ಭಾರತಕ್ಕೆ ತನ್ನ ಅಧ್ಯಕ್ಷರ ಅಚ್ಚರಿಯ ಭೇಟಿ ನಂತ್ರ ಪಾಕಿಸ್ತಾನ ಏರ್‌ಪೋರ್ಟ್ ಒಪ್ಪಂದದಿಂದ ಹಿಂದೆ ಸರಿದ ಯುಎಇ

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಅನಿರೀಕ್ಷಿತ ಭಾರತ ಭೇಟಿಯು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ಸಮೀಕರಣಗಳ ಮೇಲೆ ಭಾರಿ ಪರಿಣಾಮ ಬೀರಿದ್ದು, ಇದು ಪಾಕಿಸ್ತಾನಕ್ಕೆ ಪರೋಕ್ಷ ಹಿನ್ನಡೆಯಾಗಿ ಪರಿಣಮಿಸಿದೆ.
ಶೇಖ್ ನಹ್ಯಾನ್ ಅವರ ಮೂರು ಗಂಟೆಗಳ ಭಾರತ ಭೇಟಿಯ ನಂತರ, ಅಬುಧಾಬಿ ಸರ್ಕಾರವು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ತನ್ನ ಯೋಜನೆಯನ್ನು ಕೈಬಿಟ್ಟಿದೆ – ಇದು ಆಗಸ್ಟ್ 2025ರ ಮಾತುಕತೆಗಳಲ್ಲಿ ನಡೆದ ಒಪ್ಪಂದವಾಗಿದೆ. ಆಗಸ್ಟ್ 2025 ರಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಯುಎಇ ಈ ಯೋಜನೆಯಲ್ಲಿ ಆಸಕ್ತಿ ಕಳೆದುಕೊಂಡಿರುವುದೇ ಇದಕ್ಕೆ ಕಾರಣ ಎಂದು ಪಾಕಿಸ್ತಾನದ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.
ಸೌದಿ ಅರೇಬಿಯಾ ಮತ್ತು ಯುಎಇ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯಗಳು ಈ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನವು ಸೌದಿ ಅರೇಬಿಯಾ ಮತ್ತು ಟರ್ಕಿಯೊಂದಿಗೆ ಸೇರಿ ‘ಇಸ್ಲಾಮಿಕ್ ನ್ಯಾಟೋ’ ರಚಿಸಲು ಮುಂದಾಗಿದ್ದರೆ, ಯುಎಇ ಭಾರತದೊಂದಿಗೆ ಹೊಸ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ಪಾಕಿಸ್ತಾನದ ಆಂತರಿಕ ಸಮಸ್ಯೆಗಳು
ಕಳೆದ ನಾಲ್ಕು ದಶಕಗಳಿಂದ ಯುಎಇ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಸಂಬಂಧವಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ವಿಮಾನಯಾನ ಕ್ಷೇತ್ರದಲ್ಲಿನ ಭದ್ರತಾ ಕಳವಳಗಳು, ಪರವಾನಗಿ ವಿವಾದಗಳು ಮತ್ತು ರಾಜಕೀಯ ಹಸ್ತಕ್ಷೇಪದಿಂದಾಗಿ ಪಾಕಿಸ್ತಾನವು ಯುಎಇ ವಿಶ್ವಾಸವನ್ನು ಕಳೆದುಕೊಂಡಿದೆ. ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಭಾರಿ ನಷ್ಟ ಅನುಭವಿಸುತ್ತಿರುವುದು ಮತ್ತು ಅವುಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಯುಎಇ ಈ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.

900 ಭಾರತೀಯ ಖೈದಿಗಳ ಬಿಡುಗಡೆ:
ಪಾಕಿಸ್ತಾನದೊಂದಿಗಿನ ಸಂಬಂಧ ಕ್ಷೀಣಿಸುತ್ತಿದ್ದರೆ, ಭಾರತ ಮತ್ತು ಯುಎಇ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿದೆ.
ಯುಎಇ ಅಧ್ಯಕ್ಷರು ತಮ್ಮ ದೆಹಲಿಗೆ ಭೇಟಿ ನೀಡಿದ ನಂತರ ಯುಎಇ ಜೈಲುಗಳಲ್ಲಿದ್ದ 900 ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದಾರೆ. ಇದು ಭಾರತಕ್ಕೆ ನೀಡಿದ ದೊಡ್ಡ ಗೌರವದ ಸಂಕೇತವಾಗಿದೆ.
ಉಭಯ ದೇಶಗಳ ನಡುವಿನ ಸಂಬಂಧವು ಈಗ ‘ಮಹಾತ್ವಾಕಾಂಕ್ಷೆಯ ಮತ್ತು ಬಹುಆಯಾಮದ’ ಹಂತಕ್ಕೆ ಪ್ರವೇಶಿಸಿದೆ. ಈ ಭೇಟಿಯ ವೇಳೆ ‘ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆ’ಗಾಗಿ (Strategic Defence Partnership) ಪತ್ರಕ್ಕೆ ಸಹಿ ಹಾಕಲಾಗಿದೆ.
ಆರ್ಥಿಕ ಮತ್ತು ಭೌಗೋಳಿಕ ಮೈತ್ರಿ: ಪ್ರಧಾನಿ ಮೋದಿ ಮತ್ತು ಶೇಖ್ ಬಿನ್ ಜಾಯೆದ್ ಅವರ ಮಾತುಕತೆಯು ದೀರ್ಘಕಾಲದ ಭೌಗೋಳಿಕ ಮತ್ತು ಆರ್ಥಿಕ ಹೊಂದಾಣಿಕೆಯ ನೀಲನಕ್ಷೆಯಂತಿದೆ.
ಪಾಕಿಸ್ತಾನದ ಆರ್ಥಿಕ ಅಸ್ಥಿರತೆ ಮತ್ತು ಸೌದಿ ಅರೇಬಿಯಾದತ್ತ ಅದರ ಒಲವು ಯುಎಇಯನ್ನು ಭಾರತದತ್ತ ಮತ್ತಷ್ಟು ಹತ್ತಿರ ತಂದಿದೆ. ಇದು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸುವುದಲ್ಲದೆ, ಮಧ್ಯಪ್ರಾಚ್ಯದಲ್ಲಿ ಹೊಸ ರಾಜತಾಂತ್ರಿಕ ಸಮೀಕರಣಕ್ಕೆ ನಾಂದಿ ಹಾಡಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement