ಐ-ಪಿಎಸಿ ಪ್ರಕರಣ | ತನಿಖೆಯಲ್ಲಿ ಹಸ್ತಕ್ಷೇಪ ಮಾಡಿ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳಬೇಡಿ”: ಮಮತಾಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜಕೀಯ ಸಲಹೆಗಾರರ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿದ್ದ ದಾಳಿಯ ವೇಳೆ ಹಸ್ತಕ್ಷೇಪ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ವಿವಾದವು ಕೇವಲ ‘ಕೇಂದ್ರ ಮತ್ತು ರಾಜ್ಯದ ನಡುವಿನ ಒಕ್ಕೂಟ ವ್ಯವಸ್ಥೆಯ ವಿವಾದ’ (Federal Dispute) ಎಂಬ ಪಶ್ಚಿಮ ಬಂಗಾಳ ಸರ್ಕಾರದ ವಾದವನ್ನು ನ್ಯಾಯಾಲಯವು ತಳ್ಳಿಹಾಕಿದೆ.
ನ್ಯಾಯಮೂರ್ತಿ ಪ್ರಶಾಂತಕುಮಾರ ಮಿಶ್ರಾ ಹಾಗೂ ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಈ ಬಗ್ಗೆ ಮೌಖಿಕವಾಗಿ ಗಂಭೀರ ಟಿಪ್ಪಣಿ ಮಾಡಿದೆ. “ಅಧಿಕಾರದಲ್ಲಿರುವ ಮುಖ್ಯಮಂತ್ರಿಯೊಬ್ಬರು ಕೇಂದ್ರ ತನಿಖಾ ಸಂಸ್ಥೆಯ ನಡೆಯುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದು ವೈಯಕ್ತಿಕ ಕೃತ್ಯವಾಗುತ್ತದೆ. ಇದನ್ನು ಕೇಂದ್ರ-ರಾಜ್ಯಗಳ ನಡುವಿನ ವಿವಾದ ಎಂದು ಬಣ್ಣಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
“ಯಾವುದೇ ರಾಜ್ಯದ ಮುಖ್ಯಮಂತ್ರಿ ತನಿಖೆಯ ಮಧ್ಯೆ ಪ್ರವೇಶಿಸಿ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ. ಹಾಗೆ ಮಾಡಿ, ಬಳಿಕ ಇದನ್ನು ಕೇಂದ್ರ ಮತ್ತು ರಾಜ್ಯದ ನಡುವಿನ ವಿವಾದ ಎಂದು  ಹೇಳಲಾಗದು,” ಎಂದು ನ್ಯಾಯಮೂರ್ತಿ ಮಿಶ್ರಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?
ತೃಣಮೂಲ ಕಾಂಗ್ರೆಸ್‌ನ ರಾಜಕೀಯ ಸಲಹಾ ಸಂಸ್ಥೆಯಾದ I-PAC ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಇಡಿ ಮತ್ತು ಅದರ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಂವಿಧಾನದ ವಿಧಿ 32ರ ಅಡಿಯಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದು ಮೂಲಭೂತ ಹಕ್ಕುಗಳ ಜಾರಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಾಗರಿಕರಿಗೆ ಅವಕಾಶ ನೀಡುತ್ತದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ ಕೋರ್ಟ್ ಈ ಅವಲೋಕನ ಮಾಡಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

ಇ.ಡಿ. ಮಾಡಿದ ಗಂಭೀರ ಆರೋಪಗಳು
ಇ.ಡಿ. ಅಧಿಕಾರಿಗಳ ಪ್ರಕಾರ, ತನಿಖೆ ನಡೆಯುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರು ರಾಜ್ಯದ ಅಧಿಕಾರಿಗಳೊಂದಿಗೆ I-PAC ಕಚೇರಿ ಮತ್ತು ಅದರ ಸಂಸ್ಥಾಪಕ ಪ್ರತೀಕ್ ಜೈನ್ ಅವರ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿದ್ದರು. ಅಷ್ಟೇ ಅಲ್ಲದೆ, ಅಲ್ಲಿಂದ ಒಂದು ಲ್ಯಾಪ್‌ಟಾಪ್, ಫೋನ್ ಮತ್ತು ಹಲವಾರು ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಏಜೆನ್ಸಿ ಆರೋಪಿಸಿದೆ.
ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ, ಈ ಅರ್ಜಿಯ ಮಾನ್ಯತೆಯನ್ನು ಪ್ರಶ್ನಿಸಿದರು. “ಇದು ರಾಜ್ಯ ಮತ್ತು ಕೇಂದ್ರದ ನಡುವಿನ ಅಸಮಾಧಾನವಾಗಿದ್ದು, ಇದನ್ನು ವಿಧಿ 31ರ ಅಡಿಯಲ್ಲಿ ಸಿವಿಲ್ ದಾವೆಯ ಮೂಲಕ ಬಗೆಹರಿಸಿಕೊಳ್ಳಬೇಕೇ ಹೊರತು, ಮೂಲಭೂತ ಹಕ್ಕುಗಳ ಜಾರಿಗೆ ಇರುವ ವಿಧಿ 32ರ ಅಡಿಯಲ್ಲಲ್ಲ,” ಎಂದು ವಾದಿಸಿದರು.

ಆದರೆ, ನ್ಯಾಯಮೂರ್ತಿ ಮಿಶ್ರಾ ಅವರು ಈ ವಾದವನ್ನು ಒಪ್ಪಲಿಲ್ಲ. “ಸೀರ್ವೈ ಆಗಲಿ ಅಥವಾ ಅಂಬೇಡ್ಕರ್ ಆಗಲಿ, ಅಧಿಕಾರದಲ್ಲಿರುವ ಮುಖ್ಯಮಂತ್ರಿಯೊಬ್ಬರು ತಾವೇ ಕಚೇರಿಗೆ ನುಗ್ಗಿ ತನಿಖೆಗೆ ಅಡ್ಡಿಪಡಿಸುವ ಇಂತಹ ಪರಿಸ್ಥಿತಿಯನ್ನು ಈ ದೇಶದಲ್ಲಿ ಎಂದಿಗೂ ಕಲ್ಪಿಸಿಕೊಂಡಿರಲಿಲ್ಲ,” ಎಂದರು.
ಪಶ್ಚಿಮ ಬಂಗಾಳದ ನೆಲದ ವಾಸ್ತವದ ಬಗ್ಗೆ ನಾವು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದು ಅಸಾಧಾರಣವಾದ ಮೊಕದ್ದಮೆಯಾಗಿದೆ. ಇದು ಕೇವಲ ರಾಮ ಮತ್ತು ಶ್ಯಾಮ ನಡುವಿನ ವ್ಯಾಜ್ಯವಲ್ಲ. ಸಾಮಾಜಿಕ ಮತ್ತು ರಾಜಕೀಯ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೀಠ ಹೇಳಿತು. ಈ ಪ್ರಕರಣವನ್ನು 5 ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement