಸಿದ ದುಷ್ಕರ್ಮಿಗಳ ಕಾರು ಕೂಡ ಪಲ್ಟಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಿರುವ ಪೊಲೀಸರು, ಇತರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ