
ಕಠ್ಮಂಡು: ನೇಪಾಳದ ಸಂಸತ್ ಚುನಾವಣೆಯಲ್ಲಿ ಬಲಾಢ್ಯ ರಾಜಕೀಯ ಪಕ್ಷಗಳನ್ನು ಧೂಳೀಪಟ ಮಾಡಿರುವ ಬಾಲೇಂದ್ರ ಶಾ (ಬಾಲೆನ್) ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP), ದೇಶದ ಮುಂದಿನ ಸರ್ಕಾರವನ್ನು ರಚಿಸಲು ಸಜ್ಜಾಗಿದೆ.
ರಾಪರ್ ಹಾಗೂ ರಾಜಕಾರಣಿ 35 ವರ್ಷದ ಬಾಲೇಂದ್ರ ಶಾ, ಝಾಪಾ-5 ಕ್ಷೇತ್ರದಲ್ಲಿ ನಾಲ್ಕು ಬಾರಿ ನೇಪಾಳದ ಪ್ರಧಾನಿಯಾಗಿದ್ದ ಸಿಪಿಎನ್-ಯುಎಂಎಲ್ ನಾಯಕ ಕೆ.ಪಿ. ಶರ್ಮಾ ಓಲಿ ಅವರನ್ನು ಸುಮಾರು 50,000 ಮತಗಳ ಬೃಹತ್ ಅಂತರದಿಂದ ಸೋಲಿಸಿದ್ದಾರೆ.
ಬಾಲೇಂದ್ರ ಶಾ ಅವರು ನೇಪಾಳದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಷ್ಟೇ ಅಲ್ಲದೆ, ಹಿಮಾಲಯದ ಈ ರಾಷ್ಟ್ರದ ಅತ್ಯುನ್ನತ ಪದವಿ ಅಲಂಕರಿಸಲಿರುವ ಮೊದಲ ಮಧೇಸಿ ಸಮುದಾಯದ ನಾಯಕ ಇವರಾಗಲಿದ್ದಾರೆ.

ಒಟ್ಟು 165 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಪಕ್ಷಗಳ ಬಲಪ್ರದರ್ಶನ ಇಂತಿದೆ:
ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP): 106 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ನೇಪಾಳಿ ಕಾಂಗ್ರೆಸ್: 15 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು, 3 ರಲ್ಲಿ ಮುನ್ನಡೆ ಸಾಧಿಸಿದೆ.
ಯುಎಂಎಲ್ (UML): 7 ಕ್ಷೇತ್ರಗಳಲ್ಲಿ ಜಯಗಳಿಸಿದೆ ಹಾಗೂ 3 ರಲ್ಲಿ ಮುನ್ನಡೆ ಸಾಧಿಸಿದೆ.
ಎನ್‌ಸಿಪಿ (NCP): 6 ಸ್ಥಾನಗಳಲ್ಲಿ ಜಯಗಳಿಸಿದೆ ಹಾಗೂ 2 ರಲ್ಲಿ ಮುನ್ನಡೆ ಸಾಧಿಸಿದೆ.
ಚುನಾವಣಾ ಪ್ರಕ್ರಿಯೆ:
ಮಾರ್ಚ್ 5 ರಂದು ನಡೆದ ಪ್ರತಿನಿಧಿ ಸಭೆಯ ಚುನಾವಣೆಯಲ್ಲಿ ಶೇಕಡಾ 60 ರಷ್ಟು ಮತದಾನ ದಾಖಲಾಗಿದೆ. ಒಟ್ಟು 275 ಸಂಸತ್ ಸದಸ್ಯರ ಪೈಕಿ 165 ಸದಸ್ಯರನ್ನು ನೇರ ಮತದಾನದ ಮೂಲಕ ಮತ್ತು ಉಳಿದ 110 ಸದಸ್ಯರನ್ನು ಅನುಪಾತದ (Proportionate method) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ನೇಪಾಳದಲ್ಲಿ ಯಶಸ್ವಿಯಾಗಿ ಚುನಾವಣೆ ನಡೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಜನತೆಗೆ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, “ಈ ಐತಿಹಾಸಿಕ ಮೈಲಿಗಲ್ಲು ನೇಪಾಳದ ಪ್ರಜಾಪ್ರಭುತ್ವದ ಪಯಣದಲ್ಲಿ ಹೆಮ್ಮೆಯ ಕ್ಷಣವಾಗಿದೆ. ಆಪ್ತ ಸ್ನೇಹಿತ ಮತ್ತು ನೆರೆಯ ರಾಷ್ಟ್ರವಾಗಿ, ನೇಪಾಳದ ಹೊಸ ಸರ್ಕಾರದೊಂದಿಗೆ ಕೈಜೋಡಿಸಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಹೊಸ ಎತ್ತರವನ್ನು ತಲುಪಲು ಭಾರತ ಬದ್ಧವಾಗಿದೆ.” ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ