ಬೇಡ್ತಿ, ಅಘನಾಶಿನಿ, ವರದಾ ನದಿ ಜೋಡಣೆ ಕೈಬಿಡಲು ಒತ್ತಾಯಿಸಿ ಕಾಗೇರಿ, ಹೆಬ್ಬಾರ ನೇತೃತ್ವದಲ್ಲಿ ಸಿಎಂ ಬಳಿ ನಿಯೋಗ:ನಿರ್ಣಯ

ಶಿರಸಿ:ನಗರದ ಟಿಆರ್‌ ಸಿ ಸಭಾಂಗಣದಲ್ಲಿ ಬುಧವಾರ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬೇಡ್ತಿ, ಅಘನಾಶಿನಿ, ವರದಾ ನದಿ ಜೋಡಣೆ ಯೋಜನೆಗಳ ಸಾಧಕ- ಬಾಧಕ ಕುರಿತ ಸಮಾಲೋಚನಾ ಕಾರ್ಯಾಗಾರದಲ್ಲಿ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ನದಿ ಜೋಡಣೆ ಯೋಜನೆ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿ ನಿರ್ಣಯ ಸ್ವೀಕರಿಸಲಾಯಿತು.
ಅಲ್ಲದೆ, ರಾಜ್ಯ ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ ಒಯ್ಯಲು ಸಹ ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೆ ಶೀಘ್ರವೇ ದಿನಾಂಕ ನಿಗದಿ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಇದಲ್ಲದೆ, ರಾಜ್ಯ ನೀರಾವರಿ ಇಲಾಖೆ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಕುರಿತು ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರದ ಎನ್.ಡಬ್ಲ್ಯು.ಡಿ.ಎ.ಗೆ ನೀಡಿರುವ ಆದೇಶ ರದ್ದುಪಡಿಸಬೇಕು. ಸ್ಥಳ ಸಮೀಕ್ಷೆಗೆ ಅವಕಾಶ ನೀಡಬಾರದು. ಪಶ್ಚಿಮಘಟ್ಟದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ದಿಕ್ಕು ತಿರುಗಿಸುವ ಕುರಿತು ಅಧ್ಯಯನ ಮಾಡಲು ರಾಜ್ಯ ನೀರಾವರಿ ಇಲಾಖೆ ಎನ್.ಡಬ್ಲ್ಯು.ಡಿ.ಎ.ಗೆ ನೀಡಿರುವ ಆದೇಶ ಹಿಂಪಡೆಯುವುದರ ಜೊತೆಗೆ ರದ್ದುಪಡಿಸಬೇಕು.  ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳು, ಗ್ರಾಮ ಪಂಚಾಯಿತಿಗಳು ಈ ಯೋಜನೆ ಪ್ರಸ್ತಾವನೆಯನ್ನು ಸರ್ಕಾರ ಕೈ ಬಿಡುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕು. ಇದೇ ರೀತಿ ಸಹಕಾರಿ ಸಂಸ್ಥೆಗಳು, ಗ್ರಾಮೀಣ ಅಭಿವೃದ್ಧಿ, ಕೃಷಿ ಕಿಸಾನ್, ರೈತ, ವನವಾಸಿ ಸಂಘಟನೆಗಳು ಸರ್ಕಾರಕ್ಕೆ ಮನವಿ ನೀಡಬೇಕು. ಜತೆ, ತಮ್ಮ ವ್ಯಾಪ್ತಿಯಲ್ಲಿ ನದಿ ಜೋಡಣೆ ಯೋಜನೆ ದುಷ್ಪರಿಣಾಮಗಳ ಕುರಿತು ಜಾಗೃತಿ ಸಭೆ ನಡೆಸಬೇಕು.  ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿ ನದಿಗಳು ಸೇರಿದಂತೆ ಪಶ್ಚಿಮಘಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ನದಿ ತಿರುವು ಅಥವಾ ಜೋಡಣೆ ಯೋಜನೆ ಕೈಬಿಡಬೇಕು ಎಂದು ಕಾರ್ಯಗಾರದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಂಘಟಕ ನಾರಾಯಣ ಹೆಗಡೆ ಗಡೀಕೈ ನಿರ್ಣಯ ಮಂಡಿಸಿದರು.
ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರಾಗಿರುವ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ,ಬಯಲುಸೀಮೆ ಪ್ರದೇಶದ ಜನರಿಗೆ ಕುಡಿಯುವ ನೀರು ನೀಡಬಾರದು ಎಂಬುದು ನಮ್ಮ ಆಶಯವಲ್ಲ. ಆದರೆ ಮಲೆನಾಡು, ಬಯಲುಸೀಮೆ ಜನರಿಗೆ ಅಗತ್ಯವಾಗಿ ನೀರು ಸಿಗುವ ಯೋಜನೆ ಜಾರಿಗೆ ಸರ್ಕಾರ ವೈಜ್ಞಾನಿಕವಾಗಿ ಚಿಂತಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕುಡಿಯುವ ನೀರು ಪೂರೈಸಲು ಪರ್ಯಾಯ ಮಾರ್ಗ ರೂಪಿಸುವ ಬದಲು ನೀರಿಲ್ಲದ ನದಿಗಳ  ಜೋಡಣೆ ಹೇಗೆ ಶಾಶ್ವತ ಪರಿಹಾರ ಆಗಬಲ್ಲದು ಎಂಬ ಪ್ರಶ್ನೆ ಮೂಡುತ್ತಿದೆ. ತಕ್ಷಣದ ಪರಿಹಾರದ ಬದಲಾಗಿ ದೀರ್ಘಾವದಿ ಪರಿಣಾಮಗಳ ಅವಲೋಕನ, ಆಲೋಚನೆ ಅಗತ್ಯ. ಅದಿಲ್ಲದಿದ್ದರೆ ಸಾಮಾನ್ಯ ಜನರು ಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದ ಶ್ರೀಗಳು ಹಸಿರು ಕವಚ ಹೆಚ್ಚಿರುವಲ್ಲಿ ಮಳೆ, ನೀರು, ಅಂತರ್ಜಲ ಹೆಚ್ಚಿರುತ್ತದೆ. ಹಾಗಾಗಿ ಹಸಿರೀಕರಣ, ಮಳೆ ನೀರು ಕೊಯ್ಲಿನಂಥ ಯೋಜನೆ ಇನ್ನಷ್ಟು ಚುರುಕಾಗಿ ಮಾಡಬೇಕೇ ವಿನಾ ನದಿ ಜೋಡಣೆ ಸರಿಯಲ್ಲ.ಪರಿಸರ ಕಾಲಕಹಿಯ ವಿಜ್ಞಾನಿಗಳ ಮಾತಿಗೆ ಆದ್ಯತೆ ನೀಡುವ ಕಾಲ ಸನ್ನಿಹಿತವಾಗಿದೆ. ಜನರ ಜತೆ ಸರ್ಕಾರಗಳು ಕೂಡ ವಿಜ್ಞಾನಿಗಳ ಹೇಳಿಕೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಮಾತನಾಡಿ, ಸರ್ಕಾರಗಳು ಅವುಗಳಿಗೆ ಬೇಕಾದ ಯೋಜನೆ ಅನುಷ್ಠಾನ ಮಾಡುತ್ತವೆ ಹೊರತು ಯೋಜನೆ ಅಧ್ಯಯನ  ವರದಿಯಾಧರಿಸಿ ಕ್ರಮವಹಿಸುವುದಿಲ್ಲ. ಎತ್ತಿನಹೊಳೆಯಿಂದ ಕೋಲಾರಕ್ಕೆ ೧ ಟಿಎಂಸಿ ನೀರು ಕೊಂಡೊಯ್ಯಲು ೨೪ ಸಾವಿರ ಕೋಟಿ ವೆಚ್ಚ ಮಾಡುವ ಸರ್ಕಾರದ ನೀತಿ ಜನರಿಗೆ ನೀರು ಕೊಡುವುದಲ್ಲ ಬದಲಾಗಿ ಹಣ ಲೂಟಿ ಮಾಡುವುದಾಗಿದೆ. ಯಾವುದೇ ಯೋಜನೆ ಜಾರಿಗೊಳಿಸುವಾಗ ಅದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ನದಿಪಾತ್ರಗಳ ಜಲಾನಯನ ಪ್ರದೇಶಗಳ ಅರಿವು, ವಿಷಯ ಜ್ಞಾನವು ಯೋಜನೆ ಅನುಷ್ಠಾನ ಮಾಡುವವರಿಗೆ ಇಲ್ಲದಿರುವುದು ದುರಂತದ ಸಂಗತಿ ಎಂದರು.  ನದಿ ಜೋಡಿಸುವ ಬದಲು ನೀರಿನ ಅಲಭ್ಯತೆ ಇರುವ ಪ್ರದೇಶಗಳಲ್ಲಿ ಅರಣ್ಯ ಬೆಳೆಸುವ ಕಾರ್ಯ ಅಗಬೇಕು. ಕೆರೆಗಳ ಪುನಶ್ಚೇತನ ಮಾಡಬೇಕು.ಬತ್ತಿದ ನದಿಗಳ ಜಲಾನಯನ ಅಭಿವೃದ್ಧಿಗೆ ಒತ್ತು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ವಿವಿಧ ಸಂರಕ್ಷಣಾ ಕವಚದ ಜತೆ ಅತಿಸೂಕ್ಷ್ಮ ಪರಿಸರ ವಲಯ ಹೊಂದಿರುವ ಬೇಡ್ತಿ, ಅಘನಾಶಿನಿ, ವರದಾ ಪ್ರದೇಶಗಳಲ್ಲಿ ನದಿ ಜೋಡಣೆಗೆ ಪೂರಕ ವಾತಾವರಣವಿಲ್ಲ. ಇದನ್ನು ಸರ್ಕಾರಕ್ಕೆ ಮನದಟ್ಟು ಮಾಡಬೇಕಿದೆ ಎಂದರು
ಕಾರ್ಯಾಗಾರದ ದಿಕ್ಸುಚಿ ಭಾಷಣ ಮಾಡಿದ ಪರಿಸರ ವಿಜ್ಞಾನಿ ಹಾಗೂ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಮಾತನಾಡಿ,ಬಾಯಾರಿದವರಿಗೆ ನೀರು ಕೊಡಬಹುದು ಆದರೆ ದಾಹ ಇದ್ದವರಿಗೆ ನೀರು ಕೊಡುವುದು ಅಧರ್ಮ  ಎಂದು ಅಭಿಪ್ರಾಯಪಟ್ಟರು.

ಈ ನಿಟ್ಟಿನಲ್ಲಿ ನದಿಗಳ ಉಳಿವಿಗೆ ಮಾನವನಿಗೆ ಮಾನವ ಹಕ್ಕು ನೀಡಿದ ರೀತಿಯಲ್ಲಿಯೇ ನದಿಗಳಿಗೂಕಾನೂನು ರೀತಿ ಹಕ್ಕು ನೀಡಲು ಹಕ್ಕೊತ್ತಾಯ ಮಾಡಬೇಕು ಎಂದರು. ತನ್ನ ಸುತ್ತಮುತ್ತಲಿನ ಪರಿಸರ, ಭೂಮಿ, ಜಲ ಪ್ರದೇಶದ ರಕ್ಷಣೆಯು ನನ್ನ ಧರ್ಮವಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಉಳಿವು ಸ್ಥಳೀಯರ ಪ್ರಯತ್ನದ ಮೇಲಿದೆ. ಆದರೆ ಅವುಗಳಿಗೆ ಧಕ್ಕೆಯಾದರೆ  ಎಂತಹ ತ್ಯಾಗಕ್ಕೂ ಮುಂದಾಗಬೇಕು ಎಂದರು.

ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಸ್ವಾಗತಿಸಿದರು. ಮಧುಮತಿ ಹೆಗಡೆ ನಿರೂಪಿಸಿದರು. ನಂತರ ಹಲವಾರು ಪರಿಸರ ಕಾರ್ಯಕರ್ತರು, ಸಾರ್ವಜನಿಕರು, ರೈತರು,  ಉದ್ಯಮಿಗಳಿಂದ ಅಭಿಪ್ರಾಯ ಮಂಡನೆ ನಡೆಯಿತು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

 

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement