ಅಯೋಧ್ಯಾ : ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ಅರ್ಪಿಸಿದ ಕಾಣಿಕೆ ಹಣವನ್ನು ಕಳುವು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಈ ಪ್ರಕರಣದಲ್ಲಿ ಎಂಟು ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಇವರಲ್ಲಿ ಆರು ಮಂದಿ ದೇವಸ್ಥಾನದ ನಗದು ಎಣಿಕೆ ವಿಭಾಗದ ಉದ್ಯೋಗಿಗಳಾಗಿದ್ದಾರೆ. ಆರೋಪಿಗಳು ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಂಧಿತರನ್ನು ಅನುಕಲ್ಪ ಮಿಶ್ರಾ, ಲವಕುಶ ಮಿಶ್ರಾ, ಅವಿನಾಶ ಶುಕ್ಲಾ, ರಾಮಶಂಕರ ಮಿಶ್ರಾ, ರಮಾಶಂಕರ ಯಾದವ್, ಮನೀಶ ಯಾದವ್, ಸುಭಾಷಚಂದ್ರ ಶ್ರೀವಾಸ್ತವ ಮತ್ತು ಕರುಣೇಶ ಪಾಂಡೆ ಎಂದು ಗುರುತಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಸುಮಾರು 7 ರಿಂದ 7.5 ಕೋಟಿ ರೂಪಾಯಿ ಕಾಣಿಕೆ ಹಣ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಕಾಣಿಕೆ ಹಣ ದುರುಪಯೋಗವಾಗುತ್ತಿರುವ ಕುರಿತು ಸಮಾಜವಾದಿ ಪಕ್ಷ ಮೊದಲು ಧ್ವನಿ ಎತ್ತಿತ್ತು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಸೇರಿದಂತೆ ಹಲವು ನಾಯಕರು, ಕೋಟ್ಯಂತರ ರೂಪಾಯಿ ದೇಣಿಗೆ ಹಣ ನಾಪತ್ತೆಯಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಈ ವಿಷಯದಲ್ಲಿ ಟ್ರಸ್ಟ್ ಮತ್ತು ಸರ್ಕಾರ ಮೌನ ವಹಿಸಿರುವುದನ್ನು ಪ್ರಶ್ನಿಸಿ, ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು.
ಆರಂಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು “ರಾಮ ಮಂದಿರದ ವರ್ಚಸ್ಸಿಗೆ ಮಸಿ ಬಳಿಯಲು ಮತ್ತು ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆ ತರಲು ಹರಡುತ್ತಿರುವ ವದಂತಿಗಳು” ಎಂದು ಹೇಳಿತ್ತು. ಆದರೂ ಸತ್ಯಾಸತ್ಯತೆಯನ್ನು ಹೊರತರಲು ತನಿಖೆ ನಡೆಸುವಂತೆ ಸರ್ಕಾರವನ್ನು ಕೋರಿತ್ತು.
ಇದಕ್ಕೆ ಸ್ಪಂದಿಸಿದ ಸರ್ಕಾರ, ಕೂಡಲೇ ಲಕ್ನೋ ವಿಭಾಗೀಯ ಕಮಿಷನರ್ ವಿಜಯವಿಶ್ವಾಸ ಪಂತ್, ಪೊಲೀಸ್ ಐಜಿ ಕಿರಣ ಎಸ್. ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ತನಿಖೆಗೆ ಆದೇಶಿಸಿತ್ತು. ಈ ತಂಡವು ಕಳೆದ ಮಂಗಳವಾರ ತನ್ನ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಕಠಿಣ ಕ್ರಮಗಳಿಗೆ ಬಲವಾದ ಶಿಫಾರಸುಗಳನ್ನು ಮಾಡಲಾಗಿತ್ತು ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ